ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವಕರಿಗೆ ಮಾಸಿಕ ನುರುದ್ಯೋಗ ಭತ್ಯೆ ನೀಡುವ ಗ್ಯಾರಂಟಿ ಯೋಜನೆಯನ್ನು ಟೀಕಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ಚುನಾವಣೆ ಟಿಕೆಟ್ ಸಿಗುವುದು ಅನುಮಾನ ಎಂದು ಕಾಂಗ್ರೆಸ್ ಹೇಳಿದೆ.
ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ಮೂರು ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ ಮಾಸಿಕ ಒಂದೂವರೆ ಸಾವಿರ ರೂ. ನೀಡುವುದಾಗಿ ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ಘೋಷಣೆ ಮಾಡಿದ್ದರು. ಈ ಕುರಿತು ಬಾಗಲಕೋಟೆಯಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ಈ ಯೋಜನೆಯನ್ನು ಮೊದಲಿಗೆ ರಾಹುಲ್ ಗಾಂಧಿಯವರಿಂದಲೇ ಆರಂಭಿಸಬೇಕು. ನಿರುದ್ಯೋಗಿಗಳಿಗೆ ಭತ್ಯೆ ಬಗ್ಗೆ ರಾಜಸ್ಥಾನ, ಛತ್ತೀಸ್‌ಗಢದಲ್ಲಿಯೂ ಹೇಳಿದ್ದರು. ಆದರೆ ಅನುಷ್ಠಾನವಾಗಿಲ್ಲ. ಅವರು ಹತಾಶರಾಗಿದ್ದಾರೆ. ಅವರಿಗೆ ಆಂತರಿಕ ಸಮೀಕ್ಷೆಯಲ್ಲಿ ಗೆಲ್ಲುವುದಿಲ್ಲ ಎಂದು ತಿಳಿದಿದೆ. ಶೇ 3-4 ರಷ್ಟು ಮತ ಗೆಲ್ಲಲು ಈ ರೀತಿಯ ಆಗಲಾರದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ರಾಜಸ್ಥಾನ ಅಥವಾ ಛತ್ತೀಸ್‌ಗಢ ಅಲ್ಲ. ಕರ್ನಾಟಕದ ಜನ ಬಹಳ ಪ್ರಬುದ್ಧರಿದ್ದಾರೆ. ಯಾರು ಯಾಕೆ ಮಾತನಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಸ್ವತಃ ತಮಗೇ ಬಿಜೆಪಿಯ ಟಿಕೆಟ್ ಸಿಗುವ ಭರವಸೆ ಇಲ್ಲದ, ಟಿಕೆಟ್ ಸಿಕ್ಕರೂ ಗೆಲ್ಲುವ ಭರವಸೆ ಇಲ್ಲದ, ಗೆದ್ದರೂ ತಾವೇ ಸಿಎಂ ಹುರಿಯಾಳು ಎಂಬ ಭರವಸೆ ಇಲ್ಲದ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನೀಡಿದ ಯುವನಿಧೀ ಯೋಜನೆಯ ಭರವಸೆಯನ್ನು ಟೀಕಿಸುವುದು ಹಾಸ್ಯಾಸ್ಪದ. ಬೊಮ್ಮಾಯಿಯವರೇ, ನೀವು ಕೈಲಾಗದವರಿರಬಹುದು, ಕಾಂಗ್ರೆಸ್‌ಗೆ ಎಲ್ಲವೂ ಸಾಧ್ಯ” ಎಂದಿದೆ.