Site icon Vistara News

Karnataka Election: ಹಗರಿಬೊಮ್ಮನಹಳ್ಳಿಯಲ್ಲಿ ಸಿದ್ದರಾಮಯ್ಯ ಪ್ರಚಾರ; ಕಾರಿಗೆ ಮುಗಿಬಿದ್ದು, ಹೂ ಮಳೆಗೈದ ಕಾರ್ಯಕರ್ತರು

congress workers rush to Siddaramaiah's car, shower flowers on him in hagaribommanahalli

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದಲ್ಲಿ ಕಾರು ಹತ್ತುವಾಗ ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಬಳಿಕ ಶನಿವಾರ ಸಂಜೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಗರಿಬೊಮ್ಮನಹಳ್ಳಿಯಲ್ಲಿ ಭರ್ಜರಿ ರೋಡ್‌ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಭೀಮಾನಾಯ್ಕ್ ಪರ ಪ್ರಚಾರ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಅವರ ಕಾರಿಗೆ ಮುಗಿಬಿದ್ದ ನೂರಾರು ಕಾರ್ಯಕರ್ತರು, ಹೂ ಮಳೆಗೈದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ಸಿದ್ದರಾಮಯ್ಯ ಕುಳಿತಿದ್ದ ಕಾರನ್ನು ಅಭ್ಯರ್ಥಿ ಭೀಮಾನಾಯ್ಕ್ ಚಾಲನೆ ಮಾಡಿದರು. ಹಗರಿಬೊಮ್ಮನಹಳ್ಳಿಯ ಬಸವಣ್ಣ ಸರ್ಕಲ್‌ನಿಂದ ಕಾಲೇಜ್ ಮೈದಾನದವರೆಗೆ ಸಿದ್ದರಾಮಯ್ಯ ರೋಡ್‌ ಶೋ ನಡೆಸಿದರು. ನಂತರ ಏರ್ಪಡಿಸಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಅವರು ಭಾಗವಹಿಸಿದರು.

ಇದನ್ನೂ ಓದಿ | Karnataka Election 2023: ಸಿದ್ದರಾಮಯ್ಯಗೆ ಸನ್‌ಸ್ಟ್ರೋಕ್‌; ಕಾರಲ್ಲಿ ನಿಂತು ಕೈಬೀಸುವಾಗಲೇ ಕುಸಿದುಬಿದ್ದರು

ಕಾಂಗ್ರೆಸ್ 100% ಗೆದ್ದೇ ಗೆಲ್ಲುತ್ತದೆ ಎಂದ ಸಿದ್ದರಾಮಯ್ಯ

ನಂತರ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತದೆ. ನಾವು ಅಧಿಕಾರಕ್ಕೆ ಬಂದ ನಂತರ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿನ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮುಗಿಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಆಯ್ತು. ಸೂರು ಇಲ್ಲದ ಜನರಿಗೆ ನಾವೂ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೇವೆ. ಆದರೆ, ಬಿಜೆಪಿಯವರು ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲ ಎಂದು ಕಿಡಿಕಾರಿದರು.

ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿಯವರು ಲೂಟಿ ಹೊಡೆಯುವ ಕೆಲಸ ಮಾಡಿದ್ದಾರೆ. 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಪ್ರಧಾನಿ ಮೋದಿಗೆ ಗುತ್ತಿಗೆದಾರರು ಪತ್ರ ಬರೆದರು. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ, ತನಿಖೆಯನ್ನೂ ಮಾಡಿಸಲಿಲ್ಲ. ಬೊಮ್ಮಾಯಿ ಭಂಡತನದಿಂದ ತನಿಖೆಗೆ ಒಪ್ಪಲಿಲ್ಲ. ಪಿಎಸ್‌ಐ ನೇಮಕಾತಿಯಲ್ಲಿ 60 ರಿಂದ 80 ಲಕ್ಷ ರೂಪಾಯಿ ಲಂಚ ಪಡೆದು ಒಬ್ಬ ಎಡಿಜಿಪಿ ಜೈಲಿಗೆ ಹೋದರು. ಇಷ್ಟು ಸಾಕ್ಷ್ಯ ಸಾಕಲ್ಲವೇ? ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್‌ನಿಂದಲೇ ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಕೇಳಿದ. ಆದರೆ, ಆ ಗುತ್ತಿಗೆದಾರ ಸಾಲದ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡರು ಎಂದು ಆರೋಪಿಸಿದರು.

