ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಒಟ್ಟಾಗುತ್ತಿರುವ ಪ್ರತಿಪಕ್ಷಗಳ ಸಭೆಗೆ (Opposition Meet) ಧೈರ್ಯ ಇರುವವರು ಮಾತ್ರ ಬರುತ್ತಾರೆ ಎಂದು ಎಚ್.ಡಿ. ದೇವೇಗೌಡರ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಪರೋಕ್ಷ ಚಾಟಿ ಬೀಸಿದೆ. ಹಾಗೂ, ದೇಶದಲ್ಲಿ ತ್ರಿಶಂಕು ರಾಜಕಾರಣ ಮುಕ್ತಾಯವಾಗಿದ್ದು, ಈ ಕಡೆ ಅಥವಾ ಆ ಕಡೆ ಸೇರಿಕೊಳ್ಳಲೇಬೇಕು ಎಂದು ತಿಳಿಸಿದೆ.
ಸಭೆಯ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ಜೈರಾಮ್ ರಮೇಶ್ ಈ ಸ್ಪಷ್ಟ ಮಾತುಗಳನ್ನು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ದೇಶದ ಹಿತಾಸಕ್ತಿ ಕಾಯಲು ವಿರೋಧ ಪಕ್ಷಗಳು ಒಂದುಗೂಡುತ್ತಿರುವುದು ಉತ್ತಮ ಆರಂಭ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ದೇಶದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ನಾಳೆ ದೊಡ್ಡ ಮಟ್ಟದ ಸಭೆ ನಡೆಯಲಿದೆ. ಇದು ಕೇವಲ ಒಂದು ಪಕ್ಷದ ಸಭೆಯಲ್ಲ.
ದೇಶದ 140 ಕೋಟಿ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲು ಈ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಆಯೋಜಿಸುತ್ತಿರುವ ಈ ಸಭೆಗೆ ಕೆಪಿಸಿಸಿ ಪರವಾಗಿ ಎಲ್ಲರಿಗೂ ಸ್ವಾಗತ ಕೋರುತ್ತೇನೆ. ಈ ಒಗ್ಗಟ್ಟನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಕರ್ನಾಟಕ ರಾಜ್ಯದಲ್ಲಿ ಪಡೆದ ಫಲಿತಾಂಶವನ್ನೇ 2024ರ ಚುನಾವಣೆಯಲ್ಲಿ ಪಡೆಯಲು ಕೆಲಸ ಮಾಡಲಾಗುವುದು.
ಕೆ.ಸಿ. ವೇಣುಗೋಪಾಲ್ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ, ಸಾಂವಿಧಾನಿಕ ಹಕ್ಕುಗಳು ಹಾಗೂ ಸ್ವಾಯತ್ತ ಸಂಸ್ಥೆಗಳ ರಕ್ಷಣೆಯ ಸದುದ್ದೇಶದಿಂದ ವಿರೋಧ ಪಕ್ಷಗಳು ಒಂದಾಗಿವೆ. ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿದೆ.
ರಾಹುಲ್ ಗಾಂಧಿ ಅವರ ಅನರ್ಹತೆ, ಮಹಾರಾಷ್ಟ್ರದ ಬೆಳವಣಿಗೆ ಇದಕ್ಕೆ ಸಾಕ್ಷಿ. ಮಣಿಪುರ ಕಳೆದ 75 ದಿನಗಳಿಂದ ಹೊತ್ತಿ ಉರಿಯುತ್ತಿದೆ. ಆ ಬಗ್ಗೆ ಒಂದೇ ಒಂದು ಪರಿಹಾರ ಇಲ್ಲ. ಈ ಬಗ್ಗೆ ದೇಶದ ಪ್ರಧಾನಮಂತ್ರಿಗಳು ಒಂದೇ ಒಂದು ಮಾತನಾಡಿಲ್ಲ. ಇದು ಆಘಾತಕಾರಿ ಬೆಳವಣಿಗೆ. ದೇಶದ ಜನ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ನಾವು ಅಧಿಕಾರ ಪಡೆಯಲು ಸಭೆ ಸೇರುತ್ತಿಲ್ಲ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಡೆಯುತ್ತಿರುವ ಸಭೆ. ಈ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಮಯ ಬಂದಾಗ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಇಂದು 26 ವಿರೋಧ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಿವೆ ಎಂದರು.
ಜೆಡಿಎಸ್ ಪಕ್ಷವನ್ನು ಈ ಸಭೆಗೆ ಆಹ್ವಾನಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೆ.ಸಿ. ವೇಣುಗೋಪಾಲ್, ಪ್ರಜಾಪ್ರಭುತ್ವ, ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಉಳ್ಳವರು, ಸಂವಿಧಾನ ರಕ್ಷಣೆ ಆಗಬೇಕು ಎನ್ನುವವರು, ಈ ಕೇಂದ್ರ ಸರ್ಕಾರದ ವಿರುದ್ಧ ಹೋರಾಡುವ ಧೈರ್ಯ ಇರುವವರು ನಮ್ಮ ಜೊತೆ ಬರುತ್ತಾರೆ. ಅವರಿಗೆ ಆಹ್ವಾನ ಅಗತ್ಯವಿಲ್ಲ ಎಂದರು.
