Site icon Vistara News

ರಾಜಭವನ ಚಲೋಗೆ ಕಾಂಗ್ರೆಸ್‌ ರೆಡಿ, ತಡೆಯಲು ಪೊಲೀಸ್‌ ತಂಡಗಳೂ ಸಿದ್ಧ

ರಾಜಭವನ ಚಲೋ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ‌ ಕೇಂದ್ರ ಸರಕಾರವು ಜಾರಿ ನಿರ್ದೇಶನಾಲಯ (ಇ.ಡಿ) ಯನ್ನು ಬಳಸಿಕೊಂಡು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಗುರುವಾರ (ಜೂನ್‌ 16) ರಾಜ್ಯ ಕಾಂಗ್ರೆಸ್ ರಾಜಭವನ ಚಲೋ ಹೋರಾಟಕ್ಕೆ ಸಿದ್ಧವಾಗಿದೆ.

ಪ್ರದೇಶ ಕಾಂಗ್ರೆಸ್‌ ಕಚೇರಿಯಿಂದ ರಾಜಭವನದವರೆಗೆ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಪಾದಯಾತ್ರೆ ನಡೆಸಲಿದ್ದು, ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ಉಸ್ತುವಾರಿಯಲ್ಲಿ ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ, ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಭದ್ರತೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer | ಕಾಂಗ್ರೆಸ್‌ ಕೊರಳಿಗೆ ಮತ್ತೆ ಸುತ್ತಿಕೊಂಡಿದೆ ನ್ಯಾಷನಲ್‌ ಹೆರಾಲ್ಡ್‌ ಉರುಳು!

ಎರಡು ಕೆಎಸ್ ಆರ್ಪಿ ತುಕಡಿ ಸಿಬ್ಬಂದಿ ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿ, ಹತ್ತು ಮಂದಿ ಇನ್ಸ್‌ಪೆಕ್ಟರ್‌ಗಳು ಹಾಗೂ ಐದು ಮಂದಿ ಎಸಿಪಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಕೆಪಿಸಿಸಿ ಕಚೇರಿಯಿಂದ ಎರಡು ತಂಡಗಳಾಗಿ ರ‍್ಯಾಲಿ ಹೊರಡಲಿದ್ದು, ಒಂದು ತಂಡ ಇಂಡಿಯನ್‌ ಎಕ್ಸ್‌ಪ್ರೆಸ್‌ ಸರ್ಕಲ್‌ ಮೂಲಕ ಇನ್ನೊಂದು ತಿಮ್ಮಯ್ಯ ಸರ್ಕಲ್‌ ಮೂಲಕ ರಾಜಭವನದ ಕಡೆಗೆ ಸಾಗಲಿದೆ. ಈ ವೇಳೆ ಇವರನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ಸರ್ಕಲ್‌ ಮತ್ತು ತಿಮ್ಮಯ್ಯ ಸರ್ಕಲ್‌ನಲ್ಲೇ ತಡೆಯಲು ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ. ಎರಡೂ ಕಡೆ ಬ್ಯಾರಿಕೇಡ್ ಹಾಕಿ ಕಾಂಗ್ರೆಸ್‌ ನಾಯಕರನ್ನು ತಡೆಯಲಾಗುತ್ತದೆ. ಈ ಹಂತದಲ್ಲಿ ಸಂಘರ್ಷ ನಡೆಯುವ ಸಾಧ್ಯತೆಗಳಿವೆ. ಹಾಗಾಗಿ ಇನ್ನಷ್ಟು ಪೊಲೀಸರನ್ನು ನಿಯೋಜಿಸುವ ಸಾಧ್ಯತೆ ಇದೆ. ರಾಜಭವನಕ್ಕೆ ಮುತ್ತಿಗೆ ಹಾಕಲು ಅವಕಾಶ ನೀಡದೆ ಹಿರಿಯ ನಾಯಕರಿಗೆ ಮಾತ್ರ ಅಲ್ಲಿವರೆಗೆ ಹೋಗಲು ಅವಕಾಶ ನೀಡುವ ಸಾಧ್ಯತೆಯೂ ಇದೆ.

ಚಲೋ ಕಾರಣದಿಂದ ಬೆಂಗಳೂರಿನ ಪ್ರಧಾನ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಇ.ಡಿ. ಕಿರುಕುಳ ವಿರೋಧಿಸಿ ಪ್ರತಿಭಟನೆ: ಡಿ ಕೆ ಶಿವಕುಮಾರ್

Exit mobile version