ಬೆಂಗಳೂರು: ಕೋವಿಡ್ ಸೋಂಕಿನಿಂದ (Coronavirus ) ಮುಕ್ತವಾಗಿ ಸಹಜ ಸ್ಥಿತಿಗೆ ಮರುಳುತ್ತಿರುವ ಹೊತ್ತಿನಲ್ಲಿ ಮತ್ತೆ ಕೊರೊನಾ ಗುಮ್ಮ ವಾಪಸ್ ಆಗುತ್ತಿದೆ. ಚೀನಾ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಟೆನ್ಷನ್ ಶುರುವಾಗಿದೆ.
ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಸಂಬಂಧ ಮಹತ್ವದ ಸಭೆ ನಡೆಯಲಿದೆ. ಸಭೆ ಬಳಿಕ ಮತ್ತೆ ಫೇಸ್ ಮಾಸ್ಕ್ ಕಡ್ಡಾಯ ಮಾಡುವ ಸಾಧ್ಯತೆ ಇದೆ. ಕೊರೊನಾ ಸಂಬಂಧ ಈಗಾಗಲೇ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ನಿತ್ಯ 10ಕ್ಕೂ ಹೆಚ್ಚು ಮಂದಿಗೆ ಕೋವಿಡ್ ದೃಢ
ಡಿಸೆಂಬರ್ 21ರ ಬುಧವಾರದಂದು ರಾಜ್ಯದಲ್ಲಿ 3,622 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು ಇದರಲ್ಲಿ 18 ಜನರಲ್ಲಿ ಸೋಂಕು ಪತ್ತೆ ಆಗಿದೆ. ಪಾಸಿಟಿವಿಟಿ ದರ ಶೇ.1.44% ಇದ್ದು, ಸೋಂಕಿನಿಂದ 24 ಮಂದಿ ಗುಣಮುಖರಾಗಿದ್ದು, ಮೃತಪಟ್ಟ ಬಗ್ಗೆ ವರದಿ ಆಗಿಲ್ಲ. ಸದ್ಯ ರಾಜ್ಯದಲ್ಲಿ 1,263 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರು ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಒಮಿಕ್ರಾನ್ ಉಪತಳಿಯ ಅಬ್ಬರ
ಅತಿ ವೇಗವಾಗಿ ಹರಡುವ ಒಮಿಕ್ರಾನ್‌ನ ಉಪತಳಿ ಸದ್ಯ ಜನರ ನಿದ್ದೆಗೆಡಿಸುವಂತೆ ಮಾಡಿದೆ. ಈಗಾಗಲೇ ಒಮಿಕ್ರಾನ್ ಉಪತಳಿಗಳಾದ ಬಿಎ1.1.529, ಬಿಎ1, ಬಿಎ2 ಮತ್ತು ಬಿಎ3, ಬಿಎ4, ಬಿಎ5 ರಾಜ್ಯದಲ್ಲಿ ಪತ್ತೆ ಆಗಿದ್ದವು. ಈ ಎಲ್ಲ ಉಪತಳಿಗಿಂತ ಬಿಎಫ್.7 ಪ್ರಬಲಶಾಲಿ ಆಗಿದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಕಳವಳ ವ್ಯಕ್ತಪಡಿಸಿದೆ.
ಚೀನಾ ದೇಶದಲ್ಲಿ ಅಪ್ಪಳಿಸಿರುವ ಹೊಸ ಅಲೆ ಭಯಾನಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರಾಸ್ ಅಧನಾಮ್ ಗೆಬ್ರಿಯೇಸಸ್ ಆತಂಕ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ ಒಮಿಕ್ರಾನ್‌ನ ಉಪತಳಿಯಾಗಿರುವ ಬಿಎಫ್.7 ಆರ್ಭಟಿಸುತ್ತಿದೆ. ಜನರು ಕೋವಿಡ್ ಲಸಿಕೆ ಬಗ್ಗೆ ನಿರ್ಲಕ್ಷ್ಯ ಹೊಂದುವುದು ಸರಿಯಲ್ಲ ಎಂದಿದ್ದಾರೆ. ಇತ್ತ ಭಾರತದಲ್ಲೂ ಬಿಎಫ್.7 ವೈರಸ್ ಪತ್ತೆ ಆಗಿದ್ದು, ಗುಜರಾತ್ ಹಾಗೂ ಒಡಿಶಾದಲ್ಲಿ ತಲಾ 2 ಪ್ರಕರಣಗಳು ವರದಿ ಆಗಿದೆ. ಸೋಂಕಿತರು ಹೋಮ್ ಐಸೋಲೇಶನ್‌ನಲ್ಲಿದ್ದು ಗುಣಮುಖ ಆಗಿದ್ದಾರೆ.
