ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಆಡಳಿತ, ಟಿಪ್ಪು ಜಯಂತಿ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿರುವುದರ ನಡುವೆಯೇ, ಕಾಂಗ್ರೆಸ್‌ನ ಮತ್ತೊಬ್ಬ ನಾಯಕರು ಟಿಪ್ಪು ಸುಲ್ತಾನ್ ಮೂಲ ಹೆಸರಿನ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ.
ಟಿಪ್ಪು ಸುಲ್ತಾನ್ ಮೂಲ ಹೆಸರಿನ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ, ಟಿಪ್ಪು ಸುಲ್ತಾನ್‌ನ ಮೂಲ ಹೆಸರು ತಿಪ್ಪೇಸ್ವಾಮಿ. ತಿಪ್ಪೇಸ್ವಾಮಿಯ ವರಪ್ರಸಾದದಿಂದ ಟಿಪ್ಪುಸುಲ್ತಾನ್ ಜನಿಸಿದ್ದರು. ತಿಪ್ಪೇಸ್ವಾಮಿಯ ವರಪ್ರಸಾದದಿಂದ ಜನಿಸಿದ್ದರಿಂದ ಅವರಿಗೆ ಮೊದಲು ತಿಪ್ಪೇಸ್ವಾಮಿ ಎಂದು ಹೆಸರಿಟ್ಟಿದ್ದರು. ನಂತರ ಟಿಪ್ಪುವಾಗಿದೆ. ಆ ಭಾಗದ ಜನರೇ ಇದನ್ನು ಈಗಲೂ ಹೇಳುತ್ತಾರೆ ಎಂದು ತಿಳಿಸಿದ್ದಾರೆ.
ಟಿಪ್ಪುಗೆ ಮೊದಲು ಹೆಸರು ತಿಪ್ಪೇಸ್ವಾಮಿ ಎಂಬ ಸಂಸದ ಚಂದ್ರಶೇಖರ ಟ್ವೀಟ್ ವಿಚಾರ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ಹಾಗೂ ಮಾಜಿ ಎಂಎಲ್‌ಸಿ ರಮೇಶ್ ಬಾಬು ಪ್ರತಿಕ್ರಿಯಿಸಿ, ಮಕ್ಕಳ ಆಗದ ಸಂದರ್ಭದಲ್ಲಿ ಟಿಪ್ಪು ಅವರ ತಂದೆ ಸ್ಥಳೀಯವಾಗಿ ಹರಕೆ ಹೊತ್ತಿದ್ದರು. ಇದು ಸ್ವಾಭಾವಿಕ. ಟಿಪ್ಪು ಭಾವೈಕ್ಯತೆಯ ಗುರುತು ಆಗಿದ್ದರು. ಕೆಲ ಮತಾಂಧರು ಟಿಪ್ಪು ಅವರಿಗೆ ಜಾತಿ ಬಣ ಕೊಡಲು ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ಇತಿಹಾಸ ತೆಗೆದಿಡುವ ಪ್ರಯತ್ನ ಚಂದ್ರಶೇಖರ ಮಾಡಿದ್ದಾರೆ. ಇತಿಹಾಸದಲ್ಲಿರುವ ದಾಖಲೆಗಳಲ್ಲಿ ಇರುವುದು ಅವರು ಹೇಳಿದ್ದಾರೆ, ಅವರೇನು ಸೃಷ್ಟಿ ಮಾಡಿಲ್ಲ. ತಿಪ್ಪೇಸ್ವಾಮಿ ಅನುಗ್ರಹದಿಂದ ಟಿಪ್ಪು ಹುಟ್ಟಿದ್ದಾರೆ ಎಂಬ ದಾಖಲೆ ಇದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಮಾಜಿ ಸಂಸದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕೂಡ ಇದೇ ರೀತಿ ಹೇಳಿದ್ದರು. ಟಿಪ್ಪು ಸುಲ್ತಾನನ ಮೂಲ ಹೆಸರು ತಿಪ್ಪೇಸ್ವಾಮಿಯಾಗಿದ್ದು ನಂತರದ ದಿನಗಳಲ್ಲಿ ಟಿಪ್ಪು ಸುಲ್ತಾನನೆಂದು ಬದಲಾವಣೆಯಾಗಿತ್ತೆಂದು ಹೇಳಿದ್ದರು. ಚಳ್ಳಕೆರೆ ತಾಲೂಕಿನ ಪ್ರಸಿದ್ಧ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಕ್ಷೇತ್ರಕ್ಕೆ ತೆರಳಿದ್ದಾಗ, ತಿಪ್ಪೇರುದ್ರಸ್ವಾಮಿ ಅವರ ವರಪ್ರಸಾದದಿಂದ ಹುಟ್ಟಿದವರೇ ಟಿಪ್ಪು ಸುಲ್ತಾನ್. ಮೊದಲು ಅವರಿಗೆ ತಿಪ್ಪೇಸ್ವಾಮಿ ಎಂದು ಹೆಸರನ್ನು ಇಟ್ಟಿದ್ದರು. ನಂತರ ಅದು ಟಿಪ್ಪು ಸುಲ್ತಾನನಾಗಿ ಬದಲಾಯಿತು ಎಂದು ಅಲ್ಲಿನ ಜನ ಹೇಳಿದ್ದಾಗಿ ಉಗ್ರಪ್ಪ ತಿಳಿಸಿದ್ದರು.
ಇದನ್ನೂ ಓದಿ | ಕಾಂಗ್ರೆಸ್‌ನ ನಾಲ್ಕು ಹಾಲಿ ಶಾಸಕರು ಬಿಜೆಪಿಗೆ: ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ ಜಿ. ಸೋಮಶೇಖರ್ ರೆಡ್ಡಿ