Site icon Vistara News

Agnipath | ಅಗ್ನಿಪಥ್ ವಿರೋಧಿಸಿ 27ಕ್ಕೆ ರಾಜ್ಯದೆಲ್ಲೆಡೆ ಕಾಂಗ್ರೆಸ್ ಪ್ರತಿಭಟನೆ: ರಾಮಲಿಂಗಾರೆಡ್ಡಿ ಹೇಳಿದ್ದೇನು?

Minister Ramalingareddy File Photo

ಬೆಂಗಳೂರು: ಸೇನಾ ನೇಮಕಾತಿ ಸಂಬಂಧಿಸಿದ ಅಗ್ನಿಪಥ್ (Agnipath) ಯೋಜನೆ ವಿರೋಧಿಸಿ ಕಾಂಗ್ರೆಸ್‌ನಿಂದ ಜೂ.27ರಂದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಆ ದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೂ ಆಯಾ ಶಾಸಕರು, ಪರಾಜಿತ ಅಭ್ಯರ್ಥಿಗಳು, ಸಂಸದರು ಹಾಗೂ ಸ್ಥಳೀಯ ನಾಯಕರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ನಗರದ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು. ಇದು ನಿಜವೇ ಆಗಿದ್ದರೇ ಕಳೆದ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗ ನೀಡಬೇಕಿತ್ತು. ಆದರೆ ನೀಡಲಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲೇ 60 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಈ ವಿಚಾರವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈಗ 10 ಲಕ್ಷ ಉದ್ಯೋಗ ಭರ್ತಿ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನವಿರೋಧಿ ಯೋಜನೆಗಳ ಮೂಲಕ ದೇಶವನ್ನು ಹಂತ ಹಂತವಾಗಿ ನಾಶ ಮಾಡಲು ಹೊರಟಿದೆ. ದೇಶ ಕಾಯುವ ಯೋಧರನ್ನು ಗುತ್ತಿಗೆ ಕಾರ್ಮಿಕರಂತೆ ಬಿಜೆಪಿ ಮಾಡುತ್ತಿದೆ. ಆಮೂಲಕ ಭವಿಷ್ಯದ ಜತೆ ಆಟವಾಡುತ್ತಿರುವುದು ದುರಂತ. ಇವರು 23 ವರ್ಷದ ನಂತರ ಏನು ಮಾಡಬೇಕು? ಈ ವಿಚಾರವಾಗಿ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು ಅಗ್ನಿವೀರರನ್ನು ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ ಕೊಡುವುದಾಗಿ ಹೇಳಿದ್ದಾರೆ. ಇದು ದೇಶದ ಸೈನಿಕರ ಕುರಿತು ಬಿಜೆಪಿ ನಾಯಕರ ಮನಸ್ಥಿತಿಗೆ ಸಾಕ್ಷಿ. ಬಿಜೆಪಿಯ ನಾಯಕರ ಮಕ್ಕಳು ಅಗ್ನಿವೀರರಾಗಿ ಬಿಜೆಪಿ ಕಚೇರಿಯ ಗಾರ್ಡ್ ಆಗುತ್ತಾರಾ ಎಂದು ಪ್ರಶ್ನಿಸಿದರು.

ಈ ಯೋಜನೆಯಲ್ಲಿ ಸೇನೆ ಸೇವಾ ಅವಧಿ ಕೇವಲ 4 ವರ್ಷ ಮಾತ್ರ. ಯೋಧರಿಗೆ ಸೇನೆಯಲ್ಲಿ ಶ್ರೇಣಿ ಇಲ್ಲ, ಪಿಂಚಣಿ ಇಲ್ಲ, ಉದ್ಯೋಗ ಭದ್ರತೆ ಇಲ್ಲವಾಗಿದೆ. ಸೇವೆ ನಂತರ 11 ಲಕ್ಷ ನೀಡುವುದಾಗಿ ತಿಳಿಸಿದ್ದು, ಅದರ ಜತೆಗೆ ಬ್ಯಾಂಕ್‌ಗಳಲ್ಲಿ ಸಾಲ ನೀಡುತ್ತಾರಂತೆ. ಈ ಸರ್ಕಾರ ಎಲ್ಲರನ್ನು ಸಾಲಗಾರರನ್ನಾಗಿ ಮಾಡಲು ಪಣ ತೊಟ್ಟಿದೆಯೇ? ರಾಜ್ಯಗಳು ಜಿಎಸ್‌ಟಿ ಪಾಲು ಕೇಳಿದರೆ ಸಾಲ ಕೊಡುತ್ತೇವೆ ಎನ್ನುತ್ತಾರೆ, ಕೇಂದ್ರ ಸರ್ಕಾರ ಎಲ್ಲ ಜನರನ್ನು ಸಾಲಗಾರರನ್ನಾಗಿ ಮಾಡಿದೆ ಎಂದರು.

