Site icon Vistara News

Ajit Rai : ಕ್ರೇಜಿಮ್ಯಾನ್ ಅಜಿತ್‌ ರೈಯ ಎಲ್ಲಾ ವಾಹನಗಳ ನಂಬರ್‌ ಒಂದೇ!; ATMಗೂ ಅದೇ ಪಾಸ್‌ವರ್ಡ್‌!

Ajit rai crazy

ಬೆಂಗಳೂರು: ಕೆಲಸಕ್ಕೆ ಸೇರಿದ ಕೆಲವೇ ವರ್ಷಗಳಲ್ಲಿ ಭ್ರಷ್ಟಾಚಾರದ (Corruption Case) ಮೂಲಕ ಸಾವಿರ ಕೋಟಿಗೂ ಅಧಿಕ ಸಂಪತ್ತು ಗಳಿಸಿರುವ ಕೆ.ಆರ್‌. ಪುರಂ ತಹಸೀಲ್ದಾರ್‌ ಅಜಿತ್‌ ರೈಗೆ (Ajit Rai) ಸಂಬಂಧಿಸಿ ಬಣ್ಣ ಬಣ್ಣದ ಕಥೆಗಳು ಬಯಲಾಗುತ್ತಿವೆ. ನೀವು ನಂಬಲೇಬೇಕು, ಅಜಿತ್‌ ರೈ ಕೈಲಿರುವ ಅಷ್ಟೂ ವಾಹನಗಳ ನಂಬರ್‌ (Fancy number) ಒಂದೇ. ಅದು ಲ್ಯಾಂಡ್‌ ಕ್ರೂಸರ್‌ ಇರಬಹುದು, ಬೈಕೇ ಇರಬಹುದು! ಸಾಲದ್ದಕ್ಕೆ ಅವನ ಎಟಿಎಂ ಪಾಸ್‌ವರ್ಡ್‌ ಕೂಡಾ ಅದೇ ನಂಬರ್‌. ಈ ರೀತಿ ಎಲ್ಲಾ ವಾಹನಗಳಿಗೆ ಒಂದೇ ಫ್ಯಾನ್ಸಿ ನಂಬರ್‌ ಪಡೆಯಲು ಅವನು ವೆಚ್ಚ ಮಾಡಿರುವ ಹಣದ ಮೊತ್ತ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ!

ಸರ್ವೇಯರ್‌ ಆಗಿದ್ದ ವೇಳೆ ತೀರಿಕೊಂಡ ಅಪ್ಪನ ಅನುಕಂಪದ ಜಾಬ್‌ನ ಆಸರೆ ಪಡೆದುಕೊಂಡು ಬೆಂಗಳೂರಿಗೆ ಬಂದು ತಹಸೀಲ್ದಾರ್‌ ಆಗಿರುವ ಅಜಿತ್‌ ರೈ ಈಗ ಲೋಕಾಯುಕ್ತ ಪೊಲೀಸರ (Lokayukta raid) ಬಂಧನದಲ್ಲಿದ್ದಾನೆ. ರಾಜ್ಯದ 14 ಜಿಲ್ಲೆಗಳಲ್ಲಿ ಕಳೆದ ಬುಧವಾರ ನಡೆದ ದಾಳಿಯ ಸಂದರ್ಭದಲ್ಲಿ ಉಳಿದ 14 ಮಂದಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ ನಗದು, ನಗದು, ಆಸ್ತಿಪಾಸ್ತಿಯ ತೂಕ ಒಂದಾದರೆ ಅದನ್ನೆಲ್ಲ ನಿವಾಳಿಸಿ ತೆಗೆಯುವಂತೆ ಅಪಾರ ಸಂಪತ್ತನ್ನು ಬಾಚಿಕೊಂಡಿದ್ದು ಅಜಿತ್‌ ರೈ.

