ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಯ ಅಂಗವಾಗಿ, ಸರ್ಕಾರದ ವತಿಯಿಂದ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಕಾಂಗ್ರೆಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳೂ ಬಹಿಷ್ಕರಿಸಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಎಂಎಲ್‌ಸಿ ರಮೇಶ್ ಬಾಬು ಹೇಳಿದ್ದಾರೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರವನ್ನು ರಮೇಶ್ ಬಾಬು ಬರೆದಿದ್ದಾರೆ.
ಯಾವುದೇ ರಾಜಕೀಯ ಪಕ್ಷ ಅಧಿಕಾರ ನಡೆಸುವಾಗ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜಧರ್ಮ ಪಾಲಿಸಬೇಕು. ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ವಚನಕ್ಕೆ ವಿರುದ್ಧವಾಗಿ ಸರ್ಕಾರ ನಡೆಸುವುದು ಲಜ್ಜೆಗೇಡಿತನದ ಪರಮಾವದಿ.
ರಾಜ್ಯ ಬಿಜೆಪಿ ಸರ್ಕಾರ, 75ನೇ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಜಾಹಿರಾತು ನೀಡಿದೆ. ಈ ಜಾಹೀರಾತಿನಲ್ಲಿ, ಸ್ವತಂತ್ರ ಸೇನಾನಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಭಾವಚಿತ್ರ ಮತ್ತು ವಿವರವನ್ನು ಪ್ರಜ್ಞಾಪೂರ್ವಕವಾಗಿ ಕೈ ಬಿಡಲಾಗಿದೆ. ಇದು ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಾಡಿದ ಅತಿ ದೊಡ್ಡ ಅಪಚಾರ. ನೆಹರೂ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ. ಇತಿಹಾಸ ತಿರುಚುವ ಸಂಚು ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.
ಕಾಶ್ಮೀರ ಪಂಡಿತ್ ಕುಟುಂಬದ ನೆಹರು 1912ರಲ್ಲಿ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡರು. ನೆಹರೂ ಅವರು ಮಹಾತ್ಮಾ ಗಾಂಧೀಜಿಯವರ ಪ್ರತಿ ಹೋರಾಟದ ಭಾಗವಾಗಿದ್ದರು. 1916ರ ಸ್ವದೇಶಿ ಚಳವಳಿ, 1920ರ ಅಸಹಕಾರ ಚಳುವಳಿ,1930 ಉಪ್ಪಿನ ಸತ್ಯಾಗ್ರಹ,1940 ನಾಗರಿಕ ಅವಿಧೇಯತೆ ಹೋರಾಟ, 1943-45ರ ಜೈಲು ವಾಸದ ಮೂಲಕ ಸ್ವತಂತ್ರ ಚಳವಳಿಯ ಗಾಂಧೀಜಿ ನಂತರದ ಮುಂಚೂಣಿ ನಾಯಕರಾಗಿದ್ದರು.
ಆರು ವರ್ಷ ವಿವಿಧ ಅವಧಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನೆಹರೂ, 18 ವರ್ಷ ಈ ದೇಶದ ಪ್ರಧಾನಿಯಾಗಿ ದೇಶದ ಉನ್ನತಿಗೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಅವರ ಪ್ರಗತಿಪರ ಚಿಂತನೆಗಳು ಸಂಸದೀಯ ಮೌಲ್ಯಗಳು ಜನತಂತ್ರದ ಆಶಯಗಳು ಗಾಂಧೀಜಿ ಚಿಂತನೆಗಳೊಂದಿಗೆ ಸಮೀಕರಣಗೊಂಡಿದ್ದು, ಭಾರತ ನಿರಂತರ ಅಭಿವೃದ್ಧಿಯತ್ತ ಮುಖ ಮಾಡಲು ಕಾರಣವಾಗಿದೆ. ಇಂತಹ ಮಹಾನ್ ಚೇತನ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರ ಮತ್ತು ವಿವರಣೆಯನ್ನು ಸರ್ಕಾರದ ಜಾಹೀರಾತಿನಲ್ಲಿ ನೀಡದೆ ಜನರ ಮುಂದೆ ಬಿಜೆಪಿ ಬೆತ್ತಲಾಗಿದೆ! ಲಜ್ಜೆಗೆಟ್ಟವರಿಗೆ ಬೆತ್ತಲಾಗುವುದು ಸಾಮಾನ್ಯ ಕ್ರಿಯೆ ಇರಬಹುದು ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಈ ಲಜ್ಜೆಗೇಡಿ ಕೃತ್ಯವನ್ನು ಕಾಂಗ್ರೆಸ್ ಮತ್ತು ನಾಡಿನ ಸಮಸ್ತ ಜನ ಖಂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೋಮವಾರ ನಡೆಯುವ ರಾಜ್ಯ ಬಿಜೆಪಿ ಸರ್ಕಾರದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಲು ಮನವಿ ಮಾಡುತ್ತೇನೆ. ಸರ್ಕಾರದ ಕಾರ್ಯಕ್ರಮ ಬಹಿಷ್ಕಾರ ಮಾಡಿ ಇಡೀ ರಾಜ್ಯದಲ್ಲಿ ಪಕ್ಷದ ವತಿಯಿಂದ 75ನೇ ಅಮೃತ ಮಹೋತ್ಸವ ಅದ್ದೂರಿಯಾಗಿ ಆಚರಿಸಲು ಕರೆ ನೀಡಿ. ಪಕ್ಷದ ಶಾಸಕರು, ಸಂಸದರು ಸರ್ಕಾರದ ಕಾರ್ಯಕ್ರಮ ಬಹಿಷ್ಕಾರ ಮಾಡಿ ಪಕ್ಷದ ಪ್ರತಿಭಟನೆಯನ್ನು ದಾಖಲಿಸಬೇಕಾಗಿ ಮನವಿ ಮಾಡುತ್ತೇನೆ. ಇದು ಈ ಸಂದರ್ಭದ ಅನಿವಾರ್ಯತೆ ಎಂದು ಭಾವಿಸುತ್ತೇನೆ ಎಂದು ರಮೇಶ್ ಬಾಬು ಮನವಿ ಮಾಡಿದ್ದಾರೆ.