Site icon Vistara News

Congress-SDPI Link : ಎಸ್‌ಡಿಪಿಐಯು ಕಾಂಗ್ರೆಸ್‌ನ ಬಿ ಟೀಮ್‌ ಎಂಬುದು ಸಾಬೀತು ಎಂದ ಶೋಭಾ ಕರಂದ್ಲಾಜೆ, ತನಿಖೆಗೆ ಆಗ್ರಹ

Shobha Karndlaje press meet

#image_title

ಬೆಂಗಳೂರು: ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ನಡುವೆ ನೇರವಾದ ಸಂಬಂಧವಿದೆ (Congress-SDPI Link) ಎಂಬ ಬಿಜೆಪಿ ಆರೋಪಕ್ಕೆ ಪುರಾವೆ ಸಿಕ್ಕಿದೆ. ಎಸ್‌ಡಿಪಿಯು ಕಾಂಗ್ರೆಸ್‌ನ ಇನ್ನೊಂದು ಮುಖ ಎನ್ನುವುದು ಸಾಬೀತಾಗಿದೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಎಸ್‌ಡಿಪಿಐ ನಡುವಿನ ಸಂಬಂಧದ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕೆಂದು ಆಗ್ರಹಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಮತ್ತು ಕಾಂಗ್ರೆಸ್‌ ನಡುವೆ ಸ್ಥಾನ ಹೊಂದಾಣಿಕೆ ಒಳಒಪ್ಪಂದ ನಡೆದಿತ್ತು ಎಂಬ ಎಸ್‌ಡಿಪಿಐ ನಾಯಕ ಇಲ್ಯಾಸ್‌ ತುಂಬೆ ಹೇಳಿಕೆಯನ್ನು ಇಟ್ಟುಕೊಂಡು ಶೋಭಾ ಕರಂದ್ಲಾಜೆ ಅವರು ಮಾತನಾಡಿದ್ದಾರೆ.

ʻʻಪಿಎಫ್‍ಐ, ಕೆಎಫ್‌ಡಿ ಮತ್ತು ಎಸ್‍ಡಿಪಿಐ ಕಾಂಗ್ರೆಸ್‌ನ ಇನ್ನೊಂದು ಮುಖ ಅನ್ನುವುದನ್ನು ನಾವು ಬಹಳ ವರ್ಷದಿಂದ ಹೇಳುತ್ತಲೇ ಬಂದಿದ್ದೇವೆ. ಇವು ಕರ್ನಾಟಕ ರಾಜ್ಯದಲ್ಲಿ ಮತ್ತು ದೇಶದ ಬೇರೆ ಬೇರೆ ಭಾಗದಲ್ಲಿ ದೇಶವಿರೋಧಿ ಮತ್ತು ಸಮಾಜ ವಿರೋಧಿ ಕೃತ್ಯಗಳನ್ನು ಮಾಡುತ್ತಿವೆ ಎಂಬುದನ್ನು ಹೇಳುತ್ತಲೇ ಬಂದಿದ್ದೇವೆʼʼ ಎಂದು ಶೋಭಾ ಕರಂದ್ಲಾಜೆ ನೆನಪಿಸಿದ್ದಾರೆ.

