ಉಡುಪಿ: ಕಾಂತಾರ ಸಿನಿಮಾಕ್ಕೆ (Kantara movie) ಹೋಲಿಕೆ ಹೊಂದಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವವನ್ನು ಮುಂದಕ್ಕೆ ಹಾಕಲಾಗಿದೆ. ಭಾರಿ ಅಹಿತಕರ ಬೆಳವಣಿಗೆಗಳ ಹೊರತಾಗಿಯೂ ಒಂದು ತಂಡ ಜನವರಿ ಏಳರಂದೇ (ಶನಿವಾರ) ನೇಮೋತ್ಸವ ನಡೆಸುವುದಕ್ಕೆ ಸಿದ್ಧತೆ ನಡೆಸಿತ್ತು. ಆದರೆ, ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆಯೇ ಶನಿವಾರಕ್ಕೆ ನಿಗದಿಯಾಗಿದ್ದ ನೇಮೋತ್ಸವವನ್ನು ಮುಂದೂಡಲಾಗಿದೆ.
ಏನಿದು ನೇಮೋತ್ಸವ ವಿವಾದ?
ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನ ಊರ ಸಮಸ್ತರಿಗೆ ಭಕ್ತಿ ಮತ್ತು ನಂಬಿಕೆಯ ಮೂಲವಾಗಿತ್ತು. ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯ ನೇಮೋತ್ಸವ ನಡೆಯುತ್ತಿದ್ದು ಊರವರು ಭಾಗಿಯಾಗುತ್ತಾರೆ. ಈ ದೈವಸ್ಥಾನ ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದೆ. ಈ ಸಮಿತಿಯಲ್ಲಿ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಸಹಜವಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಅಧಿಕಾರದ ಹಪಹಪಿಯಿಂದ ಪ್ರತ್ಯೇಕ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ , ಇಲ್ಲಿಯ ಸಾನದ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಹೀಗೆ 5 ಜನರ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇದರಲ್ಲಿ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರು. ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸಿದರು.
ಈ ನಡುವೆ, ವರ್ಷಂಪ್ರತಿಯಂತೆ ಈ ವರ್ಷ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ, ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸುತ್ತದೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಜಯ ಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗ್ತಾರೆ. ಆಶ್ಚರ್ಯದ ಸಂಗತಿ ಎಂದರೆ ಡಿಸೆಂಬರ್ 23ಕ್ಕೆ ತಡೆಯಾಜ್ಞೆ ತಂದ ಜಯಪೂಜಾರಿ, ಡಿಸೆಂಬರ್ 24ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಕಾಂತಾರ ಸಿನಿಮಾದಲ್ಲಿ ಕೋರ್ಟ್‌ಗೆ ಹೋಗಿದ್ದ ವ್ಯಕ್ತಿಯೊಬ್ಬರು ಕೋರ್ಟ್ ಮೆಟ್ಟಿಲಿನಲ್ಲೇ ಪ್ರಾಣ ಬಿಟ್ಟ ಘಟನೆಗೂ ಇದಕ್ಕೂ ಹೋಲಿಕೆ ಮಾಡಲಾಗಿತ್ತು.
ಈ ಪ್ರಕರಣವನ್ನು ಕೈಗೆತ್ತಿಕೊಂಡ ಖ್ಯಾತ ವಕೀಲ ಬಿ. ನಾಗರಾಜ್, ತಡೆಯಾಜ್ಞೆಯನ್ನು ವೆಕೇಟ್ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಇಷ್ಟಕ್ಕೂ ಸುಮ್ಮನಿರದ ಟ್ರಸ್ಟಿ ಪ್ರಕಾಶ್ ಶೆಟ್ಟಿ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಾರೆ. ಕೊನೆಗೆ ಜಾರಂದಾಯ ದೈವಸ್ಥಾನದ ದೈವ ನರ್ತಕ ಭಾಸ್ಕರ ಬಂಗೇರ ಅವರನ್ನು ಬೆದರಿಸಿ ತಾವು ಹೇಳುವ ರೀತಿ ದೈವದ ನುಡಿ ಕೊಡಬೇಕು ಎಂದು ಬೆದರಿಸಿದ್ದರು ಎನ್ನಲಾಗಿದೆ.
ಜನವರಿ 7ಕ್ಕೆ ನಡೆಯಬೇಕಿದ್ದ ನೇಮೋತ್ಸವವನ್ನು ದೈವಸ್ಥಾನ ಸಮಿತಿ ಜಯಪೂಜಾರಿ ದೈವಾಧೀನರಾದ ಕಾರಣಕ್ಕೆ ಮುಂದೂಡಿತ್ತು. ಆದರೆ, ಹಠ ಬಿಡದ ಪ್ರಕಾಶ್ ಶೆಟ್ಟಿ ಮತ್ತು ತಂಡ ಜಯ ಪೂಜಾರಿಯವರ ಉತ್ತರಕ್ರಿಯೆಯ ದಿನವಾದ ಜ. 7ರಂದೇ ಕಾಲಾವಧಿ ನೇಮೋತ್ಸವ ಮಾಡಲು ಹೊರಟಿತ್ತು.
ಮುಂದೂಡಿಕೆ
ಈ ವಿಚಾರ ಸಾಮಾಜಿಕ ಜಾಲ ತಾಣ ಮತ್ತು ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿತ್ತು. ಶನಿವಾರ ಬೆಳಗ್ಗಿನಿಂದಲೇ ದೈವಸ್ಥಾನದ ಬಳಿ ಊರಿನ ಜನರು ಸೇರಿದ್ದರು. ಜಾರಂದಾಯ ದೈವಸ್ಥಾನದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಇದರ ನಡುವೆಯೇ ಶನಿವಾರ ದೈವ ನೇಮೋತ್ಸವ ಮಾಡದೆ ಇರಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ಟ್ರಸ್ಟ್‌ನ ಮುಖಂಡರು ದೇವಸ್ಥಾನದ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದರಲ್ಲದೆ, ಕೋರ್ಟ್‌ನಲ್ಲಿ ನ್ಯಾಯ ತೀರ್ಮಾನದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಇದನ್ನೂ ಓದಿ | Kantara movie | ಪಡುಬಿದ್ರಿ ದೈವಸ್ಥಾನದಲ್ಲಿ ಕಾಂತಾರ ಮಾದರಿ ಕಾಳಗ: ಕೋರ್ಟ್‌ಗೆ ಹೋಗಿದ್ದ ವ್ಯಕ್ತಿ ಸಾವಿನ ಬಳಿಕ ಆತಂಕ