ಬೆಂಗಳೂರು: ಕೆಜಿಎಫ್-2 ಹಾಡಿನ ಕಾಪಿರೈಟ್ ಉಲ್ಲಂಘನೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಎಫ್ಐಆರ್‌ಗೆ ಇದ್ದ ತಡೆಯಾಜ್ಞೆ ವಿಸ್ತರಣೆ ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಭಾರತ್ ಜೋಡೊ ಯಾತ್ರೆ ವೇಳೆ ಕೆಜಿಎಫ್-2 ಹಾಡನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್‌ನಿಂದ ದೂರು ಸಲ್ಲಿಸಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿ, ಜೈರಾಮ್ ರಮೇಶ್, ಸುಪ್ರಿಯಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್, ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್‌ಗೆ ಇದ್ದ ತಡೆಯಾಜ್ಞೆಯನ್ನು ಮತ್ತೆ ವಿಸ್ತರಣೆ ಮಾಡಿದೆ.
ಈ ಹಿಂದೆ ಡಿಸೆಂಬರ್‌ನಲ್ಲಿ ನಡೆದ ವಿಚಾರಣೆಯಲ್ಲಿ ಕಾಂಗ್ರೆಸ್ ನಾಯಕರಿಗೂ ಕಾಪಿರೈಟ್ ಉಲ್ಲಂಘನೆಗೂ ಸಂಬಂಧವಿಲ್ಲ. ದೂರಿನಲ್ಲಿ ಕ್ರಿಮಿನಲ್ ಪ್ರಕರಣದ ಯಾವುದೇ ಅಂಶಗಳಿಲ್ಲ ಎಂದು ಎಂದು ರಾಹುಲ್ ಗಾಂಧಿ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು. ಹೀಗಾಗಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಲಾಗಿತ್ತು.
ಇದನ್ನೂ ಓದಿ | Karnataka Politics : ಟಾರ್ಗೆಟ್ ಲಿಂಗಾಯತ; ಕಾಂಗ್ರೆಸ್ ಲೇವಡಿಗೆ ಬೊಮ್ಮಾಯಿ ತಿರುಗೇಟು
ಈ ಹಿಂದೆ ಏನಾಗಿತ್ತು?
ಕೆಜಿಎಫ್-2 ಚಿತ್ರದ ಹಾಡನ್ನು ಅಕ್ರಮವಾಗಿ ಬಳಸಿಕೊಂಡು ಕಾಂಗ್ರೆಸ್ ನಾಯಕರು ಹಕ್ಕುಸ್ವಾಮ್ಯ ಉಲ್ಲಂಘಿಸಿದ್ದಾರೆ ಎಂದು ಎಂಆರ್‌ಟಿ ಮ್ಯೂಸಿಕ್ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಕಾಂಗ್ರೆಸ್ ಪಕ್ಷದ ಮತ್ತು ಭಾರತ್ ಜೋಡೊ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಕೋರಿತ್ತು. ಇದೇ ಆಧಾರದಲ್ಲಿ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯವು ಕಾಂಗ್ರೆಸ್‌ನ ಭಾರತ್ ಜೋಡೊ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲಾಗಿತ್ತು.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಕಾಲ್ನಡಿಗೆಯಲ್ಲಿ ಸಾಗುವ ವಿಡಿಯೋಗೆ ‘ಕೆಜಿಎಫ್ 2’ ಚಿತ್ರದ ಹಿಂದಿ ಗೀತೆ ‘ಸುಲ್ತಾನ್..’ ಹಾಡನ್ನು ಬಳಕೆ ಮಾಡಲಾಗಿತ್ತು. ಈ ಕಾರಣಕ್ಕೆ ರಾಹುಲ್ ಗಾಂಧಿ ವಿರುದ್ಧ ಈ ಹಾಡಿನ ಹಿಂದಿ ಹಕ್ಕನ್ನು ಹೊಂದಿರುವ ಎಂಆರ್‌ಟಿ ಮ್ಯೂಸಿಕ್ ಫೋರ್ಜರಿ ಪ್ರಕರಣ ದಾಖಲು ಮಾಡಿತ್ತು. ರಾಹುಲ್ ಗಾಂಧಿ ಮಾತ್ರವಲ್ಲದೆ, ಜೈರಾಮ್ ರಮೇಶ್, ಸುಪ್ರಿಯಾ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು.