Site icon Vistara News

Congress ticket : ಐವರು ವಲಸಿಗರಿಗೆ ಸಿಕ್ತು ಟಿಕೆಟ್‌, ಅಪ್ಪ-ಮಕ್ಕಳಿಗೂ ದೊರೆತಿದೆ ಬಂಪರ್‌, ಯತೀಂದ್ರಗೆ ಲಾಸ್‌!

Siddaramaiah yathindra

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗಾಗಿ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ (Congress ticket) ಮಾಡಿದೆ. ಇದರಲ್ಲಿ ಐವರು ವಲಸಿಗರಿಗೆ ಟಿಕೆಟಿ ಸಿಕ್ಕಿದೆ. ಇತ್ತೀಚೆಗಷ್ಟೇ ಬಿಜೆಪಿ ಮತ್ತು ಜೆಡಿಎಸ್‌ನಿಂದ ಬಂದಿರುವವರು ಟಿಕೆಟ್‌ ಪಡೆದುಕೊಂಡಿದ್ದಾರೆ. ಅದರ ಜತೆ ಅಪ್ಪ ಮತ್ತು ಮಗ/ಮಗಳು ಕೂಡಾ ಟಿಕೆಟ್‌ ಪಡೆದಿದ್ದಾರೆ. ಈ ನಡುವೆ ಕಳೆದುಕೊಂಡವರು ಯತೀಂದ್ರ ಸಿದ್ದರಾಮಯ್ಯ ಮಾತ್ರ

ವಲಸಿಗರಿಗೆ ಐದು ಟಿಕೆಟ್‌

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದವರಿಗೆ ಮಣೆ ಹಾಕಲಾಗಿದೆ. ಹಿರೇಕೇರೂರು ಕ್ಷೇತ್ರದಲ್ಲಿ ಕೃಷಿ ಸಚಿವ ಮತ್ತು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಆಪರೇಷನ್‌ ಕಮಲಕ್ಕೆ ಒಳಗಾದ ಬಿ.ಸಿ. ಪಾಟೀಲ್‌ ಅವರನ್ನು ಎದುರಿಸಲು ಯುಬಿ ಬಣಕಾರ್ ಗೆ ಟಿಕೆಟ್ ನೀಡಲಾಗಿದೆ. ಯು.ಬಿ. ಬಣಕಾರ್‌ ಅವರು ಮೊದಲು ಬಿಜೆಪಿಯಲ್ಲಿದ್ದು ಬಿ.ಸಿ. ಪಾಟೀಲ್‌ ಅವರನ್ನು ಎದುರಿಸುತ್ತಿದ್ದರು. ಈಗ ಕಾಂಗ್ರೆಸ್‌ನಿಂದ ಎದುರಿಸಲಿದ್ದಾರೆ.

ಹೊಸಪೇಟೆಯಲ್ಲಿ ಗವಿಯಪ್ಪಗೆ ಟಿಕೆಟ್ ಸಿಕ್ಕಿದ್ದರೆ, ಮೇಲ್ಮನೆ ಸದಸ್ಯನಾಗಿ ನಾಲ್ಕು ವರ್ಷ ಅಧಿಕಾರಾವಧಿ ಇದ್ದರೂ ಬಿಜೆಪಿ ಮತ್ತು ಮೇಲ್ಮನೆ ಸದಸ್ಯತ್ವಗಳೆರಡಕ್ಕೂ ರಾಜೀನಾಮೆ ನೀಡಿ ಬಂದಿರುವ ಪುಟ್ಟಣ್ಣ ಅವರು ರಾಜಾಜಿನಗರದಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಈ ಹಿಂದೆ ಸಚಿವರೂ ಆಗಿದ್ದ ಮುಳಬಾಗಿಲು ಎಚ್‌. ನಾಗೇಶ್‌ ಅವರು ಕಾಂಗ್ರೆಸ್‌ ಸೇರಿ ಮಹದೇವಪುರ ಟಿಕೆಟ್‌ ಪಡೆದಿದ್ದಾರೆ. ಇಲ್ಲಿ ಅವರು ಅರವಿಂದ ಲಿಂಬಾವಳಿ ಅವರನ್ನು ಎದುರಿಸಬೇಕಾಗಿದೆ. ಇತ್ತ ಚಿಕ್ಕನಾಯಕನಹಳ್ಳಿಯಲ್ಲಿ ಕಿರಣ್ ಕುಮಾರ್ ಗೆ ಟಿಕೆಟ್ ನೀಡಲಾಗಿದೆ.

91ರ ಹರೆಯದಲ್ಲೂ ಸ್ಪರ್ಧೆಯ ಉತ್ಸಾಹ

ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಟಿಕೆಟ್‌ ಸಿಗುತ್ತದೆಯೋ ಇಲ್ಲವೋ ಎನ್ನುವ ಚರ್ಚೆ ಜೋರಾಗಿರುವಾಗಲೇ ಕಾಂಗ್ರೆಸ್‌ನಲ್ಲಿ 91 ವರ್ಷದ ಶಾಮನೂರು ಶಿವಶಂಕರಪ್ಪ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಪ್ರಭಾವಿ ವೀರಶೈವ ಲಿಂಗಾಯತ ಮುಖಂಡರಾಗಿರುವ ಅವರು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮತ್ತೆ ಅಭ್ಯರ್ಥಿ. 91 ವಯಸ್ಸಿನಲ್ಲೂ ಸ್ಪರ್ಧೆ ಮಾಡಲು ಅವರು ಉತ್ಸಾಹ ತೋರಿದ್ದಾರೆ.

