Site icon Vistara News

Contempt of court | ಕೋರ್ಟ್‌, ನ್ಯಾಯಮೂರ್ತಿಗಳ ನಿಂದನೆ: ವಕೀಲ ಜಗದೀಶ್‌ಗೆ 2 ಲಕ್ಷ ರೂ. ದಂಡ, ಪ್ರಕರಣ ಇತ್ಯರ್ಥ

lawyer jagadish

ಬೆಂಗಳೂರು: “ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೇ ನೀವು ಪೀಠದಲ್ಲಿದ್ದೀರಾ? ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿ ಅವರಿಗೆ ನಿಮ್ಮ ವಿರುದ್ಧ ದೂರು ಬರೆಯುತ್ತೇನೆ. ಮುಖ್ಯ ನ್ಯಾಯಮೂರ್ತಿ ಇದ್ದಾರೆಯೇ ಅಥವಾ ಗಾಂಡು ವಕೀಲರಿಗೆ ಶರಣಾಗಿದ್ದಾರೆಯೇ?ʼʼ ಎಂದು ಫೇಸ್‌ ಬುಕ್‌ ಲೈವ್‌ನಲ್ಲಿ ಪ್ರಶ್ನಿಸುವ ಮೂಲಕ ನ್ಯಾಯಾಂಗವನ್ನು ದೂಷಿಸಿದ ವಕೀಲ ಕೆ.ಎನ್‌. ಜಗದೀಶ್‌ ಕುಮಾರ್‌ ಅವರ ವಿರುದ್ಧದ ಪ್ರಕರಣವನ್ನು ಕೋರ್ಟ್‌ ಕೈಬಿಟ್ಟಿದೆ.

ಬೆಂಗಳೂರಿನ ಬೆಂಗಳೂರಿನ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲೇ ದುವರ್ತನೆ ತೋರಿದ್ದ ಜಗದೀಶ್‌ ಬಳಿಕ ಬೇಷರತ್‌ ಕ್ಷಮೆ ಯಾಚಿಸಿದ್ದನ್ನು ಪರಿಗಣಿಸಿ ಕೋರ್ಟ್‌ ಅವರಿಗೆ ₹2 ಲಕ್ಷ ದಂಡ ವಿಧಿಸಿ ಅವರ ವಿರುದ್ಧದ ಸ್ವಯಂಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ಪ್ರಕರಣವನ್ನು ಕೈಬಿಟ್ಟಿದೆ.