ಸಂತೋಷ ಪಾಟೀಲ ಆತ್ಮಹತ್ಯೆ ನಂತರ ನಾವು ಧರಣಿ ಮಾಡಿದ ಬಳಿಕ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅದು ನಿಮಗೆ ದಾಖಲೆ ಅಲ್ಲವೇ? ಇತ್ತೀಚೆಗೆ ಬಿಜೆಪಿ ಶಾಸಕ ವಿರೂಪಾಕ್ಷ ಮಾಡಾಳ್ ಅವರ ಪುತ್ರ ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದ. ಅವರ ಮನೆ ಶೋಧ ಮಾಡಿದಾಗ 8 ಕೋಟಿ ರೂಪಾಯಿ ಸಿಕ್ಕಿತ್ತು. ಬಸವರಾಜ ಬೊಮ್ಮಾಯಿಯವರೇ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಕಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Karnataka Election 2023: ನಾನು 1 ವರ್ಷದಲ್ಲಿ ಮಾಡಿದ್ದನ್ನು ಮೋದಿಗೆ 10 ವರ್ಷದಲ್ಲಿ ಮಾಡಲಾಗಿಲ್ಲ: ಎಚ್.ಡಿ. ಕುಮಾರಸ್ವಾಮಿ

ಮಾತೆತ್ತಿದರೆ ಸಿದ್ದರಾಮಯ್ಯ ಕಾಲದಲ್ಲೂ ಭ್ರಷ್ಟಾಚಾರ ಇತ್ತು ಎನ್ನುತ್ತಾರೆ. 5 ವರ್ಷದಲ್ಲಿ ನಮ್ಮ ಮೇಲೆ ಯಾರು ಲಂಚದ ಆರೋಪ ಮಾಡಲಿಲ್ಲ. ಆದರೆ, ಬಿಜೆಪಿಯವರು ಜನರಿಗೆ ಬರೀ ಸುಳ್ಳು ಹೇಳಿಕೊಂಡು ಭಂಡತನ ಪ್ರರ್ದಶನ ಮಾಡಿ ಓಡಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದ ವೇಳೆ ನುಡಿದಂತೆ ನಡೆದಿದ್ದೇನೆ. ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ ಬಿಜೆಪಿಯವರು 600 ಭರವಸೆಗಳನ್ನು ನೀಡಿದ್ದರು. ಇಲ್ಲಿಯವರಿಗೆ 66 ಭರವಸೆಗಳನ್ನೂ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿಯವರೇ ನಿಮಗೆ ಕರ್ನಾಟಕದ ಪರಿಸ್ಥಿತಿ ಬಗ್ಗೆ ಗೊತ್ತಿಲ್ಲ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ 5 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಸಾಲ ಮಾಡಿದ್ದಾರೆ. ಮತ್ತೊಮ್ಮೆ ಬಿಜೆಪಿಯವರು ಅಧಿಕಾರಕ್ಕೆ ಬಂದರೆ ರಾಜ್ಯ, ಪ್ರಜಾಪ್ರಭುತ್ವ, ‌ಸಂವಿಧಾನ ಉಳಿಯಲ್ಲ. ಬಳ್ಳಾರಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಲಿಂಗಾಯತ ಯಾರಿಗೂ ಟಿಕೆಟ್ ನೀಡಿಲ್ಲ. ಇವರು ಹೇಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಾಡುತ್ತಾರೆ ಎಂದು ಹರಿಹಾಯ್ದರು.

Exit mobile version