Site icon Vistara News

Contaminated Water : ಕವಾಡಿಗರಹಟ್ಟಿ ದುರಂತದಲ್ಲಿ 5ನೇ ಸಾವು; ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು?

Contaminated water

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ (Chitradurga News) ಕವಾಡಿಗರ ಹಟ್ಟಿಯಲ್ಲಿ ಸಂಭವಿಸಿದ ಕಲುಷಿತ ನೀರು (Contaminated Water) ದುರಂತದಲ್ಲಿ ಐದನೇ ಸಾವು ಸಂಭವಿಸಿದೆ. ಇನ್ನೂ ನಾಲ್ಕಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಇಷ್ಟೆಲ್ಲ ಸಾಲು ಸಾಲು ಸಾವುಗಳು ಸಂಭವಿಸಿದರೂ ಸರ್ಕಾರವಾಗಲೀ, ಆಡಳಿತವಾಗಲೀ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ವಿಷಪ್ರಾಶನ (Poisoning Case) ಪ್ರಕರಣದ ಹಿಂದಿರುವ ಜಾತಿ ವೈಷಮ್ಯದ (Caste revenge) ಬಗ್ಗೆಯಾಗಲೀ, ಇದರಲ್ಲಿ ಭಾಗಿಯಾದ ದುಷ್ಟರ ವಿಚಾರವಾಗಲೀ ಯಾರೂ ಚಕಾರವೆತ್ತದೆ ಕೇವಲ ನೀರಿನ ಪರೀಕ್ಷೆಯಲ್ಲಿ ಮತ್ತು ಕೆಲವರ ಅಮಾನತು ಸರ್ಕಸ್‌ನಲ್ಲಿ ನಿರತವಾಗಿದೆ. ಈ ಕುರಿತು ಜನಾಕ್ರೋಶ ಭುಗಿಲೆದ್ದಿದ್ದರೂ ಕಣ್ಣೆದುರು ಸಂಭವಿಸುತ್ತಿರುವ ಸರಣಿ ಸಾವಿನ ನಡುವೆ ಅಲ್ಲಿ ಭಯವೇ ಆವರಿಸಿದೆ.

ಭಾನುವಾರ ರಾತ್ರಿ ಇಲ್ಲಿ ನೀರು ಸೇವಿಸಿದ ಸುಮಾರು 40ಕ್ಕೂ ಅಧಿಕ ಮಂದಿಯಲ್ಲಿ ವಾಂತಿ ಮತ್ತು ಅತಿಸಾರ ಕಾಣಿಸಿಕೊಂಡಿತ್ತು. ಅವರನ್ನು ಚಿತ್ರದುರ್ಗದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ, ಹಾಗೂ ಕೆಲವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದಾದ ಬಳಿಕವೂ ಹಲವರಲ್ಲಿ ಸಮಸ್ಯೆ ಕಾಣಿಸಿಕೊಂಡು ಈಗ ಒಟ್ಟು 54 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮಧ್ಯೆ ಐವರು ಆಗಲೇ ಪ್ರಾಣ ಕಳೆದುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು

ಮೃತಪಟ್ಟ ದುರ್ದೈವಿಗಳು

  1. ಮಂಜುಳಾ: ಕವಾಡಿಗರಹಟ್ಟಿಯಲ್ಲಿ ನಡೆದ ದುರಂತದಲ್ಲಿ ಮೊದಲು ಮೃತಪಟ್ಟಿದ್ದು ಮಂಜುಳಾ ಎಂಬ 27 ವರ್ಷದ ಯುವತಿ. ನೀರು ಕುಡಿದ ಬಳಿಕ ಅಸ್ವಸ್ಥಗೊಂಡ ಹಲವರಲ್ಲಿ ಆಕೆ ಒಬ್ಬರು. ಆದರೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
  2. ರಘು : ಕವಾಡಿಗರ ಹಟ್ಟಿಯ ರಘು (26) ಭಾನುವಾರ ದುರಂತ ನಡೆದ ದಿನ ರಾತ್ರಿ ಮನೆಯಲ್ಲಿ ಊಟ ಮಾಡಿ ಕೆಲಸದ ನಿಮಿತ್ತ ಬೆಂಗಳೂರು ಬಸ್‌ ಹತ್ತಿದ್ದರು. ಆದರೆ, ಬೆಳಗ್ಗೆ ಬೆಂಗಳೂರಿನಲ್ಲಿ ಇಳಿದಾಗ ವಾಂತಿ ಬೇಧಿ ಶುರುವಾಗಿತ್ತು. ಅಷ್ಟು ಹೊತ್ತಿಗೆ ಅವರಿಗೆ ಊರಿನಲ್ಲಿ ನಡೆದ ಘಟನಾವಳಿಗಳ ವಿವರ ದೊರಕಿತ್ತು. ಕೂಡಲೇ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿದರು. ಆದರೆ, ಅಲ್ಲೂ ಅವರ ಪ್ರಾಣ ಉಳಿಯಲಿಲ್ಲ.
  3. ಪ್ರವೀಣ್‌: ವಡ್ಡರಸಿದ್ದವ್ವನ ಹಳ್ಳಿಯ ಪ್ರವೀಣ್‌ ಕಲುಷಿತ ನೀರಿಗೆ ನಡೆದ ಮೂರನೇ ಬಲಿ. ಪ್ರವೀಣ್‌ ಅವರು ಭಾನುವಾರ ರಾತ್ರಿ ಕವಾಡಿಗರ ಹಟ್ಟಿಗೆ ಬಂದಿದ್ದು, ಅಲ್ಲಿ ನೀರು ಕುಡಿದಿದ್ದರು. ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಪ್ರಾಣ ಉಳಿಯಲಿಲ್ಲ.
  4. ರುದ್ರಪ್ಪ: ಕವಾಡಿಗರ ಹಟ್ಟಿ ನಿವಾಸಿ ರುದ್ರಪ್ಪ (57) ಅವರು ಶುಕ್ರವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಸಾವಿಗೀಡಾಗಿದ್ದಾರೆ. ಕಳೆದ ಮೂರು ದಿನದಿಂದ ಇವರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
  5. ಪಾರ್ವತಮ್ಮ: ಕವಾಡಿಗರ ಹಟ್ಟಿಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಪಾರ್ವತಮ್ಮ (60) ಅವರು ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಭಾನುವಾರ ಅಸ್ವಸ್ಥರಾಗಿದ್ದ ಪಾರ್ವತಮ್ಮ ಅವರು ಬಳಿಕ ಸ್ವಲ್ಪ ಗುಣಮುಖರಾಗಿ ಮನೆಗೆ ಹೋಗಿದ್ದರು. ಅವರು ಪಾರ್ಶ್ವ ವಾಯು ಪೀಡಿತರಾಗಿರುವುದರಿಂದ ಅವರಿಗೆ ಕಳೆದ ಮೂರು ದಿನಗಳಿಂದ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರ ಸಾವೂ ಸಂಭವಿಸಿದೆ.

ಇನ್ನೂ ಹದಿನಾರು ಮಂದಿ ಐಸಿಯುನಲ್ಲಿ?

ಕಲುಷಿತ ನೀರು ಸೇವಿಸಿ ಸುಮಾರು 54 ಮಂದಿ ಅಸ್ವಸ್ಥರಾಗಿದ್ದು, ಅವರ ಪೈಕಿ ಇನ್ನೂ 16 ಮಂದಿಯ ಸ್ಥಿತಿ ಗಂಭೀರವಾಗಿಯೇ ಇದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಪ್ರಾಣ ಕಳೆದುಕೊಂಡ ಪಾರ್ವತಮ್ಮ ಅವರ ಮನೆಯವರೇ ಒಂಬತ್ತು ಮಂದಿ ಆಸ್ಪತ್ರೆಯಲ್ಲಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂಬ ಮಾಹಿತಿ ಇದೆ. ಪಾರ್ವತಮ್ಮ ಅವರ ಮೊಮ್ಮಗು ಒಂದು ವರ್ಷದ ಪುಟ್ಟ ಮಗು ಕೂಡಾ ಆಸ್ಪತ್ರೆಗೆ ದಾಖಲಾಗಿದೆ.