ಹಿಂದು ಯುವಕರ ಹತ್ಯೆಗೆ ಕಿವಿಗೊಡಲಿಲ್ಲ ಸಿದ್ದರಾಮಯ್ಯ

ʻʻʻರಾಜ್ಯದಲ್ಲಿ ಸಿದ್ದರಾಮಯ್ಯನವರ ಸರಕಾರ ಇದ್ದ ಸಂದರ್ಭದಲ್ಲಿ ಹಿಂದೂ ಯುವಕರ ಹತ್ಯೆಯಾಗಿತ್ತು. ಆ ಸಂದರ್ಭದಲ್ಲಿ ಕುಟುಂಬದವರಿಗೆ ಸಾಂತ್ವನ ಹೇಳುವ ಅಥವಾ ಸರಿಯಾಗಿ ತನಿಖೆ ನಡೆಸುವ ಕಡೆಗೆ ಸಿದ್ದರಾಮಯ್ಯನವರು ಗಮನ ಕೊಡಲಿಲ್ಲ. ಅದರ ಬದಲಾಗಿ ಅವರು ಆ ಸಮುದಾಯದ ಜನರನ್ನು ಓಲೈಕೆ ಮಾಡುತ್ತಾ ಹೋದರು. ಅವರ ನಿಜವಾದ ಮಾನಸಿಕತೆ ಟಿಪ್ಪು ಜಯಂತಿ ಮೂಲಕ ಹೊರ ಬಂತು; ಟಿಪ್ಪು ಜಯಂತಿ ಕೇವಲ ಒಂದು ಜಯಂತಿ ಆಗಿರಲಿಲ್ಲ. ಟಿಪ್ಪು ಜಯಂತಿ ಹಿಂದೂಗಳ ವಿರುದ್ಧ ಮುಸಲ್ಮಾನರನ್ನು ಎತ್ತಿ ಕಟ್ಟುವ ಹುನ್ನಾರವಾಗಿತ್ತು. ಪರಸ್ಪರ ಜಗಳ ಮಾಡಿಸುವ ಹುನ್ನಾರ ಅದಾಗಿತ್ತು. ಈ ಜಗಳದ ಪರಿಣಾಮವಾಗಿ ಮಡಿಕೇರಿಯಲ್ಲಿ ಕುಟ್ಟಪ್ಪನವರ ಹತ್ಯೆಯಾಯಿತು. ಕುಟ್ಟಪ್ಪನವರ ಹತ್ಯೆ ಆದಾಗ ಸ್ವತಃ ನಾನು ಹೋಗಿದ್ದೆ. ಅವರ ತಲೆ ಮತ್ತು ಮೈತುಂಬ ಕಲ್ಲಿನಿಂದ ಹೊಡೆದ ಗಾಯಗಳಿದ್ದವುʼʼ ಎಂದು ಶೋಭಾ ಕರಂದ್ಲಾಜೆ ಗಮನ ಸೆಳೆದರು.

ʻʻಕೇಂದ್ರ ಸರ್ಕಾರ ಪಿಎಫ್‌ಐ ನಿಷೇಧದ ಕುರಿತಂತೆ ಒಂದು ದಿಟ್ಟವಾದ ನಿರ್ಣಯ ತೆಗೆದುಕೊಂಡಿದೆ. ಪತ್ರಕರ್ತರು ಪದೇಪದೆ ಪ್ರಶ್ನಿಸಿದಾಗ ಪೂರಕ ಸಾಕ್ಷ್ಯ ಇಲ್ಲದೆ ನಿಷೇಧ ಅಸಾಧ್ಯ ಎಂದು ಹೇಳುತ್ತಲೇ ಬಂದಿದ್ದೆ. ಕಾನೂನಿನ ಆಧಾರದಲ್ಲಿ ಸಂಘಟನೆಯನ್ನು ನಿಷೇಧಿಸಬೇಕು; ಇಲ್ಲದಿದ್ದಲ್ಲಿ ಅದು ಮಾನ್ಯವಾಗಲಾರದು ಎಂದು ತಿಳಿಸಿದ್ದೆ. ಅದೇ ರೀತಿ ಸಮಗ್ರ ಮಾಹಿತಿ ಸಂಗ್ರಹದ ಬಳಿಕ ಪಿಎಫ್ಐ ನಿಷೇಧ ಸಾಧ್ಯವಾಯಿತುʼʼ ಎಂದು ತಿಳಿಸಿದರು.

ʻʻಪಿಎಫ್ ಐ ಕಾರ್ಯಕರ್ತರು ಇವತ್ತು ಎಲ್ಲಿ ಹೋಗಿದ್ದಾರೆ ಎಂದರೆ, ಅವರು ಎಸ್‌ಡಿಪಿಐ ಸೇರಿದ್ದಾರೆʼʼ ಎಂದರು ಶೋಭಾ ಕರಂದ್ಲಾಜೆ.

