ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ (Coronavirus News) ಆತಂಕ ಶುರುವಾಗಿದೆ. ಜನವರಿಯಿಂದ ರಾಜ್ಯದಲ್ಲಿ ಸೋಂಕಿತರ ಪ್ರಮಾಣ (covid cases in karnataka) ನಿತ್ಯ 10 ಸಾವಿರ ಗಡಿ ದಾಟುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಡಿಸೆಂಬರ್‌ನಲ್ಲಿ ಸಾಕಷ್ಟು ಕಡೆ ಜಾತ್ರೆ, ಉತ್ಸವಗಳು, ಮದುವೆ ಇತ್ಯಾದಿ ಖಾಸಗಿ ಸಮಾರಂಭಗಳು ನಡೆದಿವೆ. ವರ್ಷಾಂತ್ಯದ ಆಚರಣೆಗಳು ಬಹು ಮಂದಿಯನ್ನು ಜೊತೆಗೆ ಸೇರಿಸುತ್ತವೆ. ನಂತರ ಜನವರಿಯಲ್ಲೂ ರಾಜ್ಯಾದ್ಯಂತ ದೇವಾಲಯಗಳಲ್ಲಿ ಲಕ್ಷಾಂತರ ಮಂದಿ ಸೇರುವ ಉತ್ಸವ- ಜಾತ್ರೆಗಳು ನಡೆಯುತ್ತಿವೆ. ಇವು ಕೋವಿಡ್ ವಿನಿಮಯ ನಡೆಯುವ ತಾಣಗಳಂತೆ ಆಗಲಿವೆ ಎಂದು ವೈದ್ಯರು ಆತಂಕಪಟ್ಟಿದ್ದಾರೆ. ಇಂಥ ಸ್ಥಳಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಸೂಕ್ತ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನಿಧಾನವಾಗಿ ಏರುತ್ತಿದೆ. ಹೀಗಾಗಿ ಜ್ವರ, ಕೆಮ್ಮು, ನೆಗಡಿ ಇದ್ದವರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಿಸಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯ ಕೋವಿಡ್ ಟೆಸ್ಟ್ ಶುರುವಾಗಿದೆ. ಆರ್‌ಟಿಪಿಸಿಆರ್ ಟೆಸ್ಟ್‌ಗೆ ಅಪೋಲೋ ಶೇಷಾದ್ರಿಪುರಂನಲ್ಲಿ 600 ರೂ., ಮಲ್ಲಿಗೆ ಆಸ್ಪತ್ರೆಯಲ್ಲಿ 1250 ರೂಪಾಯಿ, ಆಸ್ಟರ್ ಆಸ್ಪತ್ರೆಯಲ್ಲಿ 500 ರೂಪಾಯಿ ಪಡೆಯಲಾಗುತ್ತಿದೆ. ರಾಪಿಡ್ ಆಂಟಿಜೆನ್ ಪರೀಕ್ಷೆಗೆ 450 ರೂಪಾಯಿ ತೆಗೆದುಕೊಳ್ಳಲಾಗುತ್ತಿದೆ.
ಕೋವಿಡ್ ರಾಪಿಡ್ ಆಂಟಿಜೆನ್ ಟೆಸ್ಟ್ ಹಾಗೂ ಆರ್‌ಟಿಪಿಸಿಆರ್ ಟೆಸ್ಟ್‌ಗೆ ಹೊರ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಾತಿಗೆ ಬಿಬಿಎಂಪಿ ಮುಂದಾಗಿದೆ. ಡಾಕ್ಟರ್ಸ್, ಲ್ಯಾಬ್ ಬಾಯ್ಸ್, ಕೋವಿಡ್ ಟೆಸ್ಟ್ ಸಿಬ್ಬಂದಿ ನೇಮಕ ಸಾಧ್ಯತೆ ಇದೆ. ಜನವರಿ ಆರಂಭದಿಂದ ಬಸ್ ನಿಲ್ದಾಣ, ಮಾರುಕಟ್ಟೆಗಳ ಬಳಿ ರ್ಯಾಂಡಮ್ ಕೋವಿಡ್ ಟೆಸ್ಟ್ ನಡೆಸಲಾಗುವುದು. ಸದ್ಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ಬಿಬಿಎಂಪಿ ಹಾಗೂ ಆಸ್ಪತ್ರೆಗಳು ಟೆಸ್ಟ್ ಮಾಡುತ್ತಿವೆ.
ಆರೋಗ್ಯ ಇಲಾಖೆಯು ಇಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆ ನಡೆಸಲಿದ್ದು, ಸಭೆಯಲ್ಲಿ ಟೆಸ್ಟ್ ಹಾಗೂ ಚಿಕಿತ್ಸೆ ದರದ ಬಗ್ಗೆ ಚರ್ಚೆ ನಡೆಸಲಿದೆ. ಕೋವಿಡ್ ಟೆಸ್ಟ್ ಹಾಗೂ ಕೋವಿಡ್ ಚಿಕಿತ್ಸೆಗೆ ಹೊಸ ದರ ನಿಗದಿ ಮಾಡಲಿದ್ದು, ಚರ್ಚೆಯ ನಂತರ ಹೊಸ ದರ ಪ್ರಕಟ ಮಾಡಲಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಆರೋಗ್ಯ ಸಚಿವರು, ಡಿಸಿಎಂ ಹಾಗೂ ಗೃಹ ಸಚಿವರು ಮತ್ತು ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆಗೆ ಸಭೆ ನಡೆಸಿದ್ದು, ಹಲವಾರು ಸೂಚನೆಗಳನ್ನು ನೀಡಲಾಗಿತ್ತು. ಪ್ರತಿದಿನ 5 ಸಾವಿರ ಕೊರೊನಾ ಟೆಸ್ಟ್ ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ, ಜನಸಂದಣಿ ಇರುವ ಕಡೆಗಳಲ್ಲಿ ಓಡಾಡುವ ಜನರಿಗೆ ಮಾಸ್ಕ್ ಬಳಕೆ, ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಲು ಕ್ರಮ, ಬೆಡ್, ವೆಂಟಿಲೇಟರ್ ಸೇರಿ ಎಲ್ಲಾ ರೀತಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Covid Subvariant JN1: ಕೋವಿಡ್ ಉಲ್ಬಣ; ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