Site icon Vistara News

RSS: ಸರ್ಕಾರಿ-ಅನುದಾನಿತ ಶಾಲೆ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧ?: ಕಾಂಗ್ರೆಸ್‌ ಹೇಳಿದ್ದೇನು?

RSS function with old uniform

ಬೆಂಗಳೂರು: ಈಗಾಗಲೆ ಬಜರಂಗದಳ ನಿಷೇಧ, ಆರ್‌ಎಸ್‌ಎಸ್‌ ನಿಷೇಧದಂತಹ ಹೇಳಿಕೆಗಳ ಮೂಲಕ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಗ್ವಾದ ಜೋರಾಗಿದೆ. ಇದರ ನಡುವೆಯೇ ರಾಜ್ಯ ಸರ್ಕಾರದ ಶಾಲೆಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಕಾಂಗ್ರೆಸ್‌ ಹೇಳಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ, ಬಜರಂಗದಳವನ್ನು ನಿಷೇಧ ಮಾಡುವ ಬಗ್ಗೆ ಕಾಂಗ್ರೆಸ್‌ ಪ್ರಸ್ತಾಪ ಮಾಡಿದ್ದು ವಿವಾದವಾಗಿತ್ತು. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರತಿಕ್ರಿಯೆ ನೀಡುತ್ತಿರುವ ಪ್ರಿಯಾಂಕ್‌ ಖರ್ಗೆ, ಬಜರಂಗದಳವಷ್ಟೆ ಅಲ್ಲ ಆರ್‌ಎಸ್‌ಎಸ್‌ ನಿಷೇಧಕ್ಕೂ ಹಿಂಜರಿಯುವುದಿಲ್ಲ ಎನ್ನುತ್ತಿದ್ದಾರೆ.

ಇದಕ್ಕೆ ಬಿಜೆಪಿ ಕಡೆಯಿಂದಲೂ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಲಾಗುತ್ತಿದ್ದು, ಶುಕ್ರವಾರ ಮಾಜಿ ಸಚಿವ ಆರ್‌. ಅಶೋಕ್‌ ಸುದ್ದಿಗೋಷ್ಠಿ ನಡೆಸಿ ಹರಿಹಾಯ್ದಿದ್ದರು. ದಮ್‌ ಇದ್ದರೆ ಆರ್‌ಎಸ್‌ಎಸ್‌ ನಿಷೇಧಿಸಿ. ಮೂರು ತಿಂಗಳಲ್ಲಿ ನಿಮ್ಮ ಸರ್ಕಾರ ಬೀಳುತ್ತದೆ ಎಂದಿದ್ದರು. ಅದೇ ರೀತಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಆರ್‌ಎಸ್‌ಎಸ್‌ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್‌ ಇರಲ್ಲ ಎಂದಿದ್ದರು. ಇದಕ್ಕೆ ಕಾಂಗ್ರೆಸ್‌ ಟ್ವೀಟ್‌ ಮೂಲಕ ಉತ್ತರಿಸಿದೆ.

“ಭಾರತದಲ್ಲಿ ಆರ್‌ಎಸ್‌ಎಸ್‌ ಎಂಬ ವಿಚ್ಛಿದ್ರಕಾರಿ ಸಂಘಟನೆ 3 ಬಾರಿ ನಿಷೇಧಕ್ಕೊಳಪಟ್ಟಿತ್ತು. ಸರ್ದಾರ್ ಪಟೇಲರೇ ಭಾರತ ವಿರೋಧಿ ಸಂಘಟನೆ ಎಂಬ ಸರ್ಟಿಫಿಕೇಟ್ ನೀಡಿದ್ದರು. ಕಾಂಗ್ರೆಸ್ ಆಗಲೂ ಇತ್ತು ಈಗಲೂ ಇದೆ, ಮುಂದೆಯೂ ಇರಲಿದೆ. ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ತಡೆಯುವ ಕುರಿತು ವಿಮರ್ಶಿಸಲಾಗುವುದು” ಎಂದು ಹೇಳಿದೆ.

Congress tweet over banning RSS

ಕಾಂಗ್ರೆಸ್‌ನ ಈ ಹೇಳಿಕೆಯು ಮತ್ತಷ್ಟು ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಕಾಂಗ್ರೆಸ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ರವಿಕುಮಾರ್‌ ಎಸ್‌.ಪಿ. ಎನ್ನುವವರು, “ಕಾಂಗ್ರೆಸ್ ನಿಂದ ದೇಶದ ಮಹಾನ್ ನಾಯಕರೆ ಬಿಟ್ಟು ಬೇರೆ ಪಕ್ಷ ಕಟ್ಟಿ ಭಾರತ ಮಾತೆಯ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿ ವೀರ ಮರಣವನ್ನ ಹೊಂದಿದ್ದಾರೆ. ಅಷ್ಟೆ ಯಾಕೆ ಗಾಂಧೀಜಿಯವರೆ ಕಾಂಗ್ರೆಸ್‌ನ ವಿಸರ್ಜನೆ ಮಾಡಬೇಕು ಅಂದಿದ್ರು ಎಷ್ಟು ಗುಲಾಮಿ ಪಕ್ಷ ಆಗಿತ್ತು ಅನ್ನೊಕೆ ಇದೇ ಸಾಕಲ್ಲವೆ????” ಎಂದಿದ್ದಾರೆ.

ಶ್ರೀನಿಧಿ ಎನ್ನುವವರು ಪ್ರತಿಕ್ರಿಯಿಸಿ, “ಭಾರತವನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ರಕ್ಷಿಸಲು ಉತ್ತಮ ಸೇನೆಗಳಾದ ವಾಯುಪಡೆ ನೌಕಾಪಡೆ, ಭೂಸೇನೆ ಮತ್ತು CRPF, CISF, BSF, AR, ITBP ಅಂತಹ ಅರೆ ಸೈನಿಕ‌ಪಡೆಗಳು ಹಾಗೂ ರಾಜ್ಯಗಳಲ್ಲಿ ಉತ್ತಮ ಪೋಲಿಸ್ ವ್ಯವಸ್ಥೆ ಇರುವಾಗ ನೈತಿಕ ಪೋಲಿಸ್‌ಗಿರಿ‌ ನಡೆಸುವ ಯಾವುದೇ ಸಂಘಟನೆಯ ಅವಶ್ಯಕವಿಲ್ಲ. ಆದ್ಧರಿಂದ RSS, PFIನಂತಹ ಹಲವಾರು ಸಂಘಟನೆಗಳನ್ನು ನಿಷೇಧಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ: Karnataka Election: ಬಜರಂಗದಳಕ್ಕೆ ಅಪಮಾನ; 100 ಕೋಟಿ ರೂ. ಪರಿಹಾರ ಕೇಳಿ ಕಾಂಗ್ರೆಸ್‌ಗೆ ವಿಎಚ್‌ಪಿ ನೋಟಿಸ್

Exit mobile version