ʻʻಎಸ್‌ಡಿಪಿಐ ಎನ್ನುವುದು ಪಿಎಫ್ಐಯ ರಾಜಕೀಯ ಮುಖವಾಡ ಮತ್ತು ರಾಜಕೀಯ ಮುಖವಾಣಿ. ಅದಕ್ಕೆ ಮೊದಲು ಅವರು ಕರ್ನಾಟಕದಲ್ಲಿ ಕೆಎಫ್‍ಡಿ ಹೆಸರಿನಲ್ಲಿ ಕೂಡ ಕೆಲಸವನ್ನು ಮಾಡುತ್ತಿದ್ದರು. ಹಲವಾರು ಜನರನ್ನು ಬಂಧಿಸಲಾಗಿತ್ತು. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಸುಮಾರು 116 ಕೇಸುಗಳಲ್ಲಿ ಸಿಕ್ಕಿ ಬಿದ್ದು ಅರೆಸ್ಟ್ ಆಗಿದ್ದ 1700 ಪಿಎಫ್ಐ ಮತ್ತು ಕೆಎಫ್‌ಡಿ ಮುಖಂಡರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಿತ್ತುʼʼ ಎಂದು ಆರೋಪಿಸಿದರು.

ʻʻಬಂಧನದಿಂದ ಬಿಡುಗಡೆಗೊಂಡ ಅವರು ಮತ್ತೆ ತಮ್ಮ ಚಟುವಟಿಕೆ ಆರಂಭಿಸಿದರು. ಸಮಾಜದಲ್ಲಿ ಗೊಂದಲದ ವಾತಾವರಣವನ್ನು ನಿರ್ಮಾಣ ಮಾಡಿದರು. ಕೆಜೆ ಹಳ್ಳಿ ಡಿಜೆ ಹಳ್ಳಿ, ಮಂಗಳೂರಿನ ಸ್ಟೇಷನ್ನಿಗೆ ನುಗ್ಗಿರುವುದು, ಹುಬ್ಬಳ್ಳಿಯ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿರುವುದು -ಇವೆಲ್ಲವನ್ನು ಪಿಎಫ್ ಐ ಕಾರ್ಯಕರ್ತರೇ ಮಾಡಿದ್ದಾರೆ. ಪಿ ಎಫ್ ಐನ ಅದೇ ಕಾರ್ಯಕರ್ತರು ಇವತ್ತು ಎಸ್ ಡಿ ಪಿ ಐ ನಲ್ಲಿ ಇದ್ದಾರೆ. ಪಿ ಎಫ್ ಐ ಬ್ಯಾನ್ ಆದ ತಕ್ಷಣ ಅವರೆಲ್ಲರೂ ಎಸ್‍ಡಿಪಿಐ ಎಂಬ ರಾಜಕೀಯ ಪಕ್ಷವನ್ನು ಸೇರಿಕೊಂಡಿದ್ದಾರೆʼʼ ಎಂದು ವಿವರ ನೀಡಿದರು.

ರಾಜಕೀಯ ಹೊಂದಾಣಿಕೆ ದೃಢ

‘ಕಳೆದ ಬಾರಿ ನಾವು 25 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜಿಸಿದ್ದೆವು. ಆದರೆ ಕಾಂಗ್ರೆಸ್ಸಿನ ನೇತಾರರ- ನಾಯಕರ ಕೋರಿಕೆ ಮೇರೆಗೆ ಅವರೆಲ್ಲರನ್ನು ಕಣಕ್ಕಿಳಿಸದೆ ಮೂರು ಜನರನ್ನು ಮಾತ್ರ ಕಣಕ್ಕಿಳಿಸಿದೆವು ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಪಿಎಫ್ ಐ -ಎಸ್ ಡಿ ಪಿ ಐಗೆ ಸಹಾಯ ಮಾಡಿರುವುದು, ಅವರ ಕೇಸನ್ನು ಬಿ ರಿಪೋರ್ಟ್‌ ಹಾಕಿ ಜೈಲಿನಿಂದ ಬಿಡುಗಡೆ ಮಾಡಿರುವುದು ಸ್ಪಷ್ಟವಾಗಿದೆ. ಎಸ್‍ಡಿಪಿಐ ಜೊತೆ ಹೊಂದಾಣಿಕೆ ರಾಜಕೀಯವನ್ನು ಮಾಡಿಕೊಂಡಿದ್ದಾರೆಂದು ದೃಢಪಟ್ಟಿದೆ. ಒಂದು ಸಮುದಾಯವನ್ನು ಓಲೈಕೆ ಮಾಡಲು ಕೇಸು ರದ್ದು ಮಾಡಿರುವುದು ಸ್ಪಷ್ಟವಾಗಿದೆʼʼ ಎಂದು ಶೋಭಾ ಕರಂದ್ಲಾಜೆ ನುಡಿದರು.