ಇಂತಹ ಪರಿಸ್ಥಿತಿಯಲ್ಲಿ ಸೇನೆಗೆ ಸೇರುವವರು ಯಾವ ಮನಸ್ಥಿತಿಯಲ್ಲಿ ಗಡಿ ಕಾಯುತ್ತಾರೆ? ಅರೆಕಾಲಿಕ ಸೈನಿಕರನ್ನು ನೇಮಿಸಿಕೊಂಡರೆ ದೇಶಕ್ಕೆ ಭದ್ರತೆ ಇರುತ್ತದೆಯೇ? ಮಕ್ಕಳು ಓದಿ ವಿದ್ಯಾವಂತರಾಗಿ ಭವಿಷ್ಯ ಕಟ್ಟಿಕೊಳ್ಳುವ ಸಮಯದಲ್ಲಿ ಸೇನೆಯಲ್ಲಿ ದೇಶ ಕಾಯಬೇಕು, ನಂತರ ಅಲ್ಲಿಂದ ಹೊರ ಬಂದಮೇಲೆ ನಿರುದ್ಯೋಗಿಗಳಾಗಬೇಕಾ? ಎಂದು ಪ್ರಶ್ನಿಸಿದರು. ವ್ಯಾಪಕ ವಿರೋಧ ವ್ಯಕ್ತವಾದ ನಂತರ ರಕ್ಷಣಾ ಇಲಾಖೆ, ಕೇಂದ್ರೀಯ ಸಶಸ್ತ್ರ ಪಡೆ, ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ ಶೇ.10 ಮೀಸಲಾತಿ ನೀಡಲಾಗಿದ್ದು, ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ಮಾಡಲಾಗಿದೆ. ಈಗಾಗಲೇ ನಿವೃತ್ತ ಯೋಧರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲಾಗಿದ್ದು, ಅದರಲ್ಲೇ ಸರಿಯಾಗಿ ಅವರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ರಕ್ಷಣಾ ಇಲಾಖೆಯಲ್ಲಿ ಶೇ.10 ಮೀಸಲಾತಿಯ ಪ್ರಕಾರ ಅಗ್ನಿವೀರ ಯೋಧರಿಗೆ ಎಷ್ಟು ಉದ್ಯೋಗ ನೀಡಲು ಸಾಧ್ಯ? ಇದಕ್ಕೂ ಮೊದಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಎಷ್ಟು ನಿವೃತ್ತ ಯೋಧರಿಗೆ ಸಚಿವಾಲಯದಲ್ಲಿ ಕೆಲಸ ಕೊಟ್ಟಿದ್ದಾರೆ ಎಂದರು.

ಯುವಕರ ಭವಿಷ್ಯ ನಾಶವಾಗಲಿದೆ

ಸರ್ಕಾರ ಪೂರ್ಣಾವಧಿಗೆ ಯೋಧರನ್ನು ನೇಮಕಮಾಡಿಕೊಳ್ಳಬೇಕೇ ಹೊರತು, ಕೇವಲ ನಾಲ್ಕು ವರ್ಷಕ್ಕೆ ನೇಮಕಮಾಡಿಕೊಂಡು ನಂತರ ಅವರನ್ನು ಮನೆಗೆ ಕಳುಹಿಸಬಾರದು. ಇದರಿಂದ ಯುವಕರ ಭವಿಷ್ಯ ನಾಶವಾಗಲಿದೆ. ಈ ಹಿಂದೆ ಕನಿಷ್ಠ 15 ವರ್ಷಗಳ ಕಾಲ ಯೋಧರಿಗೆ ಸೇವಾ ಅವಧಿ ಮಾಡಿ ನಿವೃತ್ತಿ ಪಡೆಯಬಹುದಾಗಿತ್ತು. ಇಲ್ಲದಿದ್ದರೆ 60 ವರ್ಷದವರೆಗೂ ಸೇವೆ ಸಲ್ಲಿಸಬಹುದಾಗಿತ್ತು. ಹೀಗಾಗಿ ಇದುವರೆಗೂ ಹೇಗೆ ಸೇನಾ ಯೋಧರನ್ನು ಯಾವ ರೀತಿ ನೇಮಕ ಮಾಡಲಾಗುತ್ತಿತ್ತೋ ಅದೇ ರೀತಿ ಮುಂದುವರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ರಾಮಲಿಂಗಾರೆಡ್ಡಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮನೋಹರ್, ರಾಮಚಂದ್ರಪ್ಪ ಹಾಗೂ ಮಂಜುನಾಥ್ ಅವರು ಇದ್ದರು.

Exit mobile version