Site icon Vistara News

ಮೊಟ್ಟೆಯಿಂದ ಕಾಂಗ್ರೆಸ್‌ಗೆ ಮತ್ತೆ ಶಕ್ತಿ ಬಂದಿದೆ: ಅಭಿನಂದನೆ ಸಲ್ಲಿಸಿದ ರಮೇಶ್‌ ಕುಮಾರ್‌

congress protest freedom park

ಬೆಂಗಳೂರು: ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಕೈಕಾಲು ಸೋತು ಮಲಗಿದ್ದ ಕಾಂಗ್ರೆಸ್‌ಗೆ, ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆಯಾಗಿ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದದ್ದು ಮತ್ತೆ ಶಕ್ತಿ ನೀಡಿದೆ ಎಂದು ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಕಾರಿಗೆ ಕೊಡಗಿನಲ್ಲಿ ಮೊಟ್ಟೆ ಎಸೆದದ್ದನ್ನು ಪ್ರತಿಭಟಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆಯ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹಿಂದೂಪರ ಸಂಘಟನೆಗಳು ನಡೆದುಕೊಂಡ ರೀತಿ ಪ್ರಜಾಪ್ರಭುತ್ವಕ್ಕೆ ತಕ್ಕುದಲ್ಲ. ಸಿದ್ದರಾಮಯ್ಯ ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದಲ್ಲ, ಸಾಮಾನ್ಯ ಮನುಷ್ಯನಾಗಿಯೂ ಹೋಗಿದ್ದಲ್ಲ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿ ಕೊಡಗು ಜನರ ಕಷ್ಟ ನಷ್ಟಗಳನ್ನು ತಿಳಿದುಕೊಳ್ಳಲು ಹೋಗಿದ್ದರು. ಹಿಂದೂಪರ ಸಂಘಟನೆಗಳಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಚುನಾವಣೆ ಬಂದರೆ ಮೊಟ್ಟೆ ಎಸೆದವರು ಯಾರೂ ಕ್ಯಾಂಡಿಟೇಟ್ ಆಗಿರುವುದಿಲ್ಲ, ಅವರಲ್ಲಿ ಅದಕ್ಕೇ ಬೇರೆ ಬೇರೆ ಟೀಂ ಇದೆ.

ಮೊಟ್ಟೆ ಎಸೆಯೋದಕ್ಕೆ ಒಂದು ಟೀಂ, ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಐಡಿ ಮಾಡುವುದಕ್ಕೆ ಒಂದು ಟೀಂ, ಚುನಾವಣೆ ಮಾಡುವುದಕ್ಕೆ ಒಂದು ಟೀಂ ಇದೆ. ಗೋಡ್ಸೆ ಗಾಂಧಿಯನ್ನು ಹೇಗೆ ಕೊಂದ? ಎದುರು ಬಿದ್ದು ಹೋರಾಟ ಮಾಡುವುದು ಅವರಿಗೆ ಗೊತ್ತಿಲ್ಲ. ನಾವು ಬಿಜೆಪಿಯನ್ನು ಬೈದರೆ ಪ್ರಯೋಜನ ಇಲ್ಲ. ಮೊಟ್ಟೆ ಎಸೆಯೋ ಪದಾರ್ಥ ಏನ್ರೀ? ಅದು ತಿನ್ನೋ ಪದಾರ್ಥ. ಅದನ್ನು ಎಸೆಯುತ್ತಾರೆ ಎಂದರೆ ಇವರು ಮೂರ್ಖರು. ಮೂರ್ಖರು ದೇಶ ನಡೆಸುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರನ್ನು ಕಂಡು ಬಿಜೆಪಿಯವರಿಗೆ ತಡೆಯಲು ಆಗುತ್ತಿಲ್ಲ ಎಂದ ರಮೇಶ್‌ ಕುಮಾರ್‌, ಬಿಜೆಪಿಯವರು ಇನ್ನಷ್ಟು ಮೊಟ್ಟೆ ಎಸೆಯಲಿ. ಮೊಟ್ಟೆ ಹೊಡೆದವನಿಗೆ ಅಭಿನಂದನೆ ಸಲ್ಲಿಸಬೇಕು. ಆಗಸ್ಟ್ 3 ರಂದು ಸಿದ್ದರಾಮೋತ್ಸವ, ಆಗಸ್ಟ್ 15 ರಂದು ಸ್ವಾತಂತ್ರ್ಯ ನಡೆಗೆ ಮಾಡಿ ಕೈ ಕಾಲು ಬಿದ್ದು ಮಲಗಿದ್ದೆವು. ನೀವು ಮೊಟ್ಟೆ ಹೊಡೆದು, ನಮ್ಮನ್ನು ಎದ್ದು ಬರುವಂತೆ ಮಾಡಿದ್ದೀರಿ. ಮುಂದಿನ ವಾರ ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಿ. ಚುನಾವಣೆ ಬರುoವವರೆಗೂ ಕೇಶವ ಕೃಪಾದವರು ಈ ರೀತಿ ಘಟನೆಗಳಿಗೆ ಪ್ಲ್ಯಾನ್ ಮಾಡಲಿ. ನೀವು ಮಾಡಿದಷ್ಟೂ ನಾವು ಎದ್ದು ಬರುತ್ತೇವೆ ಎಂದರು.

