Site icon Vistara News

Congress Protest: ಜು.12ರಂದು ಕೇಂದ್ರದ ವಿರುದ್ಧ ಕಾಂಗ್ರೆಸ್‌ ಮೌನ ಸತ್ಯಾಗ್ರಹ: ಡಿ.ಕೆ.ಶಿವಕುಮಾರ್‌

DCM DK Shivakumar press meet

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವತಿಯಿಂದ (Congress Protest) ಜುಲೈ 12ರಂದು ದೇಶಾದ್ಯಂತ ʼಮೌನ ಸತ್ಯಾಗ್ರಹʼ ನಡೆಸಲಾಗುತ್ತದೆ. ಅದರಂತೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ವಿಚಾರದಲ್ಲಿ ಆಗಿರುವ ತೀರ್ಪು ಗಮನಿಸಿದ್ದೀರಿ. ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ದೇಶದ ಉದ್ದಗಲಕ್ಕೂ ವಿಪಕ್ಷ ನಾಯಕರು, ರಾಹುಲ್ ಗಾಂಧಿ ಪರವಾಗಿ ನಿಲ್ಲುತ್ತೇವೆ ಎಂಬ ಸಂದೇಶ ಕೊಡಬೇಕಾಗಿದೆ. ಅವರಿಗೆ ಭಾರತ್‌ ಜೋಡೊ ಯಾತ್ರೆ ವೇಳೆ ದೇಶಾದ್ಯಂತ ಸಾಕಷ್ಟು ಬೆಂಬಲ ಸಿಕ್ಕಿದೆ. ಅವರು ನಡೆದು ಹೋದ ಕಡೆಗಳಲ್ಲಿ ಬಹುತೇಕ ಕಡೆ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿದರು.

ಇದನ್ನೂ ಓದಿ | Anna Bhagya: ಅನ್ನ ಭಾಗ್ಯ ಹಣ ವರ್ಗಾವಣೆಗೆ ಚಾಲನೆ: ಎರಡು ಜಿಲ್ಲೆ ಫಲಾನುಭವಿಗಳ ಖಾತೆಗೆ ತಲಾ 170 ರೂ. ರವಾನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ಮೇರೆಗೆ ಜುಲೈ 12 ರಂದು ಕೇಂದ್ರ ಸರ್ಕಾರದ ವಿರುದ್ಧ ಮೌನ ಸತ್ಯಾಗ್ರಹ ನಡೆಸಲು ಕಾಂಗ್ರೆಸ್ ತೀರ್ಮಾನ ಮಾಡಿದೆ. ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಪ್ರತಿಭಟನೆ ನಡೆಯಲಿದೆ. ಎಲ್ಲಾ ಕಾಂಗ್ರೆಸ್ ನಾಯಕರು ಹೋರಾಟದಲ್ಲಿ ಭಾಗವಹಿಸುತ್ತಾರೆ. ನಾನು, ಸಿಎಂ ಸೇರಿ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ರಾಹುಲ್‌ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂದು ದೊಡ್ಡ ಷಡ್ಯಂತ್ರ್ಯ ನಡೆಯುತ್ತಿದೆ. 7 ಲಕ್ಷ ಮತಗಳಲ್ಲಿ ಗೆದ್ದ ವ್ಯಕ್ತಿಯನ್ನು ರಾತ್ರೋ ರಾತ್ರಿ ಲೋಕಸಭಾ ಸದಸ್ಯ ಸ್ಥಾನದಿಂದ ಇಳಿಸಿದರು. ಆದರೆ, ರಾಹುಲ್‌ ಗಾಂಧಿಗೆ ಭಾರತ್ ಜೋಡೊ ಯಾತ್ರೆಯಲ್ಲಿ ಜನರ ಪ್ರೀತಿ ಸಿಕ್ಕಿದೆ. ಅವರು ಹೋದಲ್ಲೆಲ್ಲಾ ಪಕ್ಷ ಗೆದ್ದಿದೆ. ಅವರಿಂದ ನಮಗೆ ಒಂದು ಶಕ್ತಿ ಬಂದಿದೆ. ಮುಂದಿನ ದಿನಗಳಲ್ಲಿ ಅವರು, ದೇಶದ ಪೂರ್ವದಿಂದ ಪಶ್ಚಿಮ ಭಾಗಕ್ಕೆ ಪಾದಯಾತ್ರೆ ನಡೆಸಲಿದ್ದಾರೆ. ಹೀಗಾಗಿ ಅವರಿಗೆ ಹಿನ್ನಡೆ ಉಂಟು ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಇದನ್ನೂ ಓದಿ | Anna Bhagya: ಕೇಂದ್ರ ಸರ್ಕಾರ ಹೊಲಸು ರಾಜಕೀಯ ಮಾಡಿದೆ: ಅನ್ನ ಭಾಗ್ಯ ಹಣ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಆಕ್ರೋಶ

ಇಡೀ ದೇಶಾದ್ಯಂತ ಜುಲೈ 12ರಂದು ಮೌನ ಸತ್ಯಾಗ್ರಹ (Maun Satyagraha) ನಡೆಯುತ್ತದೆ. ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಾವು ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತೇವೆ. ಅಂದು ಅಧಿವೇಶನ ಇದ್ದರೂ ನಾವು ಬೇರೆಯವರಿಗೆ ಜವಾಬ್ದಾರಿ ವಹಿಸಿ ಹೋರಾಟದಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದರು.

Exit mobile version