ಬೆಂಗಳೂರು: 2018ರ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಗೆಲುವು ಸಾಧಿಸಿ ದಾಖಲೆ ಬರೆದಿದ್ದ ಬೆಂಗಳೂರಿನ ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ (Congress ticket) ನೀಡಲು ಕಾಂಗ್ರೆಸ್ ಹಿಂದೇಟು ಹಾಕಿದೆ. 2020ರಲ್ಲಿ ನಡೆದ ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆಯಲ್ಲಿ ತನ್ನ ಮನೆಯನ್ನೇ ಕಳೆದುಕೊಂಡಿದ್ದ ಅಖಂಡ ಅವರ ಟಿಕೆಟ್‌ನ್ನು ಕಾಂಗ್ರೆಸ್ ಹೋಲ್ಡ್ ಮಾಡಿದೆ.
ಅಖಂಡ ಅವರು 90 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ಈಗಲೂ ಆ ಭಾಗದಲ್ಲಿ ಗೆಲ್ಲುವ ಛಾತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್‌ನ ಒಳ ರಾಜಕೀಯದ ಹಿನ್ನೆಲೆಯಲ್ಲಿ ಅವರ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ.
ಶಾಸಕರಾದ ಎನ್.ಎ ಹ್ಯಾರಿಸ್, ಕೆ.ಜಿ. ಜಾರ್ಜ್ ಅವರ ವಿರೋಧದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ತಡೆ ಹಿಡಿದಿದೆ ಎನ್ನಲಾಗಿದೆ. ಈ ಕ್ಷೇತ್ರದಿಂದ ಟಿಕೆಟ್ ಕೊಡಿಸುವಂತೆ ಸಂಪತ್ ರಾಜ್ ಹಠಕ್ಕೆ ಬಿದ್ದಿದ್ದರು.
ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ ಸಂಪತ್ ರಾಜ್ ಅವರಿಗೇ ಟಿಕೆಟ್ ನೀಡುವ ನಿಟ್ಟಿನಲ್ಲಿ, ಮನೆ ಕಳೆದುಕೊಂಡ ಶಾಸಕನ ಟಿಕೆಟ್ ಹೋಲ್ಡ್ ಮಾಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಸಂಧಾನ ನಡುವೆಯು ಕೆಲವು ಕ್ಷೇತ್ರ ಪೆಂಡಿಂಗ್
ಸಂಧಾನದ ನಡುವೆಯೂ ತೀವ್ರ ಪೈಪೋಟಿ ಇರುವ ಕೆಲವು ಕ್ಷೇತ್ರಗಳನ್ನು ಹೈಕಮಾಂಡ್ ಪೆಡಿಂಗ್ ಇಟ್ಟಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿರುವ ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ಪೆಂಡಿಂಗ್ ಇಡಲಾಗಿದೆ. ಇಲ್ಲಿನ ಟಿಕೆಟ್‌ಗೆ ವಿನಯ್ ಕುಲಕರ್ಣಿ ಮತ್ತು ಅಜ್ಜಂ ಪೀರ್ ಖಾದ್ರಿ ನಡುವೆ ಪೈಪೋಟಿ ಇತ್ತು. ಈಗ ವಿ.ಸೋಮಣ್ಣ ಅವರ ನಿರೀಕ್ಷೆಯಲ್ಲೂ ಬಿಜೆಪಿ ಇದೆ. ಹೀಗಾಗಿ ಪೆಂಡಿಂಗ್ ಇಟ್ಟಿದೆ ಎನ್ನಲಾಗಿದೆ.
ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡ ನಡುವೆ ಪೈಪೋಟಿ ಇದೆ. ಹೀಗಾಗಿ ಇಲ್ಲಿನ ಟಿಕೆಟ್ ಕೂಡಾ ಹೋಲ್ಡ್ ಆಗಿದೆ.
ವಿರೋಧದ ನಡುವೆಯೂ ಪುಟ್ಟಣ್ಣಗೆ ಟಿಕೆಟ್
ನಿಜವೆಂದರೆ ರಾಜಾಜಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿ ಇತ್ತು. ಆದರೂ ಮಾಜಿ ಎಂಎಲ್‌ಸಿ ಪುಟ್ಟಣ್ಣ ಅವರು ವಿರೋಧ ನಡುವೆಯೂ ಮೊದಲ ಹಂತದ ಪಟ್ಟಿಯಲ್ಲಿ ಟಿಕೆಟ್ ಕ್ಲಿಯರ್ ಮಾಡಿಸಿಕೊಂಡಿದ್ದಾರೆ.
ಪುಟ್ಟಣ್ಣ ಅವರು ಒಂದು ವರ್ಷದ ಹಿಂದಷ್ಟೇ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದರು. ಅಧಿಕಾರಾವಧಿ ಇನ್ನೂ ನಾಲ್ಕ ವರ್ಷ ಇದ್ದರೂ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಆ ಮೂಲಕ ಟಿಕೆಟ್ ದೃಢಪಡಿಸಿಕೊಂಡೇ ಕಾಂಗ್ರೆಸ್ ಸೇರಿದ್ದಾರೆ.
ರಾಜಾಜಿ ನಗರ ಬಿಜೆಪಿ ಭದ್ರಕೋಟೆ ಎಂದೇ ಹೇಳಲಾಗಿದ್ದು, ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗೆಲ್ಲುತ್ತಲೇ ಬಂದಿದ್ದಾರೆ. ಇದೀಗ ಈ ಬಾರಿ ಇಲ್ಲಿ ಪ್ರಬಲ ಸ್ಪರ್ಧೆ ಏರ್ಪಡುವ ಸಾಧ್ಯತೆ ಕಂಡುಬಂದಿದೆ.
ಇದನ್ನೂ ಓದಿ : Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್