Site icon Vistara News

ದೆಹಲಿಯಲ್ಲಿ ಇ.ಡಿ. ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ

Congress protest

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ(ಇ.ಡಿ.) ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ ಅಂಗವಾಗಿ ಗುರುವಾರ ಬೆಂಗಳೂರಿನಲ್ಲಿ ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಇಡೀ ದಿನ ರಾಜ್ಯ ಸರ್ಕಾರಕ್ಕೆ ತಲೆ ನೋವಾಯಿತು.

‘ದೇಶದಲ್ಲಿ ನಡೆಯುತ್ತಿರುವ ಅಧಿಕಾರ ದುರುಪಯೋಗ, ಸಾಂವಿಧಾನಿಕ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರ ನಡೆಸುತ್ತಿರುವ ದ್ವೇಷದ ರಾಜಕಾರಣ ಹಾಗೂ ಪ್ರತಿಭಟನೆ ನಿರತರ ಮೇಲೆ ದೌರ್ಜನ್ಯ ಖಂಡಿಸಿ ಗುರುವಾರ(ಜೂನ್ 16) ರಾಜಭವನ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬುಧವಾರ ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು.

ಇದನ್ನೂ ಓದಿ | Congress protest | ರಾಜಭವನಕ್ಕೆ ತೆರಳುವಾಗ ಅರ್ಧದಲ್ಲೇ ಕೈ ಮುಖಂಡರನ್ನು ವಶಕ್ಕೆ ಪಡೆದ ಖಾಕಿ ಪಡೆ

ಕ್ವೀನ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿಯಿಂದ ರಾಜಭವನದವರೆಗೆ ಪಾದಯಾತ್ರೆ ಮೂಲಕ ಸಾಗುವ ಉದ್ದೇಶ ಹೊಂದಲಾಗಿತ್ತು. ಅನಗತ್ಯವಾಗಿ ರಾಹುಲ್‌ ಗಾಂಧಿಯವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂಬ ಮನವಿಯನ್ನು ರಾಷ್ಟ್ರಪತಿಯವರಿಗೆ ರಾಜ್ಯಪಾಲರ ಮೂಲಕ ನೀಡುವ ಯೋಜನೆ ಹೊಂದಲಾಗಿತ್ತು. ಇದಕ್ಕಾಗಿ ಕಾಂಗ್ರೆಸ್‌ ಪಕ್ಷದ ಎಲ್ಲ ಜಿಲ್ಲಾ ಘಟಕಗಳಿಂದಲೂ ಪದಾಧಿಕಾರಿಗಳು, ಕಾರ್ಯಕರ್ತರನ್ನು ಕರೆಸಿಕೊಳ್ಳಲಾಗಿತ್ತು.

ಇತ್ತ ಪ್ರತಿಭಟನೆಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ʼಕೊರೊನಾʼ ಅಸ್ತ್ರ ಪ್ರಯೋಗಿಸಲಿದೆಯೇ ಎಂಬ ಅನುಮಾನಗಳಿದ್ದವು. ಈ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಮುಖಂಡರ ರಾಜಭವನ ಚಲೋ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್‌ ಹೆಚ್ಚಳವಾದರೆ‌ ಅವರೇ ನೈತಿಕ ಹೊಣೆ ಹೊರಬೇಕು. ಕಾಂಗ್ರೆಸಿಗರು ಪ್ರತಿಭಟನೆ ಮಾಡುವುದಾದರೆ ಫ್ರೀಡಂ ಪಾರ್ಕ್‌ನಲ್ಲಿ ಮಾಡಲಿ, ಅದು ಬಿಟ್ಟು ಜನರನ್ನು ಸೇರಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಇವತ್ತಿನ ಹೋರಾಟಕ್ಕೆ ಕೋವಿಡ್‌ ಉಲ್ಲಂಘನೆ ಅಡಿ ಕೇಸ್ ದಾಖಲಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತಾನಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದರು.