ಇದೇ ಪ್ರಶ್ನೆಗೆ ಉತ್ತರಿಸಿದ ಜೈರಾಮ್ ರಮೇಶ್, ದೇಶದ ರಾಜಕಾರಣದಲ್ಲಿ ಈಗ ತ್ರಿಶಂಕು ರಾಜಕೀಯ ಇರುವುದಿಲ್ಲ. ನೀವು ನಿರಂಕುಶವಾದಿ, ಸಂವಿಧಾನ ವಿರೋಧಿ ಪಕ್ಷದೊಂದಿಗೆ ಇರುತ್ತೀರೋ ಅಥವಾ ಸಂವಿಧಾನವನ್ನು ಉಳಿಸುವವರ ಜತೆಗೆ ಇರುತ್ತೀರೊ ಎಂದು ನಿರ್ಧಾರ ಮಾಡಬೇಕು ಅಷ್ಟೆ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು.
ಎನ್‌ಡಿಎ ಕೂಡ ಸಭೆ ನಡೆಸುತ್ತಿರುವುದರ ಕುರಿತು ಮಾತನಾಡಿದ ಜೈರಾಮ್ ರಮೇಶ್, ಪಾಟ್ನಾ ಸಭೆ ನಂತರ ಅವರಿಗೆ ಎನ್‌ಡಿಎ ಮೈತ್ರಿಕೂಟ ನೆನಪಾಗಿದೆ. ಈಗ ಅವರು ನಾಳೆ ಎನ್‌ಡಿಎ ಸಭೆ ನಡೆಸುತ್ತಿದ್ದಾರೆ. ಈ ಮೈತ್ರಿಕೂಟಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಯುಪಿಎ ಮೈತ್ರಿಕೂಟ ಜೂನ್‌ನಲ್ಲಿ ಪಾಟ್ನಾದಲ್ಲಿ ಸಭೆ ನಡೆದಿದ್ದು, ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: Opposition Meet: ಅಣಬೆಗಳು, ದರೋಡೆಕೋರರು, ಒಡೆದ ಮಡಕೆ, ಎತ್ತು-ಕೋಣ: ಪ್ರತಿಪಕ್ಷ ಸಭೆ ಬಗ್ಗೆ ಬಿಜೆಪಿ ನಾಯಕರ ನುಡಿಮುತ್ತುಗಳಿವು
24 ವಿರೋಧ ಪಕ್ಷಗಳ ನಾಯಕರು ಈ ಸಭೆಯಲ್ಲಿ ಸರ್ಕಾರದ ವಿರುದ್ಧ ಸಂಸತ್ ಒಳಗೆ ಹಾಗೂ ಹೊರಗೆ ಹೇಗೆ ಹೋರಾಡಬೇಕು ಎಂದು ಸಭೆ ನಡೆಸಲಿದೆ. ಇದು ಒಂದು ಪಕ್ಷದ ಮೈತ್ರಿ ಅಲ್ಲ. ಪಾಟ್ನಾ ಸಭೆಯಲ್ಲಿ 24 ಪಕ್ಷಗಳು ಭಾಗವಹಿಸಿದ್ದು, ಬೆಂಗಳೂರಿನ ಸಭೆಗೆ 26 ಪಕ್ಷಗಳು ಭಾಗವಹಿಸಲಿವೆ. ಮುಂದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ರಾಹುಲ್ ಗಾಂಧಿ ನಮ್ಮ ಪಕ್ಷದ ಮಾಸ್ ನಾಯಕ. ಕಳೆದ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯನ್ನು ಶ್ಲಾಘಿಸಿದ್ದಾರೆ ಎಂದರು.
ವಿರೋಧ ಪಕ್ಷಗಳ ಮೈತ್ರಿಯ ನಾಯಕ ಯಾರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈರಾಮ್ ರಮೇಶ್ ಹಾಗೂ ಕೆ.ಸಿ. ವೇಣುಗೋಪಾಲ್, ‘ನಾಯಕತ್ವದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ದೇಶದ ಸಮಸ್ಯೆ ಬಗ್ಗೆ ಗಮನಹರಿಸಿ. ಪ್ರತಿನಿತ್ಯ ಪ್ರಜಾಪ್ರಭುತ್ವದ ಮೇಲೆ ದಾಳಿ ಆಗುತ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರು ಮಾತನಾಡುತ್ತಿಲ್ಲ. ಚೀನಾ ಅತಿಕ್ರಮಣ ಸಮರ್ಥನೆ ಮಾಡಿಕೊಳ್ಳುವುದು ಯಾವ ನಾಯಕತ್ವ?’ ಎಂದು ತಿಳಿಸಿದರು.