ಬೆಂಗಳೂರಿನ ನ್ಯಾಯಾಲಯದ ಆವರಣದಲ್ಲಿ ದುರ್ವರ್ತನೆ, ಕಿರಿಕಿರಿ, ನ್ಯಾಯಾಲಯದ ಕಲಾಪಕ್ಕೆ ಅಡ್ಡಿ, ರಿಜಿಸ್ಟ್ರಾರ್‌ ಅವರ ವಿರುದ್ದ ಅಸಂಸದೀಯ ಪದ ಬಳಕೆ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರ ವಿರುದ್ದ ಕೆಟ್ಟ ಪದ ಬಳಕೆ ಮಾಡುವ ಮೂಲಕ ಸಂಸ್ಥೆಯ ಘನತೆಗೆ ಕುಂದು ಉಂಟು ಮಾಡಿದ ಆರೋಪದಲ್ಲಿ ಹೈಕೋರ್ಟ್‌ನ ಆಡಳಿತ ವಿಭಾಗದ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿ ಅವರ ನಿರ್ದೇಶನದಂತೆ ರಿಜಿಸ್ಟ್ರಾರ್‌ ಜನರಲ್‌ ಅವರು ಕೆ ಎನ್‌ ಜಗದೀಶ್‌ಕುಮಾರ್‌ ಅಲಿಯಾಸ್‌ ಜಗದೀಶ್‌ ಮಹದೇವ್‌ ಅಲಿಯಾಸ್‌ ಜಗದೀಶ್‌ ಅವರ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಜಗದೀಶ್‌ ಕುಮಾರ್‌ ಅವರು ನವೆಂಬರ್‌ 24ರಂದು ಬೇಷರತ್‌ ಕ್ಷಮೆ ಯಾಚಿಸಿ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ 2022ರ ಫೆಬ್ರವರಿ 10, 11 ಮತ್ತು 12ರಂದು ನ್ಯಾಯಾಲಯದಲ್ಲಿ ವರ್ತಿಸಿದ ರೀತಿಗೆ ನಾನು ಬೇಷರತ್‌ ಕ್ಷಮೆಯಾಚಿಸುತ್ತೇನೆ. ಮುಂದೆ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಗೌರವ, ಘನತೆಯುತ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಜಗದೀಶ್‌ ಅವರ ವಿರುದ್ಧದ ಕ್ರಿಮಿನಲ್‌ ನ್ಯಾಯಾಂಗ ಪ್ರಕ್ರಿಯೆಯನ್ನು ಕೈಬಿಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಎರಡು ಲಕ್ಷ ರೂ. ದಂಡದ ವಿಂಗಡಣೆ ಹೇಗೆ?
ಆರೋಪಿ ಜಗದೀಶ್‌ಗೆ ₹2 ಲಕ್ಷ ದಂಡ ವಿಧಿಸಿದ್ದು, ಈ ಪೈಕಿ ₹1 ಲಕ್ಷವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ₹50,000 ರೂಪಾಯಿಯನ್ನು ಬೆಂಗಳೂರು ವಕೀಲರ ಸಂಘ (ಇದನ್ನು ವಕೀಲರಿಗೆ ಅನುಕೂಲವಾಗಿಸಲು ಪುಸ್ತಕ ಖರೀದಿಸಲು ಬಳಕೆ ಮಾಡಬೇಕು) ಮತ್ತು ₹50,000 ರೂಪಾಯಿಗಳನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಠೇವಣಿಯನ್ನು ಎರಡು ವಾರಗಳಲ್ಲಿ ನೀಡಬೇಕು ಎಂದು ಸೂಚಿಸಲಾಗಿದೆ.

ಏನಾಗಿತ್ತು ಫೆಬ್ರವರಿ ತಿಂಗಳಲ್ಲಿ?
2022ರ ಫೆಬ್ರವರಿ 11ರಂದು ಸಿಸಿಎಚ್‌-61ರಲ್ಲಿ ಅಸಲು ದಾವೆಯ ವಿಚಾರಣೆಯೊಂದರ ಸಂದರ್ಭದಲ್ಲಿ ಹಾಜರಿದ್ದ ವಕೀಲರು, ಆರೋಪಿ ಜಗದೀಶ್‌ ವಿರುದ್ಧ ಆತ 60-70 ಗೂಂಡಾಗಳನ್ನು ನ್ಯಾಯಾಲಯಕ್ಕೆ ಕರೆದು ತಂದಿದ್ದಾರೆ ಎಂದು ಆರೋಪಿಸಿದ್ದರು. ನ್ಯಾಯಮೂರ್ತಿಗಳ ಹೊರ ಹೋಗುವ ದ್ವಾರದ ಬಳಿ ನೆರದು, ವಕೀಲರನ್ನು ಹೊರತುಪಡಿಸಿ ಬೇರೆಯವರು ನ್ಯಾಯಾಲಯಕ್ಕೆ ಪ್ರವೇಶಿಸಿರುವುದರ ಕುರಿತು ವಾಕ್ಸಮರ ನಡೆಸಿದ್ದರು. ಇದರಿಂದ ವಕೀಲರ ನಡುವೆ ಮಾರಾಮಾರಿ ನಡೆದಿತ್ತು. ಈ ವೇಳೆ ಪರಿಸ್ಥಿತಿ ತಿಳಿಸಿಗೊಳಿಸಲು ಸಿಟಿ ಸಿವಿಲ್‌ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಮತ್ತು ರಿಜಿಸ್ಟ್ರಾರ್‌ ಅವರು ಪ್ರಯತ್ನಿಸಿದ್ದರು. ಬಳಿಕ ಫೆಬ್ರವರಿ ೧೨ರಂದು ಫೇಸ್‌ ಬುಕ್‌ ಲೈವ್‌ನಲ್ಲಿ ನ್ಯಾಯಮೂರ್ತಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ | MS DHONI | ಐಪಿಎಸ್‌ ಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಿದ ಮಹೇಂದ್ರ ಸಿಂಗ್‌ ಧೋನಿ

Exit mobile version