Site icon Vistara News

Corruption Case: ಕೆಎಸ್‌ಡಿಎಲ್ ಟೆಂಡರ್‌ಗಾಗಿ ಲಂಚ; ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಕೇಸ್‌ ರದ್ದು

Madal Virupakshappa

ಬೆಂಗಳೂರು: ಕೆಎಸ್‌ಡಿಎಲ್ ಟೆಂಡರ್‌ಗಾಗಿ ಲಂಚ ಪಡೆದ ಪ್ರಕರಣದಲ್ಲಿ (Corruption Case) ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ನಲ್ಲಿನ ಪ್ರಕ್ರಿಯೆ ಪಾಲಿಸದ ಕಾರಣ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದ್ದು, ಇದರಿಂದ ಮಾಜಿ ಶಾಸಕ ನಿರಾಳರಾಗುವಂತಾಗಿದೆ.

ಪ್ರಕರಣದಲ್ಲಿ ಮಾಡಾಳ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅನ್ವಯ ಸ್ಪೀಕರ್ ಅನುಮತಿ ಪಡೆಯದೇ ಲೋಕಾಯುಕ್ತ ಪೊಲೀಸರಿಂದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತನಿಖೆ ನಡೆಸಲಾಗಿದೆ. ಹೀಗಾಗಿ ಪ್ರಕರಣ ಕೈಬಿಡಬೇಕು ಎಂದು ವಾದಿಸಿದ್ದರು. ಅವರ ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿ ಕೇಸ್‌ ರದ್ದುಮಾಡಿದೆ.

ಕೆಎಸ್‌ಡಿಎಲ್ ಲಂಚ ಪ್ರಕರಣದಲ್ಲಿ ಕೇವಲ ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮಾತ್ರ ರದ್ದುಗೊಳಿಸಲಾಗಿದೆ. ಆದರೆ, ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್‌ ಸೇರಿ ಇತರ ಆರೋಪಿಗಳ ವಿರುದ್ಧದ ಲೋಕಾಯುಕ್ತ ಪ್ರಕರಣದಲ್ಲಿ ವಿಚಾರಣೆ ಮುಂದುವರಿಯಲಿದೆ.

ಏನಿದು ಪ್ರಕರಣ?

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (KSDL) ರಾಸಾಯನಿಕ ತೈಲ ಪೂರೈಕೆ ಮಾಡುವುದಕ್ಕೆ ಬಿಲ್‌ ಪಾವತಿಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದ ಬಿಜೆಪಿ ಮಾಜಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಪುತ್ರ, ಸರ್ಕಾರಿ ಅಧಿಕಾರಿಯಾದ ಪ್ರಶಾಂತ್‌ ಕುಮಾರ್‌ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವುದು ಮೂಲ ಆರೋಪವಾಗಿದೆ.

ಇದನ್ನೂ ಓದಿ | Self Harming: ರಿಪ್ಪನ್‌ಪೇಟೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಈ ಸಂದರ್ಭದಲ್ಲಿ ಲಂಚ ನೀಡಲು ತಂದಿದ್ದ ಹಣವು ಲೋಕಾಯುಕ್ತ ಪೊಲೀಸರ ಶೋಧನೆಯ ವೇಳೆ ನಿಕೋಲಸ್‌, ಗಂಗಾಧರ್ ಅವರ ಬಳಿ ದೊರೆತಿತ್ತು. ವಾಣಿಜ್ಯ ಕಂಪೆನಿಯಾದ ಆರೋಮಾಸ್‌ ಸಂಸ್ಥೆಯ ಉದ್ಯೋಗಿಗಳಾದ ಈ ಇಬ್ಬರು ತಲಾ 45 ಲಕ್ಷ ರೂಪಾಯಿ ಮೊತ್ತದ ಎರಡು ಬ್ಯಾಗ್‌ಗಳನ್ನು ಮಾಡಾಳ್‌ ಪುತ್ರ ಪ್ರಶಾಂತ್‌ ಅವರ ವೈಯಕ್ತಿಕ ಕಚೇರಿಯಲ್ಲಿ ಇಟ್ಟುಕೊಂಡಿದ್ದನ್ನು ಒಪ್ಪಿಕೊಂಡಿದ್ದರು. ಈ ಪ್ರಕರಣದಲ್ಲಿ ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಿ ಬಂಧಿಸಲಾಗಿತ್ತು.

Exit mobile version