Site icon Vistara News

LoK Sabha Election 2024 : ಕಾಂಗ್ರೆಸ್‌ ನಡೆ ಪಂಚಾಯಿತಿಗಳ ಕಡೆ; ಪಾದಯಾತ್ರೆ ʼಗ್ಯಾರಂಟಿʼ!

CM Siddaramaiah and DCM DK Shivakumar in Congress Padayatra at karnataka

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು (LoK Sabha Election 2024) ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಈ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ಅಲ್ಲದೆ, ಹೈಕಮಾಂಡ್‌ ಈ ಬಾರಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ (Karnataka Lok Sabha constituency) ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಜಯ ಸಾಧಿಸಲು ಟಾರ್ಗೆಟ್‌ ನೀಡಿದೆ. ಈ ಸಂಬಂಧ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಆಪರೇಷನ್‌ ಹಸ್ತದ (Operation Hasta) ವರೆಗೆ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದ ಗ್ಯಾರಂಟಿ ಯೋಜನೆಗಳನ್ನು (Congress Guarantee Scheme) ಈಗಾಗಲೇ ಅನುಷ್ಠಾನ ಮಾಡಲಾಗಿದೆ. ಹೀಗಾಗಿ ಗ್ಯಾರಂಟಿಗಳ ಸಂಪೂರ್ಣ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ (Congress Master Plan) ರೂಪಿಸಿದೆ. ಹೀಗಾಗಿ ಪಾದಯಾತ್ರೆ (Congress Padayatra) ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅದೂ ಪಂಚಾಯಿತಿ ಮಟ್ಟದಲ್ಲಿ (Panchayat Level) ಮಾಡುವ ಮೂಲಕ ಮನೆ-ಮನ ಮುಟ್ಟುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಇದು ಕಾಂಗ್ರೆಸ್ ಹಿರಿಯ ನಾಯಕರ ಸಲಹೆಯಾಗಿದೆ. ಹೇಗೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ. ಇದು ಜನರಿಗೂ ಗೊತ್ತಿರುವ ವಿಚಾರವೇ ಆದರೂ, ಸರಿಯಾಗಿ ಮನದಟ್ಟು ಮಾಡಬೇಕಿದೆ. ಈ ಮೂಲಕ ಕಾಂಗ್ರೆಸ್‌ ಸರ್ಕಾರ (Karnataka Congress Government) ಎಲ್ಲರ ಪರವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಜನರ ಸಮೀಪ ಹೋಗಿ ಮುಟ್ಟಿಸುವ ಕೆಲಸ ಆಗಬೇಕು. ಹೀಗಾಗಿ ಇದಕ್ಕೆ ಇರುವ ಮಾರ್ಗವೆಂದರೆ ಪಾದಯಾತ್ರೆಯನ್ನು ಕೈಗೊಳ್ಳುವುದು ಎಂಬ ಸಲಹೆಯನ್ನು ಮುಂದಿಟ್ಟಿದ್ದಾರೆ.

ಪಂಚಾಯಿತಿ ಮಟ್ಟದಲ್ಲಿ ಪಾದಯಾತ್ರೆ

ಈ ಬಾರಿ ಪಾದಯಾತ್ರೆಯು ಪಂಚಾಯಿತಿ ಮಟ್ಟದಲ್ಲಿ ಇರಬೇಕು. ವಿಧಾನಸಭೆ ಮಾದರಿಯಲ್ಲಿ ಲೋಕಸಭೆ ಚುನಾವಣೆಗೂ ಪಾದಯಾತ್ರೆ ಮಾಡುವುದು ಸೂಕ್ತವಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆಸಿದ ಪಾದಯಾತ್ರೆಗಳಿಂದ ಬಹಳವೇ ಪರಿಣಾಮ ಆಗಿದೆ. ಜನರು ಕಾಂಗ್ರೆಸ್‌ ಅನ್ನು ಒಪ್ಪಿ ಮತ ಹಾಕಿದ್ದಾರೆ. ಆಗ ಕೈಗೊಂಡ ಫ್ರೀಡಂ ಮಾರ್ಚ್, ಮೇಕೆದಾಟು, ಭಾರತ್ ಜೋಡೋ ಪಾದಯಾತ್ರೆಗಳು ಜನರ ಮನಸ್ಸನ್ನು ಗೆದ್ದಿವೆ.

ಈಗ ಲೋಕಸಭಾ ಚುನಾವಣೆ ಬರುತ್ತಿದೆ. ಇದರಲ್ಲಿ ಜನರ ಮನಸ್ಸನ್ನು ಗೆದ್ದು ಹೆಚ್ಚಿನ ಸೀಟನ್ನು ಪಡೆಯಬೇಕೆಂದರೆ ಪಾದಯಾತ್ರೆ ಮಾಡುವುದೇ ಸೂಕ್ತ. ಹಾಗಾಗಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಪಾದಯಾತ್ರೆ ನಡೆಸಬೇಕು. ಸರ್ಕಾರ ಅನುಷ್ಠಾನ ಮಾಡಿರುವ ಗ್ಯಾರಂಟಿಗಳ ಮಾಹಿತಿಯನ್ನು ಜನರಿಗೆ ತಲುಪಿಸಬೇಕು. ಆಗ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಕಾಂಗ್ರೆಸ್‌ಗೆ ವ್ಯಾಪಕ ಪ್ರಚಾರ ಸಿಗಲಿದೆ.

ಬೂತ್‌ ಮಟ್ಟದಲ್ಲಿ ಅಲೆ ಹೆಚ್ಚಲಿದೆ

ಇನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಾದಯಾತ್ರೆ ಮಾಡುವುದರಿಂದ ಸ್ಥಳೀಯ ನಾಯಕರಿಗೂ ಸ್ಫೂರ್ತಿ ಸಿಕ್ಕಂತೆ ಆಗುತ್ತದೆ. ಜತೆಗೆ ಬೂತ್ ಮಟ್ಟದಲ್ಲಿ ಸರ್ಕಾರದ ಪರವಾಗಿ ಅಲೆ ಮತ್ತಷ್ಟು ಹೆಚ್ಚಾಗಲಿದೆ. ಇದರಿಂದ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಸೇರ್ಪಡೆಯಾಗುತ್ತಾರೆ ಎಂಬ ಲೆಕ್ಕಾಚಾರವನ್ನೂ ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: Weather Report : ಸೆ.10ರವರೆಗೆ ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ

ಅಕ್ಟೋಬರ್‌ 2ರಂದು ಪಾದಯಾತ್ರೆ?

ಅಕ್ಟೋಬರ್ 2ರಿಂದ ಪಾದಯಾತ್ರೆ ಶುರು ಮಾಡಿದರೆ ಒಳ್ಳೆಯದ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸ್ವಾತಂತ್ರ್ಯ ನಡಿಗೆಯನ್ನು ಕ್ಷೇತ್ರವಾರು ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಪಂಚಾಯಿತಿ ಮಟ್ಟದಲ್ಲಿ ಮಾಡಿದರೆ ಲೋಕಸಭೆಯಲ್ಲಿ ಭರ್ಜರಿ ಜಯ ದಾಖಲಿಸಬಹುದು ಎಂಬ ಸಲಹೆಗಳು ಕೇಳಿಬಂದಿವೆ.

Exit mobile version