ಇನ್ನೂ ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ, ಸರ್ಕಾರ

ಇಷ್ಟೊಂದು ಭಯಾನಕ ದುರಂತ ಸಂಭವಿಸಿದ್ದರೂ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಈ ಪ್ರಕರಣದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರ ಮೇಲೆ ಗಂಭೀರ ಆರೋಪವಿದೆ. ಇದರ ಜತೆಗೆ ರಾಜಕಾರಣಿಗಳು ಕೂಡಾ ಇದರ ಬಗ್ಗೆ ಕನಿಷ್ಠ ಕಾಳಜಿಯನ್ನೂ ವ್ಯಕ್ತಪಡಿಸಿಲ್ಲ.

ಇದೊಂದು ಜಾತಿವೈಷಮ್ಯದಿಂದ ನಡೆದ ಕೃತ್ಯ ಎಂದು ಸಾರ್ವಜನಿಕರು ಸಾರಿ ಸಾರಿ ಹೇಳುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಅದೊಂದು ವಿಷಯ ಬಿಟ್ಟು ಉಳಿದೆಲ್ಲ ಕೆಲಸಕ್ಕೆ ಬಾರದ ಸಂಗತಿಗಳ ತಪಾಸಣೆಯಲ್ಲಿ ಕಾಲ ಕಳೆದಿದೆ. ನೀರಿನ ತಪಾಸಣೆಗೆ ಮಾಡಿದ ಹಲವು ಪ್ರಯತ್ನಗಳಲ್ಲಿ ಯಾವ ವರದಿಯೂ ಸರಿಯಾಗಿ ಬಂದಿಲ್ಲ.

Contaminated water

ಎಡವಟ್ಟು ವರದಿಗಳು

  1. ನೀರು ಕುಡಿದ ಮಂದಿ ಅಸ್ವಸ್ಥರಾಗಲು ಕಾರಣ ಅದರಲ್ಲಿ ಕಾಲರಾ ರೋಗ ಹರಡುವ ವೈರಸ್‌ ಇದ್ದಿದ್ದು ಎಂಬ ವರದಿ ಬಂದಿದೆ ಎಂದು ಸಹಾಯಕ ಕಮೀಷನರ್‌ ಕಾರ್ತಿಕ್‌ ಹೇಳಿದ್ದರು. ಆದರೆ, ಕಾಲರಾ ಅಂಶ ಕಂಡುಬಂದಿದ್ದು ಎಂಟು ಮಂದಿಯಲ್ಲಿ ಐವರಲ್ಲಿ ಮಾತ್ರ. ಕಾಲರಾವೇ ಆಗಿದ್ದರೆ ಎಲ್ಲರಲ್ಲೂ ಕಾಲರಾ ಅಂಶ ಕಾಣಿಸಿಕೊಳ್ಳಬೇಕಿತ್ತು. ನೀರಿನಲ್ಲಿ ವೈರಸ್‌ ಪತ್ತೆಯಾಗಿಬೇಕಿತ್ತು.
  2. ಜಿಲ್ಲಾ ಸರ್ವೇಕ್ಷಣಾ ಘಟಕದ ವರದಿಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಎಂಬ ವರದಿ ಬಂದಿದೆ.
  3. ಆದರೆ FSL ವರದಿಯಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ ಎಂದು ಹೇಳಲಾಗಿದೆ.

ಒಂದೊಂದು ವರದಿ ಒಂದೊಂದು ಕಥೆ ಹೇಳುತ್ತಿದೆ. ಹಾಗಿದ್ದರೆ ನಿಜಕ್ಕೂ ಈ ರೀತಿ ಸಾವು ಸಂಭವಿಸಲು ಕಾರಣವೇನು ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಇದು ಕುಡಿಯಲು ಯೋಗ್ಯವಲ್ಲದ ನೀರು ಎಂಬ ಕಾರಣಕ್ಕೆ ಈಗ ಊರಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.