ಅಜಿತ್‌ ರೈಯ ಅಕ್ರಮಗಳ ಜಾಲ ಜಾಲಾಡಲು ಲೋಕಾಯುಕ್ತ ಪೊಲೀಸರು ಬೆಂಗಳೂರು ಮತ್ತು ಪುತ್ತೂರಿನ ಸೊರಕೆಯಲ್ಲಿರುವ ಒಟ್ಟು 10 ಮನೆಗಳನ್ನು ಜಾಲಾಡಿದ್ದರು. ಅವನು ಸ್ವತಃ ಹೊಂದಿರುವ ಮತ್ತು ಬೇನಾಮಿಯಾಗಿ ಹೊಂದಿರುವ ಐಷಾರಾಮಿ ಮನೆಗಳು, ಐಷಾರಾಮಿ ಕಾರುಗಳು, ವಸ್ತುಗಳನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದರು. ಅವನು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಭಾಗದಲ್ಲಿ ಹೊಂದಿರುವ ಭೂಮಿಯ ಒಟ್ಟು ವಿಸ್ತೀರ್ಣವೇ 136 ಎಕರೆ ಎಂದರೆ ಈ ಮನುಷ್ಯ ಅದು ಹೇಗೆ ಭೂಮಿಯನ್ನು ನುಂಗಿರಬಹುದು ಎಂದು ಕಲ್ಪನೆ ಮಾಡಿಕೊಳ್ಳಬಹುದು. ಲೋಕಾಯುಕ್ತ ಪೊಲೀಸರು ಇದರ ಮೌಲ್ಯವನ್ನು 300 ಕೋಟಿ ಎಂದು ಅಂದಾಜಿಸಿದ್ದಾರಂತೆ. ಆದರೆ, ಈ ಭಾಗದಲ್ಲಿ ದಿನದಿಂದ ದಿನಕ್ಕೆ ಭೂಮಿ ಚಿನ್ನವಾಗುತ್ತಿದ್ದು, ಕನಿಷ್ಠವೆಂದರೂ ಒಂದು ಎಕರೆ ಜಾಗ 10 ಕೋಟಿ ಬಾಳುವುದು ಖಚಿತ. ಅಷ್ಟಕ್ಕೇ ಲೆಕ್ಕ ಹಾಕಿದರೂ ಅವನ ಕೈಲಿರುವ ಬೇನಾಮಿ ಭೂಮಿಯ ಮೌಲ್ಯ 1360 ಕೋಟಿ ರೂ. ದಾಟಿ ಬಿಡುತ್ತದೆ.

ಇದು ಒಂದು ಭೂಮಿಯ ಕಥೆ, ಉಳಿದಂತೆ ಮನೆ, ವಾಹನಗಳು, ಬಂಗಲೆಗಳ ಲೆಕ್ಕ ನೋಡಿದರೆ ತಲೆ ತಿರುಗೋದು ಗ್ಯಾರಂಟಿ. ಇಷ್ಟೆಲ್ಲ ಅಕ್ರಮಗಳನ್ನು ಮಾಡಿರುವ ಈತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆದರೆ, ಆತ ಮಾತ್ರ ಸ್ವಲ್ಪವೂ ವಿಚಲಿತನಾಗಿಲ್ಲ. ಕೋರ್ಟ್‌ಗೆ ಹಾಜರುಪಡಿಸಿದಾಗಲೂ ಏನೂ ಆಗಿಲ್ಲ ಎಂಬಂತೆ ನಗುತ್ತಿದ್ದನಂತೆ!