ಒಂದೇ ಮನೆಗೆ ಎರಡು ಟಿಕೆಟ್‌
ಈ ನಡುವೆ ಮೂರು ಕುಟುಂಬಗಳಿಗೆ ಎರಡು ಟಿಕೆಟ್‌ ಸಿಕ್ಕಿದೆ. ದಾವಣಗೆರೆಯಲ್ಲಿ ತಂದೆ ಶಾಮನೂರು ಶಿವಶಂಕರಪ್ಪ ಮತ್ತು ಎಸ್‌.ಎಸ್‌ ಮಲ್ಲಿಕಾರ್ಜುನ ಅವರಿಗೆ, ಬೆಂಗಳೂರಿನಲ್ಲಿ ಬಿಟಿಎಂ ಲೇಔಟ್‌ನಿಂದ ರಾಮಲಿಂಗಾ ರೆಡ್ಡಿ ಅವರಿಗೆ, ಜಯನಗರದಿಂದ ಪುತ್ರಿ ಸೌಮ್ಯಾ ರೆಡ್ಡಿ ಅವರಿಗೆ ಟಿಕೆಟ್‌ ನೀಡಲಾಗಿದೆ. ವಿಜಯನಗರದಿಂದ ಕೃಷ್ಣಪ್ಪ ಅವರಿಗೆ, ಗೋವಿಂದರಾಜ ನಗರದಿಂದ ಪುತ್ರ ಪ್ರಿಯಾಕೃಷ್ಣ ಅವರಿಗೆ ಟಿಕೆಟ್‌ ಸಿಕ್ಕಿದೆ.

ಒಂದೊಮ್ಮೆ ಸಿದ್ದರಾಮಯ್ಯ ಅವರು ಕೋಲಾರದಿಂದಲೇ ಸ್ಪರ್ಧಿಸುತ್ತಿದ್ದರೆ ಅವರ ಪುತ್ರ ಯತೀಂದ್ರ ಅವರಿಗೆ ವರುಣದಲ್ಲಿ ಟಿಕೆಟ್‌ ಸಿಗುತ್ತಿತ್ತು. ಆದರೆ, ಈಗ ಸಿದ್ದರಾಮಯ್ಯ ಅವರೇ ವರುಣದಿಂದ ಕಣಕ್ಕಿಳಿಯಲು ಟಿಕೆಟ್‌ ಪಡೆದಿರುವುದರಿಂದ ಯತೀಂದ್ರ ಚಾನ್ಸ್‌ ಮಿಸ್‌ ಆಗಿದೆ.

ಮಕ್ಕಳಿಗೆ ಟಿಕೆಟ್‌ ಕೊಡಿಸಲು ಯಶಸ್ವಿಯಾದ ಹಿರಿಯರು

ರಾಣೆಬೆನ್ನೂರು ಕ್ಷೇತ್ರದಿಂದ ಪ್ರಕಾಶ್ ಕೋಳಿವಾಡ್ ಕಣಕ್ಕೆ ಇಳಿಯಲಿದ್ದಾರೆ. ಇವರು ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ್‌ ಅವರ ಪುತ್ರ. ಪುತ್ರನಿಗೆ ಕೊಡುವಂತೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಬೆನ್ನು ಬಿದ್ದಿದ್ದ ಕೋಳಿವಾಡ ಇದರಲ್ಲಿ ಯಶಸ್ವಿಯಾಗಿದ್ದಾರೆ.

ಪಾವಗಡದಿಂದ ಎಚ್.ವಿ ವೆಂಕಟೇಶ ಕಣಕ್ಕೆ ಇಳಿಯಲಿದ್ದಾರೆ. ನಾನು ಸ್ಪರ್ಧೆ ಮಾಡಲ್ಲ, ಪುತ್ರನಿಗೆ ಟಿಕೆಟ್ ಕೊಡಿ ಎಂದು ಒತ್ತಾಯ ಮಾಡಿದ್ದರು ಹಾಲಿ ಶಾಸಕ ವೆಂಕಟರಮಪ್ಪ. ಕಾಂಗ್ರೆಸ್‌ ಹೈಕಮಾಂಡ್‌ ಇದಕ್ಕೆ ಒಪ್ಪಿದೆ.

ಮಗನನ್ನು ಒಪ್ಪಿಸಿದ ಎಚ್‌.ಸಿ. ಮಹದೇವಪ್ಪ

ಈ ಬಾರಿಯ ಚುನಾವಣೆಯಲ್ಲಿ ಎಚ್‌.ಸಿ. ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಿ ಮಗ ಸುನಿಲ್‌ ಬೋಸ್‌ಗೆ ಟಿ.ನರಸೀಪುರದಿಂದ ಟಿಕೆಟ್‌ ಕೊಡಿಸಲು ಮುಂದಾಗಿದ್ದರು. ಅದರೆ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ಧ್ರುವ ನಾರಾಯಣ ಅವರ ಸಾವಿನ ಹಿನ್ನೆಲೆಯಲ್ಲಿ ನಂಜನಗೂಡನ್ನು ಅವರ ಪುತ್ರ ದರ್ಶನ್‌ ಅವರಿಗೆ ಬಿಟ್ಟುಕೊಡಬೇಕಾಯಿತು. ಹೀಗಾಗಿ ಮಗನನ್ನು ಒಪ್ಪಿಸಿ ಟಿ. ನರಸೀಪುರ ಟಿಕೆಟ್‌ ಪಡೆದಿದ್ದಾರೆ ಮಹದೇವಪ್ಪ.

Exit mobile version