ಬೆಂಗಳೂರು: ಭ್ರಷ್ಟಾಚಾರ ಪ್ರಕರಣ (Corruption case) ಸಂಬಂಧ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠವು ಜಾಮೀನು ನಿರಾಕರಣೆ ಮಾಡಿರುವ ಬೆನ್ನಲ್ಲೇ ತುಮಕೂರಿನ ಕ್ಯಾತ್ಸಂದ್ರ ಟೋಲ್ ಬಳಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಅವರು ಕಾರಿನ ಮೂಲಕ ಬೆಂಗಳೂರಿಗೆ ಬರುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಕ್ಯಾತ್ಸಂದ್ರ ಟೋಲ್ ಬಳಿ ಬಂಧಿಸಿದ್ದಾರೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಶಾಸಕ ವಿರೂಪಾಕ್ಷಪ್ಪ ಮಾಡಾಳು ಅವರ ಪುತ್ರ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯಕ್ತರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿದ್ದರು. ಅಲ್ಲದೇ, ಅವರ ಮನೆಯನ್ನು ಶೋಧ ಮಾಡಿದಾಗ ದಾಖಲೆ ಇಲ್ಲದ 8 ಕೋಟಿ ರೂಪಾಯಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಮಾಡಾಳು ಅವರು ಮಾರ್ಚ್ 7ರಂದು ಕರ್ನಾಟಕ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು.
ವಿರೂಪಾಕ್ಷಪ್ಪ ಅವರು ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಡಿಎಸ್ಎಲ್) ಅಧ್ಯಕ್ಷರಾಗಿದ್ದರು. ಹೀಗಾಗಿ ಟೆಂಡರ್‌ಗೆ ಸಂಬಂಧಿಸಿದಂತೆ ಅವರ ಪುತ್ರ ಲಂಚ ಸ್ವೀಕರಿಸುತ್ತಿದ್ದರು ಎಂದ ಆರೋಪ