ಬೆಂಗಳೂರು: ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಸಂಬಂಧಿಸಿ ಮುಂದಿನ ಹೆಜ್ಜೆಗಳನ್ನು ನಿರ್ಧರಿಸುವುದಕ್ಕಾಗಿ ಕಂದಾಯ ಸಚಿವರೂ ಆಗಿರುವ, ರಾಜ್ಯದ ವಿಕೋಪ ನಿರ್ವಹಣಾ ತಂಡದ ಮುಖ್ಯಸ್ಥ ಆರ್. ಅಶೋಕ್ ಅವರು ಶನಿವಾರ ಕರೆದಿದ್ದ ಸಭೆಯನ್ನು ಮುಂದೂಡಲಾಗಿದೆ.
ಕಂದಾಯ, ಆರೋಗ್ಯ ಮತ್ತು ಗೃಹ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಅವರೆಲ್ಲರೂ ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಯಲ್ಲಿದ್ದಾರೆ. ಅವರು ಬೆಂಗಳೂರಿಗೆ ಬಂದಿಲ್ಲದೆ ಇರುವುದರಿಂದ ಸಭೆ ನಡೆಸಲು ಸಾಧ್ಯವಾಗಿಲ್ಲ. ಸೋಮವಾರ ಸುವರ್ಣ ಸೌಧದಲ್ಲೇ ಸಭೆ ನಡೆಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಅವಶ್ಯಕತೆ ಇದ್ದರೆ ಸಭೆ ಮಾಡೋಣ ಎಂದ ಸುಧಾಕರ್
ಈ ನಡುವೆ, ಕಂದಾಯ ಸಚಿವರ ಜೊತೆ ಮಾತಾಡ್ತೀನಿ, ಸಭೆ ಅವಶ್ಯಕತೆ ಇದ್ರೆ ಮಾಡೋಣ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ʻʻಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಗೆ ಮಾಡುತ್ತಿದ್ದೇವೆ. ನಮ್ಮಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಿದೆ. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ, ಬೆಂಗಳೂರಲ್ಲಿ ಪ್ರತ್ಯೇಕವಾಗಿ ಗೈಡ್ ಲೈನ್ ತರುವ ಸ್ಥಿತಿ ಇಲ್ಲ. ಅಗತ್ಯ ಬಿದ್ರೆ ನೋಡೋಣʼʼ ಎಂದು ಸುಧಾಕರ್ ಬೆಂಗಳೂರಿನಲ್ಲಿ ಹೇಳಿದರು. ನಾವು ಅಧಿಕಾರಿಗಳೊಂದಿಗೆ ಪ್ರತಿದಿನ ಸಭೆ ಮಾಡುತ್ತಿದ್ದೇವೆ ಎಂದಿದ್ದಾರೆ ಸುಧಾಕರ್.
ಹೊಸವರ್ಷದ ಗೈಡ್ ಲೈನ್ಸ್ ಚರ್ಚೆ ಆಗಿಲ್ಲ
ʻʻಕೋವಿಡ್ ಲಸಿಕೆ ಲಭ್ಯತೆ ಬಗ್ಗೆ ಯಾವುದೇ ಗೊಂದಲ ಬೇಡ. ರಾಜ್ಯದಲ್ಲಿ ೧೦ ಲಕ್ಷ ಕೋವಿಡ್ ಲಸಿಕೆಗಳಿವೆ. ಇನ್ನಷ್ಟು ಬೇಕಾದರೂ ತರಿಸಿ ಕೊಳ್ಳುತ್ತೇವೆʼʼ ಎಂದು ಅಭಯ ನೀಡಿದ ಸಚಿವ ಸುಧಾಕರ್, ಹೊಸ ವರ್ಷದ ಬಗ್ಗೆ ಯಾವುದೇ ಚರ್ಚೆ ಅಗಿಲ್ಲ, ಪ್ರತ್ಯೇಕ ಮಾರ್ಗ ಸೂಚಿ ಬಗ್ಗೆಯೂ ಚರ್ಚೆ ಇಲ್ಲ. ಹೊಸ ವರ್ಷಕ್ಕೆ ಇನ್ನೂ ನಾಲ್ಕೈದು ದಿನ ಇದೆ, ಅನಂತರ ನೋಡೋಣʼʼ ಎಂದರು.
ʻʻಜನರಿಗೆ ಕಳೆದ ಮೂರು ವರ್ಷದಿಂದ ಕೋವಿಡ್ ಎದುರಿಸಿ ಗೊತ್ತಿದೆ. ಅವರೇ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಾರೆ. ಸದ್ಯಕ್ಕೆ ಭಯಪಡುವ ಯಾವುದೇ ಅವಶ್ಯಕತೆ ಇಲ್ಲʼʼ ಎಂದು ನುಡಿದರು.
ವಿಧಾನಸೌಧದಲ್ಲಿ ಮಾಸ್ಕ್ ಕಡ್ಡಾಯ
ಈ ನಡುವೆ, ವಿಧಾನ ಸೌಧದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಸೋಮವಾರದಿಂದ ಅಧಿವೇಶನ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ಹಾಕಲಾಗುವುದು, ಅಧಿವೇಶನದಲ್ಲಿ ಭಾಗವಹಿಸುವವರಿಗೂ ಮಾಸ್ಕ್ ಕಡ್ಡಾಯ ಮಾಡಲಾಗುವುದು ಎಂದು ಹೇಳಿದರು ಸುಧಾಕರ್.
ಇದನ್ನೂ ಓದಿ | Coronavirus | ಭಾರತದಲ್ಲಿ ಹೊಸ ರೂಪಾಂತರಿಯ ಅಲೆ ಬಾರದು: ವೈರಾಣುತಜ್ಞೆ ಅಭಯ