ಬೆಂಗಳೂರು: ಅನ್ನ ಭಾಗ್ಯ (Anna Bhagya scheme) ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ (Congress Government) ಅದಕ್ಕೆ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ ಎಂಬ ಆರೋಪದೊಂದಿಗೆ ಅದಕ್ಕೊಂದು ಆಂದೋಲನ ರೂಪ ನೀಡಲು ಮುಂದಾಗಿದೆ. ಜೂನ್ 20ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲು ಅದು ನಿರ್ಧರಿಸಿದೆ.
ಶುಕ್ರವಾರ (ಜೂನ್ 16) ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು, ಬಡವರಿಗೆ ದ್ರೋಹ ಮಾಡಲು ಹೊರಟ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.
ʻʻಕಾಂಗ್ರೆಸ್ ಐದು ಗ್ಯಾರೆಂಟಿಗಳನ್ನು ಜನರ ಮುಂದೆ ಇಟ್ಟಿದೆ. ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತೇವೋ ಇಲ್ಲವೋ ಎನ್ನುವುದನ್ನು ಬಿಜೆಪಿ ಚರ್ಚೆ ಮಾಡುತ್ತಿದೆ. ನಮ್ಮ ಗ್ಯಾರೆಂಟಿ ಟೀಕೆ ಮಾಡುತ್ತಿದೆ. ನಾವು ಮೊದಲ ಕ್ಯಾಬಿನೆಟ್ ಸಭೆಯಲ್ಲೇ ನಿರ್ಧಾರ ಕೈಗೊಳ್ಳುವ ಮೂಲಕ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಎರಡನೇ ಕ್ಯಾಬಿನೆಟ್ ಸಭೆಯಲ್ಲಿ ಟೈಮ್ ಲೈನ್ ಫಿಕ್ಸ್ ಮಾಡಿದ್ದೇವೆʼʼ ಎಂದು ನೆನಪಿಸಿದರು. ʻʻನಮಗೆ ಮಾಧ್ಯಮಗಳು ಸಹ ಎಚ್ಚರಿಕೆ ಕೊಡುವ ಕೆಲಸ ಮಾಡಿವೆ. ಜನರ ಕೆಲಸ ಮಾಡಿ ಎಂದು ಹೇಳಿವೆ. ನುಡಿದಂತೆ ನಾವು ನಡೆಯುತ್ತಿದ್ದೇವೆʼʼ ಎಂದು ಅವರು ಹೇಳಿದರು.
ನಡ್ಡಾ ಅವರು ಹೇಳಿದ ಮಾತು ನಿಜವಾಗಿದೆ!
ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸೋತರೆ ಕೇಂದ್ರ ಸರ್ಕಾರದ ನೆರವು ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಚುನಾವಣೆ ಪ್ರಚಾರ ಸಮಯದಲ್ಲಿ ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಅವರ ಮಾತು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ನಮ್ಮ ದೇಶದ ಪ್ರಧಾನಿಯವರಾದ ನರೇಂದ್ರ ಮೋದಿ ಅವರು ಕೂಡಾ ನಮ್ಮ ಮತದಾರರಿಗೆ ಬೆದರಿಸುತ್ತಿದ್ದರುʼʼ ಎಂದು ನೆನಪಿಸಿದರು.
ಭಾರತೀಯ ಆಹಾರ ನಿಗಮ ಅಕ್ಕಿ ಒದಗಿಸುವ ಬಗ್ಗೆ ಭರವಸೆ ನೀಡಿದ ಮರುದಿನವೇ ಕೇಂದ್ರ ಸರಕಾರ ಕೊಡುವುದಿಲ್ಲ ಎಂದು ಹೇಳಿದೆ. ಜೂನ್ 12ರಂದು ಅಕ್ಕಿ ನೀಡಲಾಗುವುದು ಎಂದು ಹೇಳಿದರೆ, ಜೂನ್ 13ರಂದು ಗೋಧಿ ಮತ್ತು ಅಕ್ಕಿ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಗೆ ಅವಕಾಶ ಇಲ್ಲ ಎಂದು ಪತ್ರ ಬರೆದಿದ್ದಾರೆ. ಬಿಜೆಪಿ ಪಕ್ಷ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿರುವುದಕ್ಕೆ, ದ್ವೇಷದ ರಾಜಕಾರಣ ಮಾಡುತ್ತಿರುವುದಕ್ಕೆ, ಕರ್ನಾಟಕದ ಜನರಿಗೆ ದ್ರೋಹ ಮಾಡುತ್ತಿರುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಾ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ
ಮುಂದಿನ ಮಂಗಳವಾರ (ಜೂನ್ 20ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಹನ್ನೊಂದು ಗಂಟೆಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿದ್ದೇವೆ. ಜಿಲ್ಲೆಗಳಲ್ಲಿ ಪ್ರತಿಭಟನೆ ಯಶಸ್ವಿಗೊಳಿಸಲು ಸೂಚನೆ ನೀಡಿದ್ದೇವೆ. ಈ ಮೂಲಕ ಕೇಂದ್ರದ ನಡೆಯ ಬಗ್ಗೆ ಜನರ ಗಮನ ಸೆಳೆಯಲು ಮುಂದಾಗಿದ್ದೇವೆ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ಜುಲೈ ತಿಂಗಳಿನಿಂದ ಅಕ್ಕಿ ಕೊಡುವುದು ಕಷ್ಟ
ನಾವು ಜುಲೈ ಒಂದರಿಂದಲೇ 10 ಕೆಜಿ ಅಕ್ಕಿ ಹಂಚಿಕೆ ಮಾಡಲು ನಿರ್ಧಾರ ಮಾಡಿದ್ದೆವು. ಆದರೆ ಈಗ ಅಕ್ಕಿ ಹೊಂದಿಸಬೇಕಾಗಿದೆ. ಹೀಗಾಗಿ ಸ್ವಲ್ಪ ದಿನ ತಡವಾಗುತ್ತದೆ. ಆದರೆ, ಯಾವ ಕಾರಣಕ್ಕೂ ಈ ಕಾರ್ಯಕ್ರಮ ನಿಲ್ಲಿಸಲ್ಲ ಎಂದು ಅವರು ಪ್ರಕಟಿಸಿದರು.
ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕೂಡಾ ಅಕ್ಕಿ ವಿಚಾರದಲ್ಲಿ ಕೇಂದ್ರದ ವಿರುದ್ಧ ಧ್ವನಿ ಎತ್ತಲಿ, ಮನವರಿಕೆ ಮಾಡಲಿ ಎಂದು ಅವರು ಮನವಿ ಮಾಡಿದರು. ದೆಹಲಿಯಲ್ಲಿ ರಾಜ್ಯದ ಬಿಜೆಪಿ ಸಂಸದರು ಪ್ರತಿಭಟನೆಗೆ ಸಾಥ್ ಕೊಡುವಂತೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸಚಿವ ಸುಧಾಕರ್, ಚಂದ್ರಪ್ಪ ಉಪಸ್ಥಿತರಿದ್ದರು.
ಇದನ್ನೂ ಓದಿ: Karnataka Politics : ಕರ್ನಾಟಕ ಮಿನಿ ಪಾಕಿಸ್ತಾನ ಆದೀತು, ರಾಜ್ಯ ಒಂದೇ ವರ್ಷದಲ್ಲಿ ದಿವಾಳಿ; ಬಿಜೆಪಿ ಎಚ್ಚರಿಕೆ