ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲಾಗುತ್ತದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಜಾರಿಗೆ ತಂದಿರುವ ಎಲ್ಲ ಕಾಯ್ದೆಗಳನ್ನೂ ವಾಪಸ್ ಪಡೆಯುತ್ತೇವೆ. ಹಣಕಾಸು ಮಸೂದೆಯ ನಡುವೆಯೇ ಗೋಹತ್ಯೆ ಕಾಯ್ದೆ ಜಾರಿ ಮಾಡಿದ್ದರು. ಗೋಹತ್ಯೆ ಕಾಯ್ದೆಯನ್ನೂ ವಾಪಸ್ ಪಡೆಯುತ್ತೇವೆ ಎಂದಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯು ವೈಯುಕ್ತಿಕ ಸ್ವಾತಂತ್ರ್ಯ ಹರಣ ಮಾಡುತ್ತದೆ. ಬೇರೆ ಧರ್ಮವನ್ನು ನಾನು ಒಪ್ಪಬೇಕಾದರೆ ಅದಕ್ಕೆ ಅರ್ಜಿ ಹಾಕಬೇಕು, ನಮ್ಮ ಎಲ್ಲ ವೈಯುಕ್ತಿಕ ಮಾಹಿತಿ ನೀಡಬೇಕು. ಆ ಮಾಹಿತಿಯನ್ನು ಸರ್ಕಾರದವರು ಸಾರ್ವಜನಿಕ ಮಾಹಿತಿಗೆ ನೀಡುತ್ತಾರೆ. ಅಂದಮೇಲೆ ವೈಯುಕ್ತಿಕ ಮಾಹಿತಿ ಹಂಚಿಕೊಳ್ಳಬೇಕೆ? ಬೇರೆಯವರ ಮುಂದೆ ಮಾಹಿತಿ ಏಕೆ ಸೋರಿಕೆಯಾಗಬೇಕು? ರಾಜ್ಯದ ಕಾನೂನು ಇಲಾಖೆ ಏನು ಮಾಡುತ್ತಿದೆ?
ಕೇಶವ ಕೃಪಾ ಮನವೊಲಿಸುವ ಸಲುವಾಗಿ ಈ ಕಾಯ್ದೆ ತಂದಿದ್ದಾರೆ. ಸರ್ಕಾರದ ಮೇಲೆ ಹಲವು ಆರೋಪಗಳಿದ್ದು, ಅದರಿಂದ ಗಮನವನ್ನು ಬೇರೆಡೆ ಸೆಳೆಯಲು ಈ ಕಾಯ್ದೆ ತರುತ್ತಿದ್ದಾರೆ. ಮತಾಂತರವಾಗಿದ್ದಾರೆ ಎಂದು ಸಂಬಂಧಿಕರು ದೂರು ಕೊಟ್ಟರೆ ಕೇಸ್ ಹಾಕುತ್ತಾರಂತೆ. ನಾವು ಮದುವೆ ಆಗುವುದಕ್ಕೆ ಮೂರನೆಯವರನ್ನು ಕೇಳಬೇಕೆ? ನಾನು ಇಚ್ಚಿಸಿ ಮತಾಂತರ ಆಗಬಹುದು. ಇದು ಧಾರ್ಮಿಕ ಸ್ವಾತಂತ್ರ್ಯ ಕೊಡುವ ಬಿಲ್ ಅಲ್ಲ, ಸ್ವಾತಂತ್ರ್ಯವನ್ನು ಕಸಿಯುವ ಬಿಲ್ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | 4B ಕೊಟ್ಟರೂ ಜನ ಸೇರಿಸಲು ಆಗಿಲ್ಲ: BJP ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