Site icon Vistara News

Corona Virus: ಕೇರಳದಲ್ಲಿ ಕೊರೊನಾ ಆತಂಕ, ಕೊಡಗು ಗಡಿಯಲ್ಲಿ ತಪಾಸಣೆ ತೀವ್ರ

corona virus test

ಮಡಿಕೇರಿ: ಕೇರಳ ರಾಜ್ಯದಲ್ಲಿ ಕೊರೋನಾ ರೂಪಾಂತರಿಯ (Corona Virus) ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲೆ ಗಡಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಗಡಿಯಲ್ಲಿ ತಪಾಸಣೆ ತೀವ್ರವಾಗಿದೆ.

ಕೇರಳದಲ್ಲಿ ಇತ್ತೀಚೆಗೆ ಕೋವಿಡ್‌ ವೈರಸ್‌ನ (Covid virus) ಕೊರೊನಾದ ಹೊಸ ರೂಪಾಂತರಿಯಾದ COVID Subvariant JN.1 ಪ್ರಕರಣಗಳು ಕಂಡುಬರುತ್ತಿವೆ. ಅಮೆರಿಕ ಹಾಗೂ ಯುರೋಪ್‌ನಲ್ಲಿ ಕೂಡ ಇದು ಹರಡುತ್ತಿದೆ. ಭಾರತದಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಇದು ಕಂಡುಬಂದಿದೆ.

ಆರೋಗ್ಯ ಇಲಾಖೆ ಸಿಬ್ಬಂದಿಗಳು ಗಡಿ ಗೇಟುಗಳಲ್ಲಿ ಬಿಡಾರ ಹೂಡಿದ್ದು, ಕೇರಳದಿಂದ ಬರುತ್ತಿರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಮೊದಲ ಹಂತವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡುತ್ತಿದ್ದಾರೆ.

ಕುಟ್ಟ, ಮಾಕುಟ್ಟ, ಕರಿಕೆ ಹಾಗೂ ಸಂಪಾಜೆ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೇರಳದಿಂದ ಕೊಡಗಿಗೆ ಓಡಾಡುವವರ ಸಂಖ್ಯೆ ಹೆಚ್ಚಿದ್ದು, ಆಗಮಿಸುವವರ ಮೇಲೆ ಹಾಗೂ ಇಲ್ಲಿಂದ ಅಲ್ಲಿಗೆ ಹೋಗಿ ಮರಳುತ್ತಿರುವವರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸುತ್ತಿದೆ.

ಆದರೆ ಕೊಡಗಿನ ಜನತೆ ಆತಂಕ ಪಡಬೇಕಿಲ್ಲ, ಇದು ಅಪಾಯಕಾರಿಯಾದ ಸೋಂಕು ಅಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೇರಳದಲ್ಲಿ ಹೆಚ್ಚಾಗಿರುವ ಸೋಂಕಿಗೆ ಈಗಾಗಲೇ ನೀಡಲಾಗಿರುವ ಕೊರೊನಾ ವ್ಯಾಕ್ಸಿನ್‌ನಿಂದ ಪಡೆದ ಪ್ರತಿರೋಧ ಶಕ್ತಿ ಸಾಕು. ಕೊರೊನಾ ತೀವ್ರಗೊಂಡವರಲ್ಲೂ ಆಸ್ಪತ್ರೆವಾಸ ಅಗತ್ಯವಾದ ಗಂಭೀರತೆ ಕಂಡುಬಂದಿಲ್ಲ ಎಂದುಇ ಆರೋಗ್ಯ ಇಲಾಖೆ ತಿಳಿಸಿದೆ.

ಕೊರೋನಾ ರೂಪಾಂತರಿ ಬಗ್ಗೆ ಎಚ್ಚರ ವಹಿಸುವಂತೆ ಕೊಡಗು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ಭೋಸರಾಜ್ ಸೂಚನೆ ನೀಡಿದ್ದಾರೆ. ಈಗಾಗಲೆ ಕೊಡಗು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಅಗತ್ಯ ಪರೀಕ್ಷಾ ಕಿಟ್‌ಗಳನ್ನು ತರಿಸಿಟ್ಟುಕೊಳ್ಳಲಾಗಿದೆ.

ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಕೊರೊನಾ ರೂಪಾಂತರಿಯ ಹರಡುವಿಕೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಇದನ್ನೂ ಓದಿ: COVID Subvariant JN.1: ಕೊರೊನಾ ಲಕ್ಷಣ ಕಂಡು ಬಂದ್ರೆ ಕಡ್ಡಾಯ ಪರೀಕ್ಷೆ ಮಾಡಿಸಿ: ದಿನೇಶ್‌ ಗುಂಡೂರಾವ್‌

Exit mobile version