ಬೆಂಗಳೂರು: ಈಗಾಗಲೇ ದೇಶಾದ್ಯಂತ ಮತ್ತೊಮ್ಮೆ ಸಾಂಕ್ರಾಮಿಕ ಕೊರೊನಾ ಸೋಂಕು (Coronavirus) ಹರಡುವ ಭೀತಿ ಹೆಚ್ಚಾಗಿದೆ. ರಾಜ್ಯದಲ್ಲಿಯೂ ಸಹ ಈ ಬಗ್ಗೆ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಫೇಸ್ ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಸೋಂಕು ಹರಡುವಿಕೆ ಹೆಚ್ಚಾದರೆ ನಿರ್ಬಂಧ ಹೇರುವ ಭೀತಿಯಲ್ಲಿ ಹೋಟೆಲ್ ಉದ್ಯಮವಿದ್ದು, ಅವೈಜ್ಞಾನಿಕ ಮಾರ್ಗಸೂಚಿ ಹೊರಡಿಸದಂತೆ ಮನವಿ ಮಾಡಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್, ಹೋಟೆಲ್ ಉದ್ಯಮವು ಅನಿವಾರ್ಯ ಸೇವೆಯಡಿ ಬರಲಿದೆ. ಅವೈಜ್ಞಾನಿಕ ರೂಲ್ಸ್ ಜಾರಿ ಮಾಡದಂತೆ ಮನವಿ ಮಾಡಿದ್ದಾರೆ. ಮಾರ್ಷಲ್ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಜತೆಗೆ ಎಲ್ಲ ಕೋವಿಡ್ ನಿಯಮಗಳನ್ನು ಪಾಲಿಸಲು ಸಜ್ಜಾಗಿದ್ದೇವೆ ಎಂದರು. ಅದರೆ, ಯಾವ ಕಾರಣಕ್ಕೂ ಹೋಟೆಲ್ ಮುಚ್ಚುವ ಆದೇಶ ಹೊರಡಿಸಬಾರದು ಎಂದು ಕೇಳಿಕೊಂಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಕಾರಣಕ್ಕೆ ಎರಡು ವರ್ಷಗಳು ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಹಲವು ಕಾರ್ಮಿಕರು ಕೆಲಸ ಕಳೆದುಕೊಂಡು ಊರು ಬಿಟ್ಟು ಹೋಗುವಂತಾಯಿತು. ಸೀಮಿತ ಸಮಯದಲ್ಲಿ ಮಾತ್ರ ಪಾರ್ಸಲ್‌ಗಷ್ಟೆ ಅವಕಾಶ ಕಲ್ಪಿಸಿಕೊಡಲಾಗಿತು. ಕೋವಿಡ್ ತೀವ್ರತೆ ಕಡಿಮೆ ಆದ ಬಳಿಕ ಹೋಟೆಲ್ ಉದ್ಯಮ ಚೇತರಿಸಿಕೊಂಡು ಮಾಮೂಲಿಯಂತೆ ಚಟುವಟಿಕೆಗಳು ಆರಂಭವಾಗಿದ್ದವು. ಇದೀಗ ಮತ್ತೆ ಕೋವಿಡ್ ಆವರಿಸುವ ಭೀತಿ ಹೆಚ್ಚಾಗಿದ್ದು, ನಷ್ಟದ ಸುಳಿಯಲ್ಲಿ ಸಿಲುಕುವ ಆತಂಕವನ್ನು ಹೋಟೆಲ್ ಉದ್ಯಮ ಹೊಂದಿದೆ.
ಇದನ್ನೂ ಓದಿ | Coronavirus | ಫೇಸ್ ಮಾಸ್ಕ್, ಬೂಸ್ಟರ್ ಡೋಸ್ ಕಡ್ಡಾಯಗೊಳಿಸಿದ ಬೆಂಗಳೂರು ವಿಶ್ವವಿದ್ಯಾಲಯ