30 ಗಂಟೆ ಶೋಧ, ಇನ್ನೂ ಮುಗಿದಿಲ್ಲ; ಸ್ನೇಹಿತರ ಮೇಲೂ ಕಣ್ಣು

ಜೂನ್‌ 28ರಂದು ಮುಂಜಾನೆ ಸಹಕಾರ ನಗರ, ಕೆ.ಆರ್‌. ಪುರ, ಚಂದ್ರಾ ಲೇಔಟ್‌ ಸೇರಿದಂತೆ ಒಟ್ಟು 12 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಸುಮಾರು 30 ಗಂಟೆಗಳ ಕಾಲ ನಿರಂತರ ಶೋಧ ನಡೆಸಿದರೂ ಆತನ ಅಕ್ರಮದ ಜಾಲವನ್ನು ಪೂರ್ಣವಾಗಿ ಬಯಲಿಗೆ ಎಳೆಯಲು ಸಾಧ್ಯವಾಗಿಲ್ಲ.

ಅವನ ಮನೆಗಳಿಂದ 40 ಲಕ್ಷ ರೂಪಾಯಿ ನಗದು, ಕೋಟ್ಯಂತರ ರೂ. ಮೌಲ್ಯದ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರು ಖರೀದಿಸಿದ ರಶೀದಿಗಳು, ದೇಶ-ವಿದೇಶಿ ಬ್ರ್ಯಾಂಡ್ ಮದ್ಯಗಳು ಪತ್ತೆಯಾಗಿದ್ದವು.

ಈ ನಡುವೆ ಲೋಕಾಯುಕ್ತ ಪೊಲೀಸರು ಆತನ ನಾಲ್ವರು ಸ್ನೇಹಿತರಿಗೂ ನೋಟಿಸ್‌ ಜಾರಿಗೊಳಿಸಿ ತನಿಖೆಗೆ ಬರುವಂತೆ ಸೂಚಿಸಿದ್ದಾರೆ. ಅಜಿತ್ ಸಹೋದರ ಆಶಿಕ್ ರೈ, ಸ್ನೇಹಿತ ಗೌರವ್, ಹರ್ಷವರ್ಧನ್ ಮತ್ತು ಇನ್ನೊಬ್ಬನಿಗೆ ನೋಟಿಸ್‌ ನೀಡಲಾಗಿದೆ. ಇನ್ನೊಬ್ಬ ಸಿ. ಕೃಷ್ಣಪ್ಪ ಎಂಬಾತನಿಗೂ ನೋಟಿಸ್‌ ನೀಡಲಾಗಿದೆ. ಇವರೆಲ್ಲರೂ ಬೇನಾಮಿಯಾಗಿ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದರು ಎಂದು ತನಿಖೆ ವೇಳೆ ಬಯಲಾಗಿದೆ.

ಫಾರ್ಚೂನರ್, ಲ್ಯಾಂಡ್ ಕ್ರೂಸರ್, ಥಾರ್ ಸೇರಿದಂತೆ ಇತರೆ ವಾಹನಗಳು ಬಹುತೇಕ ಹರ್ಷವರ್ಧನ್ ಅವರ ಹೆಸರಿನಲ್ಲಿ ಇರುವುದು ಕಂಡುಬಂದಿದೆ.

ಅಜಿತ್‌ ರೈ ಹೊಂದಿದ್ದ ಐಷಾರಾಮಿ ಕಾರುಗಳಲ್ಲಿ ಕೆಲವಷ್ಟೇ!

ವಾಹನಗಳಿಗೆಲ್ಲ ಒಂದೇ ನಂಬರ್‌, ಸ್ವಂತ ಲೋಗೊ ಹೊಂದಿದ್ದ ಅಜಿತ್‌ ರೈ

ಅಜಿತ್‌ ರೈ ಅದೆಂಥ ಕ್ರೇಜಿ ಮ್ಯಾನ್‌ ಅಂದರೆ ಅವನು ತನ್ನೆಲ್ಲ ವಾಹನಗಳಿಗೆ ಒಂದೇ ನಂಬರ್‌ ಇಟ್ಟುಕೊಂಡಿದ್ದ. ಜತೆಗೆ ಅವನದ್ದೇ ಆದ ಸ್ವಂತ ಲೋಗೋ ಹೊಂದಿದ್ದ.

