ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಅವರ ಪುತ್ರ ಉದಯನಿಧಿ ಸ್ಟಾಲಿನ್ (Udayanidhi Stalin) ನೀಡಿರುವ ʼಸನಾತನ ಧರ್ಮʼ (Sanatan Dharma) ಹೇಳಿಕೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು (Udupi Pejawar Mutt Seer Sri Vishwaprasanna Teertha Swamiji) ಖಂಡನೆ ವ್ಯಕ್ತಪಡಿಸಿದ್ದಾರೆ.
ಸಚಿವರೋರ್ವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಕಾರ್ಯಕ್ಕೆ ಕರೆ ಕೊಟ್ಟಿದ್ದು ಕೇಳಿ, ಆಘಾತವಾಗಿದೆ. ಸರಕಾರದ ಓರ್ವ ಜವಾಬ್ದಾರಿಯುತ ಮಂತ್ರಿಯಾಗಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕಾರ್ಯ ಮಾಡಬಾರದಿತ್ತು ಎಂದು ಶ್ರೀಪಾದರು ಹೇಳಿದ್ದಾರೆ.
ʼʼಸನಾತನ ಧರ್ಮ ಮಲೇರಿಯಾ, ಡೆಂಗೆ ಇದ್ದಂತೆ, ಅದನ್ನು ನಿರ್ಮೂಲನೆ ಮಾಡಬೇಕುʼʼ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನಿನ್ನೆ ಹೇಳಿಕೆ ನೀಡಿದ್ದರು. ಈ ಮಾತಿಗೆ ರಾಷ್ಟ್ರಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಈ ಬಗ್ಗೆ ಪೇಜಾವರ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸನಾತನ ಎನ್ನುವ ಪದಕ್ಕೆ ಇರುವ ಅರ್ಥ ಸದಾಕಾಲ ಇರುವಂತದ್ದು ಎಂದು. ಎಲ್ಲರೂ ಕಷ್ಟಪಡುವಂತದ್ದು ತಮ್ಮ ತಮ್ಮ ಸುಖಕ್ಕೋಸ್ಕರ. ಆದರೆ ಆ ಸುಖ ಇನ್ನೊಬ್ಬರಿಗೆ ನೋವು ನೀಡಬಾರದು. ಸಮಾಜದಲ್ಲಿ ಎಲ್ಲರೂ ಸಂತೋಷದಿಂದ ಬಾಳಲು ಬೇಕಾಗಿ ಅನುಸರಿಸುವ ದಾರಿಯೇ ಧರ್ಮ. ನಮ್ಮ ಪ್ರಯತ್ನದಿಂದ ನಮಗೆ ಸುಖ ಆಗಬಹುದು, ಆದರೆ ಅಕ್ಕಪಕ್ಕದ ಮನೆಯವರಿಗೂ ಕೂಡ ದುಃಖ ಆಗಬಾರದು. ಅಷ್ಟೇ ಅಲ್ಲ ನಮ್ಮ ಪ್ರಯತ್ನದಿಂದ ನಮ್ಮ ಜೊತೆಗೆ ಅಕ್ಕಪಕ್ಕದ ಮನೆಯವರಿಗೂ ಸುಖವಾಗಲಿ. ಇದು ಸನಾತನ ಧರ್ಮ. ಇಂತಹ ಧರ್ಮವನ್ನು ವಿರೋಧಿಸುವವರಿಗೆ ನಾವು ಏನನ್ನಬೇಕು? ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎನ್ನುವವರು, ಸಮಾಜದ ಸುಖ ಶಾಂತಿ ಬಯಸುತ್ತಿಲ್ಲ. ಇಂತಹ ಹೇಳಿಕೆ ಮತ್ತು ಇಂತಹ ಪ್ರವೃತ್ತಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಶ್ರೀಪಾದರು ನುಡಿದಿದ್ದಾರೆ.
ಇದನ್ನೂ ಓದಿ: Sanatan Dharma: ಪ್ರಕಾಶ್ ರೈ ಮತ್ತೊಂದು ವಿವಾದಾತ್ಮಕ ಹೇಳಿಕೆ, ಉದಯನಿಧಿಗೆ ಸಮರ್ಥನೆ, ಟ್ರೋಲ್