ಬೆಂಗಳೂರು: ಈ ಸರ್ಕಾರ ಇನ್ನೂ 10 ವರ್ಷ ಬಲಿಷ್ಠವಾಗಿರುತ್ತದೆ. ನಮ್ಮ ಸರ್ಕಾರವನ್ನು 10 ಜನ್ಮ ಎತ್ತಿ ಬಂದರೂ ಬೀಳಿಸಲು ಸಾಧ್ಯವಿಲ್ಲ. ಮಂತ್ರದಿಂದ ಮಾವಿನಕಾಯಿ ಉದುರಲ್ಲ. ಹೊಟ್ಟೆ ಉರಿ ಬಂದರೆ ಔಷದ ಕಳುಹಿಸುತ್ತೇವೆ, ಡಾಕ್ಟರ್ ಇದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿಲ್ಲ. ಈ ಸರ್ಕಾರವನ್ನು (Congress Protest) ಉಳಿಸಿಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.
ರಾಜ್ಯಪಾಲರ ನಡೆ ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಅವರು, ಜನರಿಂದ ಜನರಿಗೋಸ್ಕರ ಬಂದ ಸರ್ಕಾರ ಇದು. ಈ ಸರ್ಕಾರಕ್ಕೆ ಪ್ರಮಾಣವಚನ ಬೋಧನೆ ಮಾಡಿದ್ದು ಇದೇ ಗವರ್ನರ್. ಈಗ ಯಾಕೆ ಒಳಸಂಚು ನಡೆಸುತ್ತಿದ್ದೀರಿ? ಸಂವಿಧಾನ ಕಾಪಾಡಬೇಕೇ ಹೊರತು ದುರುಪಯೋಗ ಮಾಡಿಕೊಳ್ಳಬಾರದು. ನಿಮ್ಮ ಖುರ್ಚಿಗೆ ಕಳಂಕ ತರಬಾರದು. ನಿಮಗೆ ಯಾರಾದರೂ ತನಿಖೆ ಮಾಡಿ ಎಂದು ವರದಿ ಕೊಟ್ಟಿದ್ದಾರಾ? ಯಾವುದಾದರೂ ಅಧಿಕಾರಿ ತನಿಖಾ ರಿಪೋರ್ಟ್ ಕೊಟ್ಟಿದ್ದಾರಾ ಎಂದು ರಾಜ್ಯಪಾಲರಿಗೆ ಪ್ರಶ್ನಿಸಿದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನತಾ ದಳದ ಅಗ್ರಗಣ್ಯ ನಾಯಕ, ನವರಂಗಿ ನಕಲಿ ಸ್ವಾಮಿ, ಬರೀ ಬುರುಡೇ ಬಿಟ್ಟುಕೊಂಡು ಇರುತ್ತಾರೆ. ಲೋಕಾಯುಕ್ತ ವರದಿ ಇದ್ದರೂ ನವರಂಗಿ ನಕಲಿ ಸ್ವಾಮಿ ವಿರುದ್ಧ ಯಾಕೆ ಪ್ರಾಸಿಕ್ಯೂಷನ್‌ಗೆ ಕೊಡಲಿಲ್ಲ? ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಕೇವಲ ಡಿ.ಕೆ.ಶಿವಕುಮಾರ್ ನಿಂತಿಲ್ಲ, ಕಟ್ಟಕಡೆಯ ಕಾರ್ಯಕರ್ತರ ರಕ್ಷೆ ಇದೆ ಎಂದು ಹೇಳಿದರು.
ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಪ್ರಾಸಿಕ್ಯೂಷನ್ ಧಿಕ್ಕರಿಸಿ ನಮಗೆ ನ್ಯಾಯ ಸಿಗುವ ನಂಬಿಕೆ ಇದೆ. ನಮ್ಮ ಹೋರಾಟ ಇಲ್ಲಿಗೇ ಮುಗಿಯುವುದಿಲ್ಲ. ಸರ್ಕಾರವನ್ನು ಯಾರೂ ಕೂಡ ಕಿತ್ತು ಹಾಕಲು ಸಾಧ್ಯವಿಲ್ಲ. ನಾವೆಲ್ಲ ಒಗ್ಗಟ್ಟಿನಿಂದ ನಿಂತು ಸಿದ್ದರಾಮಯ್ಯಗೆ ಧೈರ್ಯ ತುಂಬಿದ್ದೇವೆ. ಬಿಜೆಪಿ ಕೈಗೆ ಯಾಕೆ ಅಧಿಕಾರ ಬರಲಿಲ್ಲ? ಹೀಗಾಗಿ ಸರ್ಕಾರ ಬೀಳಿಸಲು ಒಂದು ಹೆಜ್ಜೆ ಟ್ರೈ ಮಾಡಿದರು, ಆ ರೀತಿ ಆಗಿಲ್ಲ, ಮುಂದೆಯೂ ಆಗುವುದಿಲ್ಲ. ಅದಕ್ಕೆ ಈ ರೀತಿ ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ | Muda Scam: ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್; ರಿಟ್ ಅರ್ಜಿ ವಿಚಾರಣೆ ಆ.29ಕ್ಕೆ ಮುಂದೂಡಿದ ಹೈಕೋರ್ಟ್
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪಕ್ಷ, ವಿವಿಧ ಸಂಘಟನೆಗಳು, ಬುದ್ಧಿಜೀವಿಗಳು ಪ್ರತಿಭಟನೆ ಮಾಡುತ್ತಿದ್ದಾರೆ, ಅದು ಮುಂದುವರಿಯಬೇಕು. ಸಿಎಂ ಸಿದ್ದರಾಮಯ್ಯ ಪರವಾಗಿ ನಿಲ್ಲುವ ಕರ್ತವ್ಯ ನಮಗಿದೆ. ಸಿದ್ದರಾಮಯ್ಯ ಪರವಾಗಿ ಹೈಕಮಾಂಡ್ ಸಹ ಗಟ್ಟಿಯಾಗಿ ನಿಲ್ಲಬೇಕು. ಹೈಕಮಾಂಡ್ ಕೂಡ ಗಟ್ಟಿಯಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಬೇಕು. ನಾವೆಲ್ಲ ಸಚಿವರೂ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಬೇಕು. ಇಲ್ಲದಿದ್ದರೆ ನಾಳೆ ತೆಲಂಗಾಣ ಸಿಎಂನೂ ಇಳಿಸ್ತಾರೆ, ಮತ್ತೊಂದು ರಾಜ್ಯದ ಸಿಎಂನೂ ಇಳಿಸ್ತಾರೆ. ರಾಜ್ಯದ 34 ಸಚಿವರ ವಿರುದ್ಧವೂ ಹೀಗೆಯೇ ಆರೋಪ ಮಾಡಿ ಇಳಿಸುತ್ತಾರೆ, ಇಳಿಯಬೇಕಾಗುತ್ತದೆ. ಅದಕ್ಕಾಗಿ ಸಿದ್ದರಾಮಯ್ಯ ಪರವಾಗಿ ಗಟ್ಟಿಯಾಗಿ ನಾವು ನಿಲ್ಲಬೇಕು ಎಂದರು.