ನೀವು ಅವನ ಯಾವುದೇ ಕಾರನ್ನು ನೋಡಿ, ಬೈಕ್‌ನ್ನು ನೋಡಿ.. ಅದರ ನಂಬರ್‌ ಎಂಡ್‌ ಆಗುವುದು 1368 ಎಂಬ ನಂಬರ್‌ನಿಂದ. ಈ ರೀತಿ ಒಂದೇ ಫ್ಯಾನ್ಸಿ ನಂಬರ್‌ ಪಡೆಯಲು ಆತ ಲಕ್ಷಾಂತರ ರೂ. ಸುರಿಯುತ್ತಿದ್ದನಂತೆ.

ಈ ನಡುವೆ 1368 ನಂಬರಿನ ಸೀಕ್ರೆಟ್‌ ಬಗ್ಗೆಯೂ ಲೋಕಾ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಯಾಕೆಂದರೆ, ಇದು ಕೇವಲ ವಾಹನದ ನಂಬರ್‌ ಅಷ್ಟೇ ಅಲ್ಲ. ಅವನ ಎಟಿಎಂ ಪಿನ್‌ ಕೂಡಾ 1368! ಸಾಲದ್ದಕ್ಕೆ ಮೊಬೈಲ್‌ ಮೊಬೈಲ್ ಪಾಸ್ ವರ್ಡ್ ಸಹ 1368 ಅಂತೆ!

ಸ್ವಂತ ಲೋಗೋ ASR

ಅಜಿತ್‌ ರೈ ವಾಹನಗಳಲ್ಲಿ ಒಂದು ಲೋಗೋವನ್ನು ನಾವು ಕಾಣಬಹುದು. ASR ಎನ್ನುವುದು ಆತನ ಆಫಿಶೀಯಲ್‌ ಲೋಗೋ ಅಂತೆ. ಆಡಿ, ಬೆನ್ಜ್ ಕಾರುಗಳ ಲೋಗೋ ಮಾದರಿಯಲ್ಲಿ ಡಿಸೈನ್ ಮಾಡಿಸಿರುವ ಈ ASR ಲೋಗೋದ ಹಿಂದಿರುವ ರಹಸ್ಯವನ್ನೂ ಹುಡುಕಲಾಗುತ್ತಿದೆ. ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ ಪ್ರಕಾರ ಆತ ತನ್ನ ಹೆಂಡತಿ ಸೌಮ್ಯ ಅವರ ಹೆಸರನ್ನು ಮಧ್ಯಕ್ಕೆ ಸೇರಿಸಿ ಈ ಲೋಗೋ ಕ್ರಿಯೇಟ್‌ ಮಾಡಿದ್ದಾನೆ ಎನ್ನುವುದು.

ಅಜಿತ್‌ ರೈ ಮನೆಯಲ್ಲಿ ಮೂರು ರೇಡೋ ವಾಚ್‌ ಪತ್ತೆ

ಅಜಿತ್‌ ರೈಗೆ ಇಲ್ಲದ ಕ್ರೇಜ್‌ಗಳಿಲ್ಲ. ಕಾರು ಮಾತ್ರವಲ್ಲ, ಅವನ ಬಳಿ ಮೂರು ರೇಡೋ ವಾಚ್‌ಗಳಿವೆಯಂತೆ. ಮೂರು ವಾಚ್‌ಗಳ ಮೌಲ್ಯವೇ ಐದು ಲಕ್ಷ ಮೀರುತ್ತದೆ. ಲೋಕಾಯುಕ್ತ ದಾಳಿ ವೇಳೆ ಸಿಕ್ಕಿದ ಅಷ್ಟೂ ವಾಚ್‌ಗಳ ಮೌಲ್ಯ ಬರೋಬ್ಬರಿ ಹತ್ತು ಲಕ್ಷ ರೂ.!

Exit mobile version