ಪ್ರಧಾನಿ ಮೋದಿ ಬೇನಾಮಿ ಆಸ್ತಿ

ಮಾಜಿ ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಮಾತನಾಡಿ, ಬಿಜೆಪಿ, ಆರ್‌ಎಸ್‌ಎಸ್ ಮಹಾನ್ ರಾಷ್ಟ್ರಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಬಿಜೆಪಿಯವರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಹಿಂದೆ ಪ್ರಧಾನಿ‌ ಮೋದಿ ರಾಜ್ಯಕ್ಕೆ ಬಂದು ೧೦% ಸರ್ಕಾರ ಎಂದಿದ್ದರು. ಈ ಹೇಳಿಕೆಗೆ ನೂರು ಕೋಟಿ ರೂ. ಮಾನನಷ್ಟ ನೋಟಿಸ್ ಕೊಟ್ಟಿದ್ದೆವು. ಆರೋಪವನ್ನು ಸಾಬೀತುಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ. ೪೦% ಲಂಚ ಪಡೆಯುವುದನ್ನು ನಾವು ಎಲ್ಲೂ ಕೇಳಿರಲಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಖುದ್ದು ಮೋದಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮೋದಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಆದಾನಿ, ಅಂಬಾನಿ ಆದಾಯ ಮಾತ್ರ ಹೆಚ್ಚಾಗುತ್ತಿದೆ, ಬಹುಶಃ ಮೋದಿಯವರ ಬೇನಾಮಿ ಆಸ್ತಿ ಆದಾನಿ, ಅಂಬಾನಿ ಬಳಿ ಸೇರುತ್ತಿದೆ ಎನ್ನಿಸುತ್ತದೆ ಎಂದು ಆರೋಪಿಸಿದರು.

ಆರ್‌ಎಸ್‌ಎಸ್‌ನವರು ಕದ್ದು ಮೊಟ್ಟೆ ತಿಂತಾರೆ

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಜ್ಞಾನ ಇಲ್ಲದ ಗೃಹ ಮಂತ್ರಿ ಆರಗ ಜ್ಞಾನೇಂದ್ರ. ಅತ್ಯಂತ ಭ್ರಷ್ಟ ಮಂತ್ರಿ ಇದ್ದರೆ ಅದು ಹೋಂ ಮಿನಿಸ್ಟರ್. ಮೊದಲು ಜೈಲಿಗೆ ಹೋಗಬೇಕಾದ ವ್ಯಕ್ತಿ ಏನಾದರೂ ಇದ್ದರೆ ಅದು ಗೃಹ ಮಂತ್ರಿ. ಆರ್ ಎಸ್ ಎಸ್ ಬಿಜೆಪಿಯವರು ಮೊಟ್ಟೆ ಕದ್ದು ತಿನ್ನುತ್ತಾರೆ. ರಸೆಲ್ ಮಾರ್ಕೆಟ್‌ಗೆ ಹೋಗಿ ನೋಡಿ, ಕದ್ದು ಮಾಂಸ ತಿನ್ನುತ್ತಾ ಇರುತ್ತಾರೆ.

ಖಾಕಿ ಚಡ್ಡಿ ಕರಿ ಟೋಪಿಯವರು ಲಾಠಿ ಹಿಡಿದುಕೊಂಡು ನಮ್ಮನ್ನು ಭಯ ಬೀಳಿಸಲು ಪ್ರಯತ್ನ ಮಾಡುತ್ತಾರೆ, ಆದರೆ ನಾವು ಭಯ ಬೀಳುವವರಲ್ಲ. ಇವರಿಗೆ ಮಾಡುವುದಕ್ಕೆ ಏನೂ ಕೆಲಸ ಇಲ್ಲ. ಧರ್ಮದ ಹೆಸರಲ್ಲಿ ಅಫೀಮ್ ಅಲ್ಲ ವಿಷ ಕುಡಿಸಿದ್ದಾರೆ. ಸಿದ್ದರಾಮಯ್ಯ ಮೇಲೆ ಮಾಡಿದ ಹಲ್ಲೆ ಖಂಡನೀಯ. ಮಿಸ್ಟರ್ ಬೊಮ್ಮಾಯಿ ಆರ್‌ಎಸ್‌ಎಸ್ ಕೈಗೊಂಬೆ ಆಗಿ ಕುಳಿತಿದ್ದಾರೆ. ಅವರು ಕ್ಷಮೆ ಕೇಳುವುದು ಯಾವ ಲೆಕ್ಕಕ್ಕೂ ಇಲ್ಲ. ಅಮಿತ್ ಶಾ ಮೊದಲು ಕ್ಷಮೆ ಕೇಳಬೇಕು ಎಂದರು.

ಇದನ್ನೂ ಓದಿ | ಸಿದ್ದರಾಮಯ್ಯ ವಿರುದ್ಧ ಚಿಕ್ಕಮಗಳೂರಿನಲ್ಲೂ ಕಪ್ಪು ಬಾವುಟ ಪ್ರದರ್ಶನ

Exit mobile version