ನಗರದ ಕ್ವೀನ್ಸ್‌ ರಸ್ತೆಯ ಕಾಂಗ್ರೆಸ್‌ ಭವನದಿಂದ ರಾಜಭವನಕ್ಕೆ ರ‍್ಯಾಲಿ ಹೊರಟ ವೇಳೆ ಕಾಂಗ್ರೆಸ್‌ ಮುಖಂಡರನ್ನು ಪೊಲೀಸರು ವಿಸ್ತಾರ-ಇಂಡಿಯನ್ ಎಕ್ಸ್‌ಪ್ರೆಸ್‌ ಸಿಗ್ನಲ್ ಬಳಿಯೇ ವಶಕ್ಕೆ ಪಡೆದುಕೊಂಡರು. ಪೊಲೀಸ್ ಬಿಗಿ ಭದ್ರತೆಯೊಂದಿಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಪ್ರತಿಭಟನಾಕಾರರು ಬರುತ್ತಿದ್ದಂತೆ ಪೊಲೀಸರು ತಡೆದ ಕಾರಣ, ಹೋರಾಟವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. 4 ಬಿಎಂಟಿಸಿ ಬಸ್‌ಗಳನ್ನು ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಕೆಲ ಕಾರ್ಯಕರ್ತರನ್ನು ಸಿ.ಎ.ಆರ್ ಗ್ರೌಂಡ್‌ನತ್ತ ಕರೆದುಕೊಂಡು ಹೋದರು.

ಇತ್ತ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲು ಸಿದ್ದರಾಮಯ್ಯ ಮುಂದಾದರು. ಆಗ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡದಂತೆ ಡಿಸಿಪಿ ಭೀಮಾಶಂಕರ್ ಗುಳೇದ್‌ ಮನವಿ ಮಾಡಿದರು. ಮನವಿಗೆ ಸ್ಪಂದಿಸದೆ ಇದ್ದಾಗ ಸಿದ್ದರಾಮಯ್ಯ ಅವರನ್ನು ವಶಕ್ಕೆ ಪಡೆಯಲು ಪೊಲೀಸ್ ಪಡೆ ಮುಂದಾಯಿತು.‌

ಇದನ್ನೂ ಓದಿ | ರಾಜಭವನ ಚಲೋಗೆ ಕಾಂಗ್ರೆಸ್‌ ರೆಡಿ, ತಡೆಯಲು ಪೊಲೀಸ್‌ ತಂಡಗಳೂ ಸಿದ್ಧ

ಬಂಧನದ ನಂತರ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ರಾಜಕೀಯ ದ್ವೇಷದಿಂದ ಸುಳ್ಳು ಮೊಕದ್ದಮೆ ಹಾಕಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ, ಪ್ರಜಾಪ್ರಭುತ್ವಕ್ಕೆ ನೇಣು ಹಾಕುತ್ತಿದ್ದಾರೆ. ಸಂವಿಧಾನದ ರೀತಿ ನಡೆದುಕೊಳ್ಳುತ್ತಿಲ್ಲ ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇಂದು ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ತನಿಖೆ ಮಾಡಲು ನಮ್ಮ ವಿರೋಧ ಇಲ್ಲ. ಆದರೆ ದುರುದ್ದೇಶದಿಂದ ಷಡ್ಯಂತ್ರ ರೂಪಿಸಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವರ್ಚಸ್ಸು ಹಾಳು ಮಾಡಲು ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು.

ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸುಳ್ಳು ಕೇಸ್ ಹಾಕಿ ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದು, ನಿಮ್ಮ ಈ ಬೆದರಿಕೆಗಳಿಗೆ, ಷಡ್ಯಂತ್ರಗಳಿಗೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ, ಯಂಗ್ ಇಂಡಿಯಾ ಎಲ್ಲವೂ ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸೇರಿ ದೇಣಿಗೆ ನೀಡಿದ್ದಾರೆ. ಅದನ್ನು ಕೇಳಲು ಅವರು ಯಾರು? ನೀವು ತೊಂದರೆ ನೀಡುತ್ತೀರಾ ನೀಡಿ, ಜೈಲಿಗೆ ಹಾಕುತ್ತೀರಾ ಹಾಕಿ’ ಎಂದು ಸವಾಲೆಸೆದರು.

ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಹಾಗೂ ಆರೋಗ್ಯ ಸಚಿವರ ಮೇಲೆ ಮೊದಲು ಪ್ರಕರಣ ದಾಖಲಿಸಲಿ. ಕೇವಲ ನಮ್ಮ ವಿರುದ್ಧ ಕೇಸು ದಾಖಲಿಸುತ್ತಿದ್ದಾರೆ. ರಾಜ್ಯ ಮಂತ್ರಿಗಳು ಹಾಗೂ ಕೇಂದ್ರ ಮಂತ್ರಿಗಳು ನಿಯಮ ಉಲ್ಲಂಘಿಸಿದ್ದಕ್ಕೆ ಯಾಕೆ ಕೇಸ್ ಹಾಕಿಲ್ಲ? ಎಂದು ಪ್ರಶ್ನಿಸಿದರು.

