ಬಾಗಲಕೋಟೆ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ (Pathaan Movie) ದೇಶಾದ್ಯಂತ ಭಾರಿ ಜನಪ್ರಿಯತೆಯೊಂದಿಗೆ ಪ್ರದರ್ಶನ ಕಾಣುತ್ತಿದ್ದರೂ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ವಿರೋಧ ಮುಂದುವರಿದಿದೆ.
ರಬಕವಿ ಪಟ್ಟಣದ ಶ್ರೀನಿವಾಸ ಚಿತ್ರಮಂದಿರದಲ್ಲಿ ಭಾನುವಾರ ಚಿತ್ರದ ಪೋಸ್ಟರ್ ಹಾಕಿದ್ದಕ್ಕೇ ಹಿಂದು ಪರ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿವೆ.
ಈ ಚಿತ್ರಮಂದಿರದಲ್ಲಿ ಕಳೆದ ಜನವರಿ ೨೬ರಂದೇ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗಿತ್ತು. ಆಗೆಲ್ಲ ಇಡೀ ದೇಶದಲ್ಲಿ ಅದೇ ಮನೋಸ್ಥಿತಿ ಇದ್ದುದರಿಂದ ಮಾಲೀಕರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಈ ನಡುವೆ, ದೇಶಾದ್ಯಂತ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ, ವಿರೋಧವೂ ಕಡಿಮೆಯಾಗಿದೆ.
ಈ ನಿಟ್ಟಿನಲ್ಲಿ ಶ್ರೀನಿವಾಸ ಚಿತ್ರಮಂದಿರದ ಮಾಲೀಕರು ಚಿತ್ರ ಪ್ರದರ್ಶನಕ್ಕೆ ಮುಂದಾಗಿ ಬ್ಯಾನರ್ ಹಾಕಲು ಮುಂದಾಗಿದ್ದರು. ಆದರೆ, ಹಿಂದು ಸಂಘಟನೆಗಳಿಗೆ ಈ ವಿಷಯ ತಿಳಿದು ಧಾವಿಸಿ ಬಂದು ಆಕ್ಷೇಪಿಸಿದರು. ಬ್ಯಾನರ್ ಹರಿದು ಹಾಕಿ, ಚಿತ್ರ ಪ್ರದರ್ಶನ ಮಾಡದಂತೆ ಚಿತ್ರಮಂದಿರದ ಮಾಲೀಕರಿಗೆ ತಾಕೀತು ಮಾಡಿದರು.
ಚಿತ್ರಗಳ ಪ್ರದರ್ಶನಕ್ಕೆ ಅಡ್ಡಿಯುಂಟು ಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರೂ ಕೆಲವು ಕಡೆ ಹಿಂದು ಸಂಘಟನೆಗಳು ತಮ್ಮ ಆಕ್ರೋಶವನ್ನು ಮುಂದುವರಿಸಿವೆ.
ಇದನ್ನೂ ಓದಿ | PM Narendra Modi | ಸಿನಿಮಾಗಳ ವಿರುದ್ಧ ಅನಗತ್ಯ ಟೀಕೆ ಬೇಡ: ಬಿಜೆಪಿ ಕಾರ್ಯಕರ್ತರು, ನಾಯಕರಿಗೆ ಮೋದಿ ಕಿವಿಮಾತು