ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯನ್ನು (Lok Sabha Election 2024) ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕಾಂಗ್ರೆಸ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರದ ನಾಗಾಲೋಟಕ್ಕೆ ಬ್ರೇಕ್ ಹಾಕಲು ಇಂಡಿಯಾ (INDIA) ಮೈತ್ರಿಕೂಟವನ್ನು ರಚಿಸಿಕೊಂಡಿದೆ. ಅಲ್ಲದೆ, ಕರ್ನಾಟಕದಲ್ಲಿ ಅತಿ ಹೆಚ್ಚು ಕ್ಷೇತ್ರವನ್ನು ಹೊಂದಿರುವ ಬಿಜೆಪಿಗೆ ತಕ್ಕ ಉತ್ತರ ನೀಡಿ, ಇಲ್ಲಿ 20ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಕೆಲವೊಂದು ಖಡಕ್ ಕ್ರಮಗಳನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ (Congress High Command) ಮುಂದಾಗಿದೆ. ಅದರ ಭಾಗವಾಗಿ ಈ ಆಗಸ್ಟ್ 2ರಂದು ನವ ದೆಹಲಿಯಲ್ಲಿ ಸಭೆಯನ್ನು ಕರೆಯಲಾಗಿದೆ. ಇದೇ ವೇಳೆ ಈಗ ಆಯ್ಕೆ ಆಗಿರುವ ಶಾಸಕರು (ಸಚಿವರ ಸಹಿತ) ಯಾರಿಗೇ ಸೂಚನೆ ನೀಡಿದರೂ ಲೋಕಸಭೆಗೆ ಸ್ಪರ್ಧೆ ಮಾಡಬೇಕು ಎಂಬ ಷರಾ ಬರೆಯಲಿದೆ!
ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ (KPCC working president Saleem Ahmed) ಹೇಳಿಕೆ ನೀಡಿರುವುದು ಈ ಎಲ್ಲ ಬೆಳವಣಿಗೆಗೆ ಪುಷ್ಟಿ ನೀಡುತ್ತಿದೆ. ಅಲ್ಲದೆ, ಲೋಕಸಭಾ ಚುನಾವಣೆ ದೃಷ್ಟಿಯಿಂದ ನವ ದೆಹಲಿಯಲ್ಲಿ ನಡೆಯಲಿರುವ ಈ ಸಭೆ ಮಹತ್ವವನ್ನು ಪಡೆದುಕೊಂಡಿದೆ.
ಸಲೀಂ ಅಹಮದ್ ಮಾತನಾಡಿ, ನವ ದೆಹಲಿಯಲ್ಲಿ ನಡೆಯುತ್ತಿರುವುದು ಲೋಕಸಭಾ ತಂತ್ರಗಾರಿಕೆಯ (Lok Sabha Strategy) ಸಭೆಯೇ ಹೊರತು, ಅಸಮಾಧಾನ ಶಮನ ಮಾಡುವ ಸಭೆ ಅಲ್ಲ. ಏಕೆಂದರೆ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (MLC BK Hariprasad) ಹೇಳಿಕೆಗೂ, ಸಭೆಗೂ ಯಾವುದೇ ಸಂಬಂಧ ಇಲ್ಲ. ಈ ಸಭೆ ಜುಲೈ 19ರಂದೇ ನಿಗದಿಯಾಗಿತ್ತು. ಆದರೆ, ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ವಿಧಿವಶರಾದ ಕಾರಣ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ನಮ್ಮಲ್ಲಿ ಬಣದ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಲೀಂ ಅಹಮದ್ ಹೇಳಿದ್ದೇನು? ಇಲ್ಲಿದೆ ವಿಡಿಯೊ!
ಇದನ್ನೂ ಓದಿ: Bangalore mysore Expressway : ಇಲ್ಲಿ ನಾಳೆಯಿಂದ ಆಟೊ, ಟ್ರ್ಯಾಕ್ಟರ್, ಬೈಕ್ ಸಂಚಾರಕ್ಕೆ ಬ್ರೇಕ್!
ಹೈಕಮಾಂಡ್ ಸೂಚಿಸಿದರೆ ಶಾಸಕರೂ ಅಭ್ಯರ್ಥಿಯೇ!
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡಿದರೆ ಉತ್ತಮ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಆಗುತ್ತದೆ. ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಸರ್ವೆ ನಡೆಯುತ್ತಿದೆ. ಸರ್ವೆಯಲ್ಲಿ ಶಾಸಕರು, ಸಚಿವರ ಪರ ಬಂದರೆ ಅವರೇ ಮುಂದಿನ ಲೋಕಸಭೆ ಅಭ್ಯರ್ಥಿಗಳು. ಆಗ ಹೈಕಮಾಂಡ್ ಅಭ್ಯರ್ಥಿ ಆಗಿ ಎಂದು ಸೂಚನೆ ನೀಡುತ್ತದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಸಲೀಂ ಅಹಮದ್ ಹೇಳಿದರು.