ರಾಯಚೂರು: ನಗರ ಭಾಗದಲ್ಲಿ ಸುಮಾರು ನಾಲ್ಕು ತಿಂಗಳ ಹಿಂದೆ ಕಲುಷಿತ ನೀರು ಸೇವನೆ (Contaminated water) ಮಾಡಿದ್ದ 7 ಜನರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಆದರೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದ್ದು, ಗ್ರಾಮೀಣ ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿರುವ ಬಹು ಗ್ರಾಮ ಕುಡಿಯುವ ನೀರಿನ ಘಟಕದಲ್ಲಿ ಇಲಿ ಸತ್ತು ಬಿದ್ದರೂ ಅದೇ ನೀರನ್ನೇ ಅಧಿಕಾರಿಗಳು ಸರಬರಾಜು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಿಚ್ಚಾಲಿ ಗ್ರಾಮದಲ್ಲಿರುವ ಬಹು ಗ್ರಾಮ ಕುಡಿಯುವ ನೀರಿನ ಘಟಕದಲ್ಲಿ ನೀರಿನ ಬಣ್ಣ ಬದಲಾಗಿ, ಪಾಚಿ ಸಹ ಕಟ್ಟಿಕೊಂಡಿದೆ. ಆದರೆ, ಆ ಬಗ್ಗೆ ಅಧಿಕಾರಿಗಳು ಸ್ವಲ್ಪವೂ ಗಮನಹರಿಸಿಲ್ಲ. ಸ್ವಚ್ಛತೆ ಕಾರ್ಯಕ್ಕೂ ಮುಂದಾಗಿಲ್ಲ. ಇದೇ ವೇಳೆ ಈ ನೀರಿನ ಶೇಖರಣೆ ಘಟಕದ ಟ್ಯಾಂಕ್‌ನಲ್ಲಿ ಇಲಿಯೊಂದು ಸತ್ತು ಬಿದ್ದಿದ್ದು, ಅದೇ ನೀರನ್ನು ಕುಡಿಯಲು ಗ್ರಾಮೀಣ ಭಾಗಕ್ಕೆ ಸರಬರಾಜು ಮಾಡಲಾಗುತ್ತಿದೆ.
೭ ಪಂಚಾಯಿತಿ ವ್ಯಾಪ್ತಿಗೆ ನೀರು ಸರಬರಾಜು
ಬಿಚ್ಚಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 7 ಪಂಚಾಯಿತಿಗಳು ಬರಲಿವೆ. ಇವುಗಳ ಅಡಿ ಬರುವ ಎಲ್ಲ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ನೀರಿನಲ್ಲಿ ವಾಸನೆ ಬರುವುದಲ್ಲದೆ, ಕೊಳಕು ನೀರು ಬರಲಾರಂಭಿಸಿದ್ದರಿಂದ ಪರಿಶೀಲನೆ ನಡೆಸಿದರೆ ಇಲಿ ಸತ್ತು ಬಿದ್ದಿರುವುದು ಕಂಡುಬಂದಿದೆ. ಆದರೆ, ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳದೆ ನೀರು ಸರಬರಾಜು ಪ್ರಕ್ರಿಯೆಯಲ್ಲಿ ತೊಡಗಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನೀರಿನ ಘಟಕಕ್ಕೆ ಭೇಟಿ ನೀಡಿದಾಗ ಪಾಚಿ ಕಟ್ಟಿದ್ದು ಸಹ ಕಂಡಿದೆ. ಹೀಗಾಗಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ವರ್ಷಕ್ಕೆ ೩೦ ಲಕ್ಷ ರೂ. ವೆಚ್ಚ
2015ರಲ್ಲಿ ನಿರ್ಮಾಣಗೊಂಡ ಈ ಬಹು ಗ್ರಾಮಗಳ ಕುಡಿಯುವ ನೀರಿನ ಘಟಕಕ್ಕೆ ಪ್ರತಿ ವರ್ಷ 30 ಲಕ್ಷ ರೂಪಾಯಿ ನಿರ್ವಹಣೆ ವೆಚ್ಚ ನೀಡಲಾಗುತ್ತದೆ. ಬಿಚ್ಚಾಲಿ, ಮಟಮಾರಿ, ಹೀರಾಪೂರ, ಪೂರಿತಿಪ್ಲಿ ಸೇರಿದಂತೆ ಒಟ್ಟು 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗರಿಗೆ ನೀರೊದಗಿಸುವ ಮಹತ್ವದ ಘಟಕ ಇದಾಗಿದೆ. ಆದರೆ, ಈ ನೀರಿನ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡದೇ ಶುದ್ಧ ನೀರು ಕೊಡುವ ಯೋಜನೆಯನ್ನು ಹಳ್ಳಹಿಡಿಯುವಂತೆ ಮಾಡಲಾಗಿದೆ ಎಂದು ಬಿಚ್ಚಾಲಿ ಗ್ರಾಮದ ರಾದಮ್ಮ ಎಂಬುವವರು ಆಕ್ರೋಶವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ | Contaminated water | ಕಲುಷಿತ ನೀರು ಸೇವಿಸಿ ಶಹಾಪುರದಲ್ಲಿ ಮತ್ತೊಬ್ಬರ ಸಾವು: ಮೃತರ ಸಂಖ್ಯೆ 3ಕ್ಕೆ ಏರಿಕೆ