ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ (Exam Scam) ಪ್ರಮುಖ ಆರೋಪಿ, ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ಗೆ ಸಲಾಂ ಎಂದಿದ್ದ ಪೊಲೀಸ್ ಕಾನ್‌ಸ್ಟೇಬಲ್ ಅನ್ನು ಅಮಾನತು ಮಾಡಲಾಗಿದೆ. ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್. ಚೇತನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ನಗರದ ಬ್ರಹ್ಮಪೂರ ಪೊಲೀಸ್ ಠಾಣೆ ಕಾನ್‌ಸ್ಟೇಬಲ್ ಎಂ.ಜಿ. ಭರಗಿ ಅಮಾನತುಗೊಂಡ ಪೇದೆ. ಜಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಆರ್.ಡಿ. ಪಾಟೀಲ್‌ನ ಕರೆತಂದಾಗ ಆತನಿಗೆ ಕಾನ್‌ಸ್ಟೇಬಲ್ ನಮಸ್ಕಾರ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ತೆರಳಿದಾಗ ಆರೋಪಿಯನ್ನು ಬೇಗನೆ ಒಳಗೆ ಕರೆದುಕೊಂಡು ಹೋಗದೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಅವಕಾಶ ಮಾಡಿಕೊಟ್ಟು ಕರ್ತವ್ಯದಲ್ಲಿ ದುರ್ನಡತೆ, ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.
ಮಾಧ್ಯಮಗಳ ಮುಂದೆ ಹೇಳಿಕೆ; ಮತ್ತೊಬ್ಬರು ಸಸ್ಪೆಂಡ್
ಮತ್ತೊಂದು ಪ್ರಕರಣದಲ್ಲಿ ಅಶೋಕ ನಗರ ಪೊಲೀಸ್ ಕಾನ್‌ಸ್ಟೇಬಲ್ ಕೂಡ ಅಮಾನತುಗೊಂಡಿದ್ದಾರೆ. ಮಲ್ಲಿಕಾರ್ಜುನ್ ಹೆಬ್ಬಾಳ ಅಮಾನತಾದ ಪೊಲೀಸ್ ಕಾನ್‌ಸ್ಟೇಬಲ್. ಆರ್.ಡಿ.ಪಾಟೀಲ್ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಆರ್.ಡಿ. ಪಾಟೀಲ್ ಮಾತನಾಡಲು ಬಿಟ್ಟಿದ್ದಕ್ಕೆ ಪೇದೆಯನ್ನು ಅಮಾನತು ಮಾಡಲಾಗಿದೆ.
ಅಮಾನತಿನ ಅವಧಿಯಲ್ಲಿ ಬೇರೆ ಯಾವುದೇ ಖಾಸಗಿ ಕೆಲಸ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಪ್ರತ್ಯೇಕವಾಗಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಜತೆಗೆ ಜೀವನಾಧಾರ ಭತ್ಯೆ ತಡೆ ಹಿಡಿಯಲಾಗುವುದು. ಹಾಗೆಯೇ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ ಹಾಗೂ ರಜೆ ಸೌಲಭ್ಯ ಪಡೆಯುವಂತಿಲ್ಲ ಎಂದು ಪೇದೆಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ | Murder Case : ಗೆಳೆಯರ ಕಾಲೆಳೆದು ಮಾತನಾಡುವ ಮುನ್ನ ಹುಷಾರ್; ಇಲ್ಲಿ ಏನಾಗಿದೆ ನೋಡಿ!
ಮುರುಘಾ ಶ್ರೀಗಳ 2ನೇ ಪೋಕ್ಸೊ ಪ್ರಕರಣದ ವಿಚಾರಣೆ ನ. 20ಕ್ಕೆ ಮುಂದೂಡಿಕೆ
ಚಿತ್ರದುರ್ಗ: ಮುರುಘಾ ಶರಣರ ವಿರುದ್ಧದ 2ನೇ ಪೋಕ್ಸೊ ಪ್ರಕರಣದ ವಿಚಾರಣೆಯನ್ನು ನ. 20ಕ್ಕೆ ಜಿಲ್ಲಾ ನ್ಯಾಯಾಲಯ ಮುಂದೂಡಿದೆ.
2ನೇ ಕೇಸಲ್ಲಿ ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರು ಕೋರ್ಟ್ ಮುಂದೆ ಹಾಜರಾಗಬೇಕಿತ್ತು. ಆದರೆ, ಅವರು ವಿಸಿ ಮೂಲಕ ಹಾಜರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ನೀಡಬೇಕು ಎಂದು ಸರ್ಕಾರಿ ವಕೀಲ ಎಚ್.ಆರ್ ಜಗದೀಶ್ ವಾದ ಮಂಡಿಸಿದ್ದಾರೆ.
ಇದಕ್ಕೆ ಸ್ವಾಮೀಜಿ ಪರ ವಕೀಲರಿಂದ ಆಕ್ಷೇಪ ವ್ಯಕ್ತವಾಗಿದೆ. ಪರ, ವಿರೋಧ ವಾದ ಆಲಿಸಿದ ನ್ಯಾಯಾಧೀಶೆ ಬಿ.ಕೆ. ಕೋಮಲಾ ಅವರು, ನ. 20ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