ಕಾರ್ಯಕರ್ತರನಿಗೆ ಹೃದಯಾಘಾತ

ರಾಜಭವನ ಚಲೋ ಪ್ರತಿಭಟನೆ ವೇಳೆ ರಾಜಾಜಿನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮಕೃಷ್ಣ ಎಂಬುವವರು ಹೃದಯಾಘಾತದಿಂದ ಕುಸಿದುಬಿದ್ದರು. ತಕ್ಷಣ ಫೋರ್ಟೀಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕು ನುಗ್ಗಲು ಸಂಭವಿಸಿದಾಗ ಅಸ್ವಸ್ಥರಾಗಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಕಾಂಗ್ರೆಸ್‌ ನಾಯಕರು ತೆರಳೂ ಆರೋಗ್ಯ ವಿಚಾರಿಸಿದ್ದಾರೆ.

ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ಸಿದ್ದರಾಮಯ್ಯ, ಶಿವಕುಮಾರ್‌ ಮುಂತಾದ ನಾಯಕರನ್ನು ಪೊಲೀಸರು ಬಂಧಿಸಿ ಕರೆದೊಯ್ದ ಕಾರಣ ಇನ್ನಿತರೆ ನಾಯಕರು ರಾಜಭವನಕ್ಕೆ ಮನವಿಪತ್ರದೊಂದಿಗೆ ತೆರಳಿದರು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೊಟ್‌ ಅವರು ಕುವೆಂಪು ವಿವಿ ಘಟಿಕೋತ್ಸವ ನಿಮಿತ್ತ ಶಿವಮೊಗ್ಗದಲ್ಲಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್‌ ಅಹ್ಮದ್‌, ಕೆಪಿಸಿಸಿ ಉಪಾಧ್ಯಕ್ಷರಾದ ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಬಲರಾಜ್, ಮೆಹರೋಝ್ ಖಾನ್, ಸತ್ಯನಾರಾಯಣ ಮತ್ತಿತರರು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಚಾರ ದಟ್ಟಣೆ

ಕಾಂಗ್ರೆಸ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಭಾಗದಲ್ಲಿ ಸಾಕಷ್ಟು ಸಮಯ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆ ಆಯಿತು. ರಾಜಭವನ ರಸ್ತೆ, ಅಂಬೇಡ್ಕರ್‌ ಬೀದಿ, ಕನ್ನಿಂಗ್‌ಹ್ಯಾಂ ರಸ್ತೆ ಸೇರಿ ರಾಜಭವನ ಸುತ್ತಮುತ್ತಲಿನ ವಾಹನ ಸವಾರರಿಗೆ ಪ್ರತಿಭಟನೆಯ ಬಿಸಿತಟ್ಟಿತು.

ಕಾನೂನು ಬಾಹಿರ ಪ್ರತಿಭಟನೆ ಎಂದ ಸಿಎಂ

ಭ್ರಷ್ಟಾಚಾರ ಆರೋಪ ಪ್ರಕರಣದ ತನಿಖೆ ಮಾಡುವ ತನಿಖಾ ಸಂಸ್ಥೆಗಳ ಮೇಲೆ ಪ್ರಭಾವ ಬೀರುವುದು, ಒತ್ತಡ ಹಾಕುವುದು ಕಾನೂನುಬಾಹಿರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ದಾವಣಗೆರೆಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಸಿಎಂ, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಹಾಗೂ ಎಲ್ಲ ಕಡೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದು ಕಾನೂನುಬಾಹಿರ. 144 ಸೆಕ್ಷನ್ ಉಲ್ಲಂಘನೆಯನ್ನು ಮಾಡಲಾಗುತ್ತಿದೆ. ಇದು ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷದ ಕೆಲಸ ಅಲ್ಲ. ಭ್ರಷ್ಟಾಚಾರದ ವಿರುದ್ಧ ನಾವೆಲ್ಲರೂ ಧ್ವನಿ ಎತ್ತುವ ಸಂದರ್ಭದಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿಯೂ ವಿಚಾರಣೆ ಮಾಡಬಾರದು ಎನ್ನುವುದು ನ್ಯಾಯಸಮ್ಮತ ಅಲ್ಲ. ಇದು ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷದ ಅವನತಿಗೆ ಕಾರಣವಾಗುತ್ತದೆ ಎಂದರು.

ಇದನ್ನೂ ಓದಿ | ಕಾಂಗ್ರೆಸ್‌ ಪ್ರತಿಭಟನೆ ತಾರಕಕ್ಕೆ; ಇ ಡಿ ಕಚೇರಿ ಹೊರಗೆ ಟೈರ್‌ ಸುಟ್ಟ ಕಾರ್ಯಕರ್ತರು

Exit mobile version