Site icon Vistara News

Contaminated water : ಚಿತ್ರದುರ್ಗದಲ್ಲಿ ಕಲುಷಿತ ನೀರಿನ ಅನಾಹುತ; 27ರ ಯುವತಿ ಸಾವು, 40 ಜನರು ಅಸ್ವಸ್ಥ

Water pollution

ಚಿತ್ರದುರ್ಗ: ರಾಜ್ಯದ ನಾನಾ ಭಾಗಗಳಲ್ಲಿ ಕಲುಷಿತ ನೀರು (Contaminated Water) ಅನಾಹುತಗಳನ್ನು ಸೃಷ್ಟಿಸುತ್ತಿದ್ದು, ಅದರ ಸಾಲಿಗೆ ಈಗ ಚಿತ್ರದುರ್ಗವೂ (Chitradurga News) ಸೇರ್ಪಡೆಯಾಗಿದೆ. ಚಿತ್ರದುರ್ಗ ನಗರದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ 40 ಮಂದಿ ಅಸ್ವಸ್ಥರಾಗಿದ್ದು, (40 people fall sick) ಇವರಲ್ಲಿ ಮಂಜುಳಾ ಎಂಬ 27 ವರ್ಷದ ಯುವತಿ ಪ್ರಾಣ (one lady dead after drinking Contaminated water) ಕಳೆದುಕೊಂಡಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.

ಸೋಮವಾರ ರಾತ್ರಿ ನೀರು ಕುಡಿದ ಮೇಲೆ ಹಲವರು ಅಸ್ವಸ್ಥರಾಗಿದ್ದಾರೆ. ನೀರು ಕುಡಿದ ಮೇಲೆ ವಾಂತಿ ಮತ್ತು ಅತಿಸಾರ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮಂಜುಳಾ ಎಂಬ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸೃಷ್ಟಿ (18) ಎಂಬ ಯುವತಿ ಮತ್ತು ಸಹನಾ ಎಂಬ ನಾಲ್ಕು ವರ್ಷದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇವರಿಬ್ಬರನ್ನು ಉನ್ನತ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಸ್ವಸ್ಥರಾಗಿ ಆಸ್ಪತ್ರೆ ಸೇರಿದವರಲ್ಲಿ ಎಂಟು ಮಂದಿ 18 ವರ್ಷದೊಳಗಿನ ಮಕ್ಕಳು. ಇವರ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ನಾಲ್ವರು ಅಸ್ವಸ್ಥರಿಗೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ದಾವಣಗೆರೆ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ಎಸ್‌ಪಿ ಕೆ. ಪರಶುರಾಮ್‌ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಶವಾಗಾರಕ್ಕೆ ಭೇಟಿ ನೀಡಿ ಮೃತ ಮಂಜುಳಾ ಮೃತದೇಹವನ್ನು ಪರಿಶೀಲನೆ ಮಾಡಿದರು. ಘಟನೆ ಸಂಬಂಧ ತನಿಖೆ ನಡೆಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಕವಾಡಿಗರ ಹಟ್ಟಿ

ಟ್ಯಾಂಕ್‌ ತೊಳೆಯದೇ ಇದ್ದುದೇ ಕಾರಣವೇ? ಅಧಿಕಾರಿಗಳಿಗೆ ತರಾಟೆ

ಕುಡಿಯುವ ನೀರಿನ ಟ್ಯಾಂಕನ್ನು ಕಳೆದ ಹಲವಾರು ವರ್ಷಗಳಿಂದ ಕ್ಲೀನ್‌ ಮಾಡಲಾಗಿಲ್ಲ. ಈ ಕಾರಣದಿಂದಲೇ ನೀರು ಕಲುಷಿತಗೊಂಡು ಸಮಸ್ಯೆ ಸೃಷ್ಟಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ನಡುವೆ ಕವಾಡಿಗರ ಹಟ್ಟಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಎಸ್ಪಿ ಪರುಶುರಾಮ ಭೇಟಿ ನೀಡಿದರು. ಓವರ್ ಟ್ಯಾಂಕ್, ಆರ್‌ಒ ಪ್ಲಾಂಟ್ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ʻʻಸತ್ತಾಗ ಬರ್ತೀರಾ ನೀವು, ಮೊದ್ಲೇ ಬರಲ್ಲ ಅಲ್ವಾ? ಮೊದಲು ಏನಾಗಿದೆ ಎಂಬುದು ತನಿಖೆ ನಡೆಸಿʼʼ ಎಂದು ಆಗ್ರಹಿಸಿದರು.

ಬೀದರ್‌ ತಾಪಂ ಸಿಇಒ ಅಮಾನತು

ಈ ನಡುವೆ, ಬೀದರ್‌ನಲ್ಲಿ ನಡೆದ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿ ಬೀದರ್ ತಾಪಂ ಸಿಇಓ ಮಾಣಿಕ್ ರಾವ್ ಪಾಟೀಲ್ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಲುಷಿತ ನೀರು ಕುಡಿದ ಪ್ರಕರಣದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿಲ್ಲ ಎನ್ನುವ ಆರೋಪದಲ್ಲಿ ಅಮಾನತು ಮಾಡಲಾಗಿದೆ.

ಇದನ್ನೂ ಓದಿ : Contaminated Water: ಮೊಳಕಾಲ್ಮೂರಿನಲ್ಲಿ ಕಲುಷಿತ ನೀರು ಸೇವಿಸಿ 33 ಮಂದಿ ಅಸ್ವಸ್ಥ


Exit mobile version