Site icon Vistara News

ಭಗವದ್ಗೀತೆ ಹೋಲುವ ಪುಸ್ತಕ ಮಾರಾಟ; ಕಲ್ಪತರು ನಾಡಿನಲ್ಲಿ ಸದ್ದಿಲ್ಲದೆ ಕೆಲಸ ಮಾಡ್ತಿದ್ಯಾ ಮತಾಂತರ ಜಾಲ?

ಮತಾಂತರ

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ಮತಾಂತರ ಜಾಲವೊಂದು ಸದ್ದಿಲ್ಲದೇ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಜಿಲ್ಲೆಯಲ್ಲಿ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನೇ ಹೋಲುವ ಪುಸ್ತಕಗಳನ್ನು ಮುದ್ರಿಸಿ, ಮಾರಾಟ ಮಾಡುತ್ತಿರುವ ಗುಂಪೊಂದು ಕಾಣಿಸಿಕೊಂಡಿದ್ದು, ಈ ಪುಸ್ತಕದ ಒಳಗೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಲೇಖನಗಳನ್ನು ಪ್ರಕಟಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ʼಗೀತೆಯೇ ನಿನ್ನ ಜ್ಞಾನ ಅಮೃತʼ ಎನ್ನುವ ಪುಸ್ತಕವನ್ನು ಮುದ್ರಿಸಿ ಮಾರಾಟ ಮಾಡಲಾಗುತ್ತಿದೆ. ಈ ಪುಸ್ತಕದ ಮುಖಪುಟದ ಮೇಲೆ ಶ್ರೀ ಕೃಷ್ಣ ಪರಮಾತ್ಮನ ಚಿತ್ರವನ್ನು ಕೂಡ ಮುದ್ರಿಸಲಾಗಿದೆ. 100 ರೂಪಾಯಿ ಮುಖಬೆಲೆಯ ಪುಸ್ತಕವನ್ನು ಕೇವಲ 10 ರೂಪಾಯಿಗೆ ಮಾರಾಟ ಮಾಡುತ್ತಿದೆ. ಇನ್ನೂ ಕೆಲವು ಕಡೆ ಉಚಿತವಾಗಿಯೇ ಪುಸ್ತಕಗಳನ್ನು ಹಂಚಲಾಗುತ್ತಿದೆ.

ಇದನ್ನೂ ಓದಿ | ಕೋಟಿ ಕಂಠ ಗಾಯನ | ಕೋಟಿ ಕೋಟಿ ಕಂಠಗಳಲ್ಲಿ ಮೊಳಗಿತು ಕನ್ನಡದ ಗಾನ: ನೆಲ, ಜಲ, ಆಕಾಶದಲ್ಲೆಲ್ಲ ಅನುರಣನ

ಏನೋ ಕಡಿಮೆ ದರಕ್ಕೆ ಪುಸ್ತಕ ಸಿಕ್ಕಿತಲ್ಲ ಎಂದು ಪುಸ್ತಕವನ್ನು ಮನೆಗೆ ಕೊಂಡೊಯ್ದು ಓದಿದವರು ಗೊಂದಲಕ್ಕೀಡಾಗಿದ್ದಾರೆ. ಏಕೆಂದರೆ ಮುಖಪುಟವನ್ನು ನೋಡಿದರೆ ಭಗವದ್ಗೀತೆಯನ್ನು ಹೋಲುವ ಈ ಪುಸ್ತಕದಲ್ಲಿ, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ, ಆಕ್ಷೇಪಾರ್ಹ ಲೇಖನಗಳಿವೆ. ಹಿಂದೂ ಧರ್ಮ ಸರಿಯಿಲ್ಲ, ದೇವರುಗಳು ಸರಿಯಿಲ್ಲ. ಹಿಂದೂ ಆಚರಣೆಗಳು ಕೂಡ ಸರಿಯಿಲ್ಲ ಎಂದು ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲ ಬೈಬಲ್ ಹಾಗೂ ಖುರಾನ್ ಗ್ರಂಥಗಳೇ ಶ್ರೇಷ್ಠ ಎಂತಲೂ ಈ ಪುಸ್ತಕದಲ್ಲಿ ಹೇಳಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂಪರ ಕಾರ್ಯಕರ್ತರು ನೀಡಿದ ದೂರಿನ ಹಿನ್ನೆಲೆಯಲ್ಲಿ ತುಮಕೂರಿನ ಕೋರಾ ಪೊಲೀಸ್ ಠಾಣೆ ಮತ್ತು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಹಿಂದೂಪರ ಕಾರ್ಯಕರ್ತರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೂ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

ಈ ಪುಸ್ತಕವನ್ನು ಬ್ಯಾನ್ ಮಾಡಬೇಕು ಹಾಗೂ ಉಚಿತವಾಗಿ ಡೌನ್‌ಲೋಡ್‌ ಸೌಲಭ್ಯ ನೀಡಿರುವ ವೆಬ್‌ಸೈಟ್‌ ಅನ್ನು ನಿಷೇಧಿಸಬೇಕು. ಇದರ ಹಿಂದಿರುವವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ʼಗೀತೆಯೇ ನಿನ್ನ ಜ್ಞಾನ ಅಮೃತʼ ಎಂಬ ಪುಸ್ತಕ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಠಾಣೆಗೆ ದೂರು ನೀಡಿ, ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ | ಹಿಂದೂ ಧರ್ಮದ ಬಗ್ಗೆ ಆಕ್ಷೇಪಾರ್ಹ ಅಂಶಗಳಿರುವ ಪುಸ್ತಕ ಮಾರಾಟ; ಭದ್ರಾವತಿ ಠಾಣೆಯಲ್ಲಿ ಪ್ರಕರಣ ದಾಖಲು

Exit mobile version