ʻʻಮಂಗಳೂರಿನಲ್ಲಿ ಮೊನ್ನೆಯಷ್ಟೇ ಬಾಂಬ್ ಸ್ಫೋಟ ನಡೆದಿದೆ. ಐಎಸ್‍ಐಎಸ್ ಒಂದು ತಂಡ ಅದನ್ನು ನಾವೇ ಮಾಡಿದ್ದು ಎಂದು ಹೇಳಿದ್ದಾರೆ. ಬಾಂಬ್ ಬ್ಲಾಸ್ಟ್ ಮಾಡಿದವನನ್ನು ನಿರಪರಾಧಿ ಎಂಬ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಸಮರ್ಥನೆ ಮಾಡಿಕೊಂಡರು. ಅಂದರೆ ಕಾಂಗ್ರೆಸ್‌ನ ಉದ್ದೇಶ ಏನು? ಎಸ್‌ಡಿಪಿಐ ಉದ್ದೇಶ ಏನುʼʼ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್‌-ಎಸ್‌ಡಿಪಿಐ ಸಂಬಂಧ ತನಿಖೆಯಾಗಲಿ

ಕಾಂಗ್ರೆಸ್ ಮತ್ತು ಪಿಎಫ್ಐಗೆ ಹಾಗೂ ಕಾಂಗ್ರೆಸ್ ಮತ್ತು ಎಸ್‍ಡಿಪಿಐಗೆ ಇರುವ ಸಂಬಂಧದ ಸತ್ಯಾಸತ್ಯತೆ ಅರ್ಥ ಆಗಬೇಕು. ಕಾಂಗ್ರೆಸ್ ಮತ್ತು ಹಳೆಯ ಪಿಎಫ್ಐ ಹಾಗೂ ಇವತ್ತಿನ ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖ ಎಂಬುದು ಸಾಬೀತಾಗುತ್ತಿದೆ. ಅದಕ್ಕಾಗಿ ಇವತ್ತು ಕಾಂಗ್ರೆಸ್ ಮತ್ತು ಎಸ್ ಡಿಪಿಐ ಸಂಬಂಧ ಕುರಿತಾಗಿ ತನಿಖೆ ಆಗಬೇಕು; ಚರ್ಚೆ ಆಗಬೇಕು. ಜನ ಇದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಮತ್ತು ಕಾಂಗ್ರೆಸ್ಸಿನ ಮಾನಸಿಕತೆ ಏನು ಎಂಬುದು ಜನರಿಗೆ ತಿಳಿಯಬೇಕು ಎಂದು ನುಡಿದರು. ಉನ್ನತ ಮಟ್ಟದ ತನಿಖೆ ಆದಾಗ ನಿಜವಾದ ಅವರ ನಡುವಿನ ಸಂಬಂಧ ಹೊರಕ್ಕೆ ಬರಲಿದೆ ಎಂದು ತಿಳಿಸಿದರು. ಎಸ್ ಡಿ ಪಿ ಐ ಕಾಂಗ್ರೆಸ್ಸಿಗೆ ಸಹಾಯ ಮಾಡಿಕೊಳ್ಳಲು ಮಾಡಿಕೊಡಲು ಹುಟ್ಟಿಕೊಂಡ ಪಕ್ಷ ಎಂಬುದು ಹೊರಬರಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್, ರಾಜ್ಯ ಬಿಜೆಪಿ ಎಸ್. ಸಿ. ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಇದನ್ನೂ ಓದಿ : Congress- SDPI link : 2018ರಲ್ಲಿ ಕಾಂಗ್ರೆಸ್‌, ಎಸ್‌ಡಿಪಿಐ ಒಳ ಒಪ್ಪಂದ: SDPI ನಾಯಕನ ಸ್ಫೋಟಕ ಹೇಳಿಕೆ

Exit mobile version