ಶಾಸಕರು, ಕೌನ್ಸಿಲರ್‌ ಎಲ್ಲರೂ ನಾಪತ್ತೆ

ಇಷ್ಟೊಂದು ದೊಡ್ಡ ಘಟನೆ ನಡೆದರೂ ಚಿತ್ರದುರ್ಗ ಶಾಸಕರಾಗಿರುವ ವೀರೇಂದ್ರ ಪಪ್ಪಿ ಅವರು ಆ ಕಡೆ ತಲೆ ಹಾಕಿ ಕೂಡಾ ಮಲಗಿರಲಿಲ್ಲ. ಗೋವಾ ಟ್ರಿಪ್‌ನಲ್ಲಿದ್ದ ವೀರೇಂದ್ರ ಪಪ್ಪಿ ಅವರು ಘಟನೆ ನಡೆದು ನಾಲ್ಕನೇ ದಿನ ʻಓಡೋಡಿʼ ಬಂದಿದ್ದಾರೆ. ಎಲ್ಲಿ ಶಾಸಕರು ಎಂದು ಕೇಳುತ್ತಿದ್ದ ಜನರು ಅವರು ಬಂದಾಗ ಪ್ರತಿಭಟನೆ ನಡೆಸಿದ್ದಾರೆ.

ಇದರ ನಡುವೆ ಆ ಪ್ರದೇಶದ ಕೌನ್ಸಿಲರ್‌ ಜಯಣ್ಣ ಘಟನೆ ನಡೆದು ಐದು ದಿನಗಳಿಂದ ನಾಪತ್ತೆಯಾಗಿದ್ದಾರೆ. ಘಟನೆ ನಡೆದ ದಿನದಿಂದ ಅವರು ಕಣ್ಮರೆ ಆಗಿರುವುದೇಕೆ ಎನ್ನುವುದು ಭಾರಿ ನಿಗೂಢವಾಗಿದೆ. ಅವರು ಎಲ್ಲಿದ್ದರೂ ತಕ್ಷಣ ಬರಬೇಕು ಎಂದು ಆಗ್ರಹಿಸಿ ಜನರು ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದರು.

ನಾಪತ್ತೆಯಾಗಿರುವ ಜಯಣ್ಣ ಮತ್ತು ಜನರ ಪ್ರತಿಭಟನೆ

ಪಂಪ್‌ ಆಪರೇಟರ್‌ ಸೇರಿ ಐವರು ಅಮಾನತು

ಈ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ಇದೀಗ ಪಂಪ್‌ ಆಪರೇಟರ್‌ ಸೇರಿ ಐವರನ್ನು ಸಸ್ಪೆಂಡ್‌ ಮಾಡಲಾಗಿದೆ. ನಗರಸಭೆಯ ಸಿಬ್ಬಂದಿ ಪ್ರಕಾಶ್ ಬಾಬು, ಪಂಪ್ ಆಪರೇಟರ್, ವಾಲ್ ಮ್ಯಾನ್ ಪ್ರಕಾಶ್, ನೀರಗಂಟಿ ಸುರೇಶ್ ಅಮಾನತಾಗಿದ್ದಾರೆ. AEE ಮಂಜುನಾಥ್ ರೆಡ್ಡಿ, JE ಕಿರಣ್ ಅಮಾನತಿಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ಇನ್ನೂ ತನಿಖೆ ನಡೆಯದ ಜಾತಿ ವೈಷಮ್ಯ

ಇಷ್ಟೆಲ್ಲ ಘಟನಾವಳಿಗಳ ನಡುವೆ ಪ್ರಕರಣವನ್ನು ಬೇರೆ ಬೇರೆ ಕೋನಗಳಲ್ಲಿ ತನಿಖೆ ನಡೆಸಿ ಮೂಲ ಕಾರಣವನ್ನು ಮರೆತು ಮುಚ್ಚಿ ಹಾಕಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿ ಕೇಳಿಬರುತ್ತಿದೆ. ಎಸ್‌ಟಿ ಸಮುದಾಯ ವಾಸಿಸುತ್ತಿರುವ ಕವಾಡಿಗರ ಹಟ್ಟಿಗೆ ಈ ರೀತಿಯ ಕಲುಷಿತ ವಿಷಪೂರಿತ ನೀರು ಬಂದಿದ್ದು ಹೇಗೆ ಎಂಬ ಪ್ರಶ್ನೆಗೆ ಯಾರೂ ಉತ್ತರ ನೀಡುತ್ತಿಲ್ಲ. ಪಕ್ಕದಲ್ಲೇ ಇರುವ ಲಿಂಗಾಯತರ ವಸತಿ ಪ್ರದೇಶಕ್ಕೆ ಸರಿಯಾದ ನೀರು ಹೋಗುತ್ತದೆ. ಎಸ್‌ಟಿ ಸಮುದಾಯದ ಹಟ್ಟಿಗೆ ವಿಷದ ನೀರು ಬಂದಿದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.

ನೀರುಗಂಟಿಯಾಗಿರುವ ಸುರೇಶ್‌ ಈ ಪ್ರಕರಣದ ಪ್ರಧಾನ ಆರೋಪಿ ಎನ್ನುವುದು ಎಲ್ಲರ ಆರೋಪ. ಇದಕ್ಕೆ ಸಾಕಷ್ಟು ಪುರಾವೆಗಳು ಇವೆ. ಅದೇನೆಂದರೆ, ಸುರೇಶ್‌ ಮಗಳ ಮದುವೆ!. ಸುರೇಶ್‌ ಲಿಂಗಾಯತ ಸಮುದಾಯದವರು. ಅವರ ಮಗಳನ್ನು ಈ ಊರಿನ ಎಸ್‌ಟಿ ಸಮುದಾಯದ ಯುವಕನೊಬ್ಬ ಪ್ರೀತಿ ಮಾಡುತ್ತಿದ್ದ. ಇದನ್ನು ಸುರೇಶ್‌ ವಿರೋಧಿಸಿದ್ದರು. ಆದರೆ, ಸುರೇಶ್‌ ಅವರನ್ನು ಧಿಕ್ಕರಿಸಿ ಈ ಜೋಡಿ ಕೆಲವು ದಿನಗಳ ಹಿಂದೆ ಮದುವೆ ಮಾಡಿಕೊಂಡಿದೆ. ಈ ಪ್ರೀತಿ ಮತ್ತು ಮದುವೆ ವಿಚಾರವಾಗಿ ಕಳೆದ ವಾರ ಸುರೇಶ್‌ ಭಾರಿ ಆಕ್ರೋಶದಿಂದ ಮಾತನಾಡಿದ್ದರು, ಜಗಳ ಮಾಡಿದ್ದರು. ಇದೇ ಜಾತಿ ವೈಷಮ್ಯದಿಂದ ಅವರು ಎಸ್‌ಟಿ ಸಮುದಾಯದವರೇ ಬಳಸುವ ನೀರಿಗೆ ಏನಾದರೂ ಬೆರೆಸಿದ್ದಾರೆ ಎನ್ನುವುದು ಎಲ್ಲರ ಸಂಶಯ.

ಇದಕ್ಕೆಲ್ಲ ಪುಷ್ಟಿ ನೀಡುವಂತೆ ನೀರಗಂಟಿ ಸುರೇಶ್‌ ನಾಪತ್ತೆಯಾಗಿದ್ದಾನೆ. ಪೊಲೀಸರು ಆತನ ಪತ್ತೆಗೂ ಪ್ರಯತ್ನಪಡದೆ ಇರುವುದು ಸಂಶಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Contaminated water: 3 ದಿನಗಳ ನಂತರ ಆಸ್ಪತ್ರೆಗೆ ಬಂದ ಶಾಸಕ ವೀರೇಂದ್ರ ಪಪ್ಪಿಗೆ ಜನರ ತರಾಟೆ

Exit mobile version