ಮಾಸ್ಕ್ ಕಡ್ಡಾಯ ಚಿಂತನೆಗೆ ರಾಜಧಾನಿಯಲ್ಲಿ ಮಿಶ್ರ ಪ್ರತಿಕ್ರಿಯೆ
ಫೇಸ್ ಮಾಸ್ಕ್ ಕಡ್ಡಾಯ ಮಾಡಲು ಬಿಬಿಎಂಪಿ ಚಿಂತಿಸುತ್ತಿರುವ ಸಮಯದಲ್ಲಿಯೇ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಹಲವರು ಖುದ್ದು ಮಾಸ್ಕ್ ಧರಿಸುತ್ತಿದ್ದರೆ, ಕಡ್ಡಾಯದ ನೆಪದಲ್ಲಿ ದಂಡ ವಸೂಲಿಗೆ ಇಳಿಯುವುದು ಬೇಡ ಎನ್ನುತ್ತಿದ್ದಾರೆ.
ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ಏನಿದೆ?
ಹೊಸ ಸೋಂಕು ಪತ್ತೆ ಆಗುತ್ತಿದ್ದಂತೆ ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಒಂದು ಸುತ್ತಿನ ಸಭೆಯನ್ನು ನಡೆಸಿದೆ. ಸಭೆಯಲ್ಲಿ ಹಲವು ಪ್ರಮುಖ ಅಂಶವನ್ನು ಚರ್ಚಿಸಿದ್ದು ವರದಿ ಸಿದ್ದ ಮಾಡಿದ್ದು ಏನೆಲ್ಲ ಶಿಫಾರಸು ಮಾಡಿದೆ ಎಂಬುದರ ಮಾಹಿತಿ ಇಲ್ಲಿದೆ.
-ಒಳಾಂಗಣ, ಹೊರಾಂಗಣ ಪ್ರದೇಶಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಕಡ್ಡಾಯ ಮಾಸ್ಕ್ ಬಳಕೆಗೆ ಶಿಫಾರಸು
-ಹೈ ರಿಸ್ಕ್ ಖಾಯಿಲೆಯಿಂದ ಬಳಲುತ್ತಾ ಇರುವವರಿಗೆ ಮಾಸ್ಕ್ ಬಳಕೆ ಕಡ್ಡಾಯ
-ಜನರು ಗುಂಪು ಹೆಚ್ಚಿರುವ ಮಾಲ್, ಪಬ್, ಸಿನಿಮಾ ಥಿಯೇಟರ್, ರೆಸ್ಟೋರೆಂಟ್‌ಗಳಲ್ಲಿ, ಬಸ್, ಮೆಟ್ರೋ, ರೈಲುಗಳಲ್ಲಿ ಫೇಸ್ ಮಾಸ್ಕ್ ಧರಿಸುವುದು.
-ಬೂಸ್ಟರ್ ಡೋಸ್ ಶೇ. 21% ಆಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವುದು.
-ಕೋವಿಡ್ ಟೆಸ್ಟಿಂಗ್ ಹೆಚ್ಚಳಕ್ಕೆ ಶಿಫಾರಸು
-ರೋಗಲಕ್ಷಣ ಇರುವವರಿಗೆ ಬೆಡ್ ವ್ಯವಸ್ಥೆ ಮತ್ತು ಚಿಕಿತ್ಸೆಯ ಪ್ರೋಟೋಕಾಲ್ ಪಾಲಿಸುವಂತೆ ಸೂಚಿಸುವುದು
-ಬೆಡ್ ವ್ಯವಸ್ಥೆ, ಮ್ಯಾನ್ ಪವರ್, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ಮ್ಯಾನ್ ಪವರ್ ಹೆಚ್ಚಿಸಿಕೊಳ್ಳುವುದು.
-ಬೆಂಗಳೂರಿನಲ್ಲಿ ಸೀವೇಜ್ ವಾಟರ್ ಟೆಸ್ಟಿಂಗ್ ಮೂಲಕ ಕೊರೊನಾ ತಳಿಯ ಬಗ್ಗೆ ನಿಗಾ ವಹಿಸಬೇಕು.
-ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ತೀವ್ರ ನಿಗಾವಹಿಸುವುದು.
ಕೋವಿಡ್ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದು, ಬುಧವಾರ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಕಮಿಟಿ ಸದಸ್ಯರು ಒಂದಷ್ಟು ಶಿಫಾರಸುಗಳನ್ನು ನೀಡಿದ್ದಾರೆ. ಆ ಶಿಫಾರಸುಗಳನ್ನು ನಾವು ಸರ್ಕಾರಕ್ಕೆ ಕಳಿಸಿದ್ದೇವೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಜನರು ಸ್ವಚ್ಛತೆ ಕುರಿತು ಹೆಚ್ಚು ಪ್ರಾಮುಖ್ಯತೆ ನೀಡಬೇಕು. ದೈಹಿಕ ಅಂತರ, ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ಸ್ವಚ್ಛಗೊಳಿಸುವುದು ಮಾಡುತ್ತಿರಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ | Coronavirus | ಮುಂದೇನು ದಾರಿ? ಇಂದು ಪ್ರಧಾನಿ ನೇತೃತ್ವದಲ್ಲಿ ಕೋವಿಡ್ ಪರಿಶೀಲನಾ ಸಭೆ