ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆ ಸೇರಿ ಅನೇಕ ಸಂದರ್ಭದಲ್ಲಿ ಪ್ರರಕಣಗಳನ್ನು ತಪ್ಪುದಾರಿಗೆಳೆದ ಗೃಹಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಪಿಎಸ್‌ಐ ನೇಮಕ ಒಂದೇ ಅಲ್ಲದೇ ವಿವಿಧ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ವ್ಯಾಪಾರಿಗಳನ್ನು ಮಾತ್ರ ಹಿಡಿದಿದ್ದಾರೆ. ವಸ್ತುಗಳನ್ನು ಯಾರು ಪೂರೈಸಿದರು ಎಂಬುವುದು ತಿಳಿಯಬೇಕು. ಅಕ್ರಮ ನಡೆದಿಲ್ಲ ಎಂದವರು ಈಗ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಇಡೀ ಪ್ರಕರಣವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ತಪ್ಪುದಾರಿಗೆ ಎಳೆದಿದ್ದು, ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, ಯಾವುದೇ ಅಕ್ರಮ ನಡೆದಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ತಿಳಿಸಿದ್ದರು. ಇದಾದ ಮೇಲೆ ಹೈಕೋರ್ಟ್‌ಗೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಸಿಐಡಿ ತನಿಖೆ ಮೇಲೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. 270 ಮಂದಿ ಅಕ್ರಮ ನೇಮಕಾತಿಯಾಗಿದೆ. ಇಡೀ ದೇಶದಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ಗೌರವವಿತ್ತು, ಆದರೆ ರಾಜ್ಯ ಸರ್ಕಾರದ ಕಾರಣಕ್ಕೆ ಈ ಗೌರವ ಹಾಳಾಗಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಈ ಹಿಂದೆ ಪ್ರಶ್ನಿಸಿದಾಗ ಗೃಹಸಚಿವ ಆರಗ ಜ್ಞಾನೇಂದ್ರ, ಯಾವ ಅಕ್ರಮ, ಅವ್ಯವಹಾರ ನಡೆದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಅದೇ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಬಂಧನವಾಗಿ ಸೇವೆಯಿಂದ ಅಮಾನತುಗೊಂಡಿದ್ದಾರೆ. ಇದರಿಂದ ಅಕ್ರಮ ನಡೆದಿರುವುದು ಸಾಬೀತಾಗಿದೆ. ಈಗ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದರು.
ಗೃಹಸಚಿವರು ಶಿವಮೊಗ್ಗ ಪ್ರಕರಣ ಸೇರಿ ವಿವಿಧ ಪ್ರಕರಣಗಳಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದಾರೆ. ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕ ವಲಯದಿಂದ ತನಿಖೆಗೆ ಒತ್ತಾಯ ಕೇಳಿಬಂದಿದ್ದರಿಂದ ಈಗ ಆರೋಪಿಗಳನ್ನು ಬಂಧಿಸಿದ್ದಾರೆ. ಸಿಐಡಿ ತನಿಖೆಗೆ ನಾವು ಆರಂಭದಲ್ಲೇ ವಿರೋಧಿಸಿದ್ದೆವು. ಈ ಹಗರಣ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಹೇಳಿದ್ದೆವು.
ಈ ಪ್ರಕರಣದಲ್ಲಿ ಸಚಿವ ಅಶ್ವತ್ಥನಾರಾಯಣ ವಿರುದ್ಧ ಆರೋಪ ಕೇಳಿಬಂದಿದೆ. ಅವರ ಪ್ರಭಾವದಿಂದ ಐದು ಮಂದಿ ಅಕ್ರಮವಾಗಿ ನೇಮಕವಾಗಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಅವರ ಮೇಲೂ ಆರೋಪಗಳಿವೆ. ಒಂದು ಹುದ್ದೆಗೆ 30 ಲಕ್ಷದಿಂದ 1 ಕೋಟಿ ರೂ.ವರೆಗೆ ವಸೂಲಿಯಾಗಿದೆ. ಈ ಲಂಚ ಯಾರ ಯಾರ ಜೇಬಿಗೆ ಹೋಗಿದೆ ಎಂಬುವುದು ತಿಳಿಯಬೇಕು ಎಂದರು.
ಎಡಿಜಿಪಿ ಕಚೇರಿಯಲ್ಲಿ ಒಎಂಆರ್ ತಿದ್ದುಪಡಿಯಾಗುತ್ತದೆ ಎಂದರೆ ಸಚಿವರ ಸೂಚನೆಗಳಿಲ್ಲದೆ ಈ ಅಕ್ರಮ ಆಗುತ್ತದೆಯೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈ ಹಿಂದೆ ನಡೆದ ಕೆಎಎಸ್, ಎಫ್‌ಡಿಎ, ಎಸ್‌ಡಿಎ ಇನ್ನಿತರ ಪರೀಕ್ಷೆಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಡಿಸಿ ಕಚೇರಿ ಭ್ರಷ್ಟಾಚಾರ ಪ್ರಕರಣ ವಿಚಾರಣೆ ಮಾಡಿದ ನ್ಯಾಯಮಾರ್ತಿಗೇ ಬೆದರಿಕೆ ಹಾಕುತ್ತಾರೆ. ಜಡ್ಜ್ ತರಾಟೆಗೆ ತೆಗೆದುಕೊಂಡಿದ್ದರಿಂದಲೇ ಡಿಸಿ ಬಂಧನವಾಗಿದೆ. ಇಲ್ಲದಿದ್ದರೆ ಯಾವುದೇ ಕ್ರಮವಾಗುತ್ತಿರಲಿಲ್ಲ. ಎಸಿಬಿಯೇ ಭ್ರಷ್ಟರ ಕೂಪವಾಗಿದೆ ಎಂದು ನ್ಯಾಯಮೂರ್ತಿ ಆರೋಪಿಸಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, ಈ ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | ಇಡಿ ಚಾರ್ಜ್‌ಶೀಟ್ ಸಲ್ಲಿಕೆಯಲ್ಲಿ ರಾಜಕಾರಣ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