ಚಿತ್ರದುರ್ಗ: ಜಿಲ್ಲೆಯ ಕವಾಡಿಗರಹಟ್ಟಿ ವಿಷ ಜಲ ದುರಂತ (Contaminated Water) ಪ್ರಕರಣ ಆರನೇ ಬಲಿಯನ್ನು ಪಡೆದುಕೊಂಡಿದೆ. ಇನ್ನೂ ಜಗದ ಬೆಳಕು ನೋಡದ, ತಾಯಿಯ ಗರ್ಭದಲ್ಲೇ ಬೆಚ್ಚಗಿದ್ದ ಎಂಟು ತಿಂಗಳ ಭ್ರೂಣ ಶಿಶುವೊಂದು (Unborn child) ಪ್ರಾಣ ಕಳೆದುಕೊಂಡಿದೆ. ಇದರೊಂದಿಗೆ ಯಾರದೋ ತಪ್ಪಿಗೆ ನಿಷ್ಪಾಪಿ ಜೀವವೊಂದು ಉಸಿರುಚೆಲ್ಲಿದಂತಾಗಿದೆ.
ಭಾನುವಾರ ರಾತ್ರಿ ಕವಾಡಿಗರಹಟ್ಟಿಯ (Kawadigara Hatti) ಟ್ಯಾಂಕ್‌ನಿಂದ ಬಿಟ್ಟ ನೀರನ್ನು ಸೇವಿಸಿ 160ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಈಗಾಗಲೇ ಹಟ್ಟಿಯ ನಿವಾಸಿಗಳಾದ ಮಂಜುಳಾ, ರಘು, ಪ್ರವೀಣ, ರುದ್ರಪ್ಪ ಮತ್ತು ಪಾರ್ವತಮ್ಮ ಎಂಬ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಇನ್ನೂ ಹುಟ್ಟದಿರುವ ಪುಟ್ಟ ಮಗು ಹೊಟ್ಟೆಯೊಳಗೇ ಪ್ರಾಣ ಕಳೆದುಕೊಂಡು ಆರನೇ ಜೀವ ಬಲಿ ಪಡೆದಂತಾಗಿದೆ.
ಬೆಂಗಳೂರಿನಲ್ಲಿ ಮೃತಪಟ್ಟ ರಘುವಿನ ತಂಗಿಯ ಮಗುವಿದು
ಭಾನುವಾರ ರಾತ್ರಿ ನಡೆದ ದುರಂತದಲ್ಲಿ ಬೆಳಗ್ಗಿನ ಜಾವ ಮಂಜುಳಾ ಎಂಬ 27 ವರ್ಷದ ಯುವತಿ ಮೃತಪಟ್ಟಿದ್ದರು. ಅದಾದ ಬಳಿಕ ದಾಖಲಾದ ಸಾವು ರಘು ಎಂಬ ಯುವಕನದ್ದು. ಭಾನುವಾರ ರಾತ್ರಿ ಕವಾಡಿಗರ ಹಟ್ಟಿಯಲ್ಲಿ ಊಟ ಮಾಡಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ರಘು ಅಲ್ಲಿ ಅಸ್ವಸ್ಥರಾಗಿ ವಿಕ್ಟೋರಿಯ ಆಸ್ಪತ್ರೆ ಸೇರಿದ್ದರು. ಅಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದರು. ಈಗ ಮೃತಪಟ್ಟಿರುವುದು ರಘು ಅವರ ತಂಗಿ ಉಷಾ ಅವರ ಹೊಟ್ಟೆಯೊಳಗಿದ್ದ ಮಗು.
ರಘು ಅವರ ಸಹೋದರಿ, 22 ವರ್ಷದ ಉಷಾ ಅವರಿಗೆ ಒಂದು ವರ್ಷದ ಹಿಂದೆ ನಾಗರಾಜ ಎಂಬವರ ಜತೆ ಮದುವೆಯಾಗಿತ್ತು. ಆಕೆ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಚೊಚ್ಚಲ ಹೆರಿಗೆಗೆಂದು ತಾಯಿ ಮನೆಗೆ ಕಳುಹಿಸಿದ್ದರು. ಭಾನುವಾರದಂದು ಅವರ ಗಂಡ ನಾಗರಾಜ ಕೂಡಾ ಕವಾಡಿಗರ ಹಟ್ಟಿಗೆ ಬಂದಿದ್ದರು.
ಇತ್ತ ಭಾನುವಾರ ಕಲುಷಿತ ನೀರಿನ ದುರಂತ ಸಂಭವಿಸುತ್ತಿದ್ದಂತೆಯೇ ರಘು ಅವರ ಸಾವು ಸಂಭವಿಸಿತ್ತು. ಅಣ್ಣನ ಸಾವಿನಿಂದ ತೀವ್ರವಾಗಿ ನೊಂದಿದ್ದ ಉಷಾ ಕಂಗಾಲಾಗಿದ್ದರು. ಇದರ ನಡುವೆಯೇ ಅವರಿಗೂ ಗಂಡ ನಾಗರಾಜ್ ಗೂ ವಾಂತಿ ಬೇಧಿ ಶುರುವಾಗಿತ್ತು.
ನಿಜವೆಂದರೆ ಎಂಟು ತಿಂಗಳು 10 ದಿನಗಳ ಗರ್ಭಿಣಿಯಾಗಿರುವ ಉಷಾ ಅವರಿಗೆ ಆಗಸ್ಟ್ 12ರಂದು ಹೆರಿಗೆಗೆ ದಿನ ನೀಡಿದ್ದರು. ವಾಂತಿ ಬೇಧಿಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿದ್ದ ಉಷಾ ಅವರಿಗೆ ಗರ್ಭಿಣಿಯ ನೆಲೆಯಲ್ಲಿ ಆರೈಕೆಯನ್ನೂ ಮಾಡಲಾಗುತ್ತಿತ್ತು. ಕಲುಷಿತ ನೀರಿನ ಪರಿಣಾಮ ಮಗುವಿನ ಮೇಲೆ ಆಗದಂತೆಯೂ ಎಚ್ಚರಿಕೆ ವಹಿಸಲಾಗಿತ್ತು. ಆದರೆ, ಅದ್ಯಾವುದೂ ಫಲ ನೀಡದೆ ಪುಟ್ಟ ಹೃದಯ ಸ್ತಬ್ಧವಾಗಿದೆ.
ಶುಕ್ರವಾರ ಆಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿದಾಗ ಗರ್ಭದೊಳಿಗಿನ ಶಿಶುವಿನ ಹೃದಯ ಸ್ತಬ್ಧವಾಗಿದ್ದು ತಿಳಿದುಬಂತು. ಕೂಡಲೇ ಸಿಜೆಯಿರಿನ್ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೈದ್ಯರು ಶಿಶುವನ್ನು ಹೊರತೆಗೆದಿದ್ದಾರೆ. ತಾಯಿಯ ಗರ್ಭದಲ್ಲೇ ಮಗುವೊಂದು ಸಾವನ್ನಪ್ಪಿರುವುದು ದುರಂತದ ತೀವ್ರತೆಗೆ ಸಾಕ್ಷಿಯಾಗಿದೆ.
ಮೃತಪಟ್ಟ ಇತರ ಐವರು ದುರ್ದೈವಿಗಳು
- ಮಂಜುಳಾ: ಕವಾಡಿಗರಹಟ್ಟಿಯಲ್ಲಿ ನಡೆದ ದುರಂತದಲ್ಲಿ ಮೊದಲು ಮೃತಪಟ್ಟಿದ್ದು ಮಂಜುಳಾ ಎಂಬ 27 ವರ್ಷದ ಯುವತಿ. ನೀರು ಕುಡಿದ ಬಳಿಕ ಅಸ್ವಸ್ಥಗೊಂಡ ಹಲವರಲ್ಲಿ ಆಕೆ ಒಬ್ಬರು. ಆದರೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
- ರಘು : ಕವಾಡಿಗರ ಹಟ್ಟಿಯ ರಘು (26) ಭಾನುವಾರ ದುರಂತ ನಡೆದ ದಿನ ರಾತ್ರಿ ಮನೆಯಲ್ಲಿ ಊಟ ಮಾಡಿ ಕೆಲಸದ ನಿಮಿತ್ತ ಬೆಂಗಳೂರು ಬಸ್ ಹತ್ತಿದ್ದರು. ಆದರೆ, ಬೆಳಗ್ಗೆ ಬೆಂಗಳೂರಿನಲ್ಲಿ ಇಳಿದಾಗ ವಾಂತಿ ಬೇಧಿ ಶುರುವಾಗಿತ್ತು. ಅಷ್ಟು ಹೊತ್ತಿಗೆ ಅವರಿಗೆ ಊರಿನಲ್ಲಿ ನಡೆದ ಘಟನಾವಳಿಗಳ ವಿವರ ದೊರಕಿತ್ತು. ಕೂಡಲೇ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿದರು. ಆದರೆ, ಅಲ್ಲೂ ಅವರ ಪ್ರಾಣ ಉಳಿಯಲಿಲ್ಲ.
- ಪ್ರವೀಣ್: ವಡ್ಡರಸಿದ್ದವ್ವನ ಹಳ್ಳಿಯ ಪ್ರವೀಣ್ ಕಲುಷಿತ ನೀರಿಗೆ ನಡೆದ ಮೂರನೇ ಬಲಿ. ಪ್ರವೀಣ್ ಅವರು ಭಾನುವಾರ ರಾತ್ರಿ ಕವಾಡಿಗರ ಹಟ್ಟಿಗೆ ಬಂದಿದ್ದು, ಅಲ್ಲಿ ನೀರು ಕುಡಿದಿದ್ದರು. ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಪ್ರಾಣ ಉಳಿಯಲಿಲ್ಲ.
- ರುದ್ರಪ್ಪ: ಕವಾಡಿಗರ ಹಟ್ಟಿ ನಿವಾಸಿ ರುದ್ರಪ್ಪ (57) ಅವರು ಶುಕ್ರವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಸಾವಿಗೀಡಾಗಿದ್ದಾರೆ. ಕಳೆದ ಮೂರು ದಿನದಿಂದ ಇವರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
- ಪಾರ್ವತಮ್ಮ: ಕವಾಡಿಗರ ಹಟ್ಟಿಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಪಾರ್ವತಮ್ಮ (60) ಅವರು ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಭಾನುವಾರ ಅಸ್ವಸ್ಥರಾಗಿದ್ದ ಪಾರ್ವತಮ್ಮ ಅವರು ಬಳಿಕ ಸ್ವಲ್ಪ ಗುಣಮುಖರಾಗಿ ಮನೆಗೆ ಹೋಗಿದ್ದರು. ಅವರು ಪಾರ್ಶ್ವ ವಾಯು ಪೀಡಿತರಾಗಿರುವುದರಿಂದ ಅವರಿಗೆ ಕಳೆದ ಮೂರು ದಿನಗಳಿಂದ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರ ಸಾವೂ ಸಂಭವಿಸಿದೆ.