Site icon Vistara News

Cooker, saree politics : ತುಮಕೂರಿನಲ್ಲಿ ಸೀರೆ, ಕುಕ್ಕರ್‌ ಹಂಚಿದ ಅಟ್ಟಿಕಾ ಬಾಬು, ಕೊನೆಗೆ ಬಂದವರಿಗೆ ಸೀರುಂಡೆ!

Attica babu tumkuru

#image_title

ತುಮಕೂರು: ಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸೀರೆ, ಕುಕ್ಕರ್ ಪಾಲಿಟಿಕ್ಸ್ (Cooker, saree politics) ಜೋರಾಗಿ ನಡೆಯುತ್ತಿದೆ. ಎಲ್ಲ ಪಕ್ಷಗಳು ಇವುಗಳನ್ನೇ ಅಸ್ತ್ರವಾಗಿ ಮಾಡಿಕೊಂಡಿವೆ. ಅದರಲ್ಲೂ ನಾನಾ ಕಾರಣ, ಹಬ್ಬಗಳನ್ನು ಮುಂದಿಟ್ಟು ಹಂಚಿಕೆ ನಡೆಯುತ್ತಿದೆ. ಬುಧವಾರ ಮಹಿಳಾ ದಿನಾಚರಣೆ ಇದ್ದ ಹಿನ್ನೆಲೆಯಲ್ಲಿ ಅದನ್ನೇ ಕಾರಣವಾಗಿಟ್ಟುಕೊಂಡು ಖ್ಯಾತ ಚಿನ್ನದ ವ್ಯಾಪಾರಿ ಅಟ್ಟಿಕಾ ಬಾಬು ತುಮಕೂರಿನಲ್ಲಿ ಮಹಿಳಾ ಮತದಾರರಿಗೆ ಸೀರೆ ಮತ್ತು ಕುಕ್ಕರ್‌ ಹಂಚಿದ್ದಾರೆ. ಆದರೆ, ಏಕಾಏಕಿ ಜನ ಸಾಗರವೇ ಬಂದಿದ್ದರಿಂದ ಅಂಗಡಿ ಬೇಗ ಮುಚ್ಚಬೇಕಾಯಿತು!

ತುಮಕೂರು ನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಅಟ್ಟಿಕಾ ಬಾಬು ಅವರು ಕಳೆದ ಕೆಲವು ಸಮಯದಿಂದ ಇಲ್ಲೇ ಠಿಕಾಣಿ ಹೂಡಿದ್ದಾರೆ. ಬೊಮ್ಮನಹಳ್ಳಿ ಬಾಬು ಎಂಬ ಹೆಸರಿನ ಇವರು ಅಟ್ಟಿಕಾ ಗೋಲ್ಡ್‌ ಕಂಪನಿ ಶುರು ಮಾಡಿದ ಬಳಿಕ ಅಟ್ಟಿಕಾ ಬಾಬು ಆದರು. ಮುಸ್ಲಿಂ ಆದರೂ ಹಿಂದೂ ದೇವರುಗಳ ಬಗ್ಗೆ ಭಕ್ತಿ ಭಾವ ಹೊಂದಿರು ಇವರು ತಮ್ಮ ಪ್ರಚಾರ ಕಾರ್ಯವನ್ನು ದೇವಸ್ಥಾನದ ಎದುರಿನಿಂದಲೇ ಆರಂಭಿಸಿದ್ದರು. ಇವರಿಗೆ ಟಿಕೆಟ್‌ ಪಕ್ಕಾ ಆಗಿಲ್ಲವಾದರೂ ಜಮೀರ್‌ ಅಹಮದ್‌ ಖಾನ್‌ ಅವರ ಮೂಲಕ ಹೇಗಾದರೂ ಮಾಡಿ ಟಿಕೆಟ್‌ ಪಡೆಯುತ್ತೇನೆ ಎನ್ನುವ ಧೈರ್ಯದಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ.

ಬುಧವಾರ ಇವರು ತನ್ನ ಮನೆಯ ಎದುರೇ ಸೀರೆ, ಕುಕ್ಕರ್ ಹಂಚಿದ್ದಾರೆ. ಇವರ ಮನೆ ಇರುವುದು ನಗರದ ಉಪ್ಪಾರಹಳ್ಳಿ ಬ್ರಿಡ್ಜ್ ಬಳಿ. ಸೀರೆ, ಕುಕ್ಕರ್ ಹಂಚುವ ವಿಷಯ ತಿಳಿದು ಅಟ್ಟಿಕಾ ಮನೆಯ ಮುಂದೆ ಸಾವಿರಾರು ಮಹಿಳೆಯರು ಜಮಾಯಿಸಿದರು. ಐನೂರಕ್ಕೂ ಹೆಚ್ಚು ಜನರಿಗೆ ಕುಕ್ಕರ್ ಹಂಚಿದ ಬಳಿಕ ತಂದ ಲೋಡ್‌ ಖಾಲಿ ಆಯಿತು. ಹೀಗಾಗಿ ನಂತರ ಬಂದವರು ಖಾಲಿ ಕೈಯಲ್ಲಿ ಹಿಡಿಶಾಪ ಹಾಕುತ್ತಾ ಸಾಗಿದರು.

ಮಧ್ಯಾಹ್ನದ ಹೊತ್ತಿಗೆ ಲೋಡ್‌ ಖಾಲಿಯಾಗಿತ್ತು. ಅಷ್ಟಾದರೂ ಜನ ಮನೆ ಎದುರು ಕಾದಿದ್ದರು. ಈಗ ಬರಬಹುದು ಎಂಬ ನಿರೀಕ್ಷೆಯಲ್ಲಿ. ಕೊನೆಗೆ ಕತ್ತಲಾಗುತ್ತಿದ್ದಂತೆಯೇ ಜನರು ಕದಲಿದರು. ಸಾವಿರಾರು ಜನರು ಜಮಾಯಿಸಿದ್ದರಿಂದ ಅಟ್ಟಿಕಾ ಮನೆ ಎದುರು ಪೋಲೀಸರು ಠಿಕಾಣಿ ಹೂಡಿದ್ದರು.

ವಿಶೇಷವೆಂದರೆ, ಇಲ್ಲಿಗೆ ಬಂದು ಕುಕ್ಕರ್‌ಗಾಗಿ ಸಾಲುಗಟ್ಟಿದವರಲ್ಲಿ ಹೆಚ್ಚಿನವರಿಗೆ ಕುಕ್ಕರ್‌, ಸೀರೆ ಕೊಡುತ್ತಿರುವವರು ಯಾರು ಎನ್ನುವುದೇ ಗೊತ್ತಿರಲಿಲ್ಲ. ಅಟ್ಟಿಕಾ ಬಾಬು ಹೆಸರೂ ತಿಳಿದಿರಲಿಲ್ಲ. ಕೆಲವರು ಬೇರೆ ಪಕ್ಷದವರು ಬೇರೆ ಕಡೆ ಹಂಚುತ್ತಿದ್ದಾರಂತೆ ಎಂದು ಆಸೆಯಿಂದ ಹೇಳಿಕೊಂಡರು. ಇಲ್ಲಿ ಕಾದು ನಿಂತು ಅಲ್ಲಿ ಮಿಸ್‌ ಆಯಿತು ಎಂಬ ಬೇಸರವೂ ಕೆಲವರಲ್ಲಿತ್ತು.

ಇದನ್ನೂ ಓದಿ : GST Raid | ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್‌ಗಳ ಜಪ್ತಿ; ಬಾಕ್ಸ್‌ ಮೇಲೆ ಕುಣಿಗಲ್‌ ಕಾಂಗ್ರೆಸ್ ಶಾಸಕನ ಚಿತ್ರ

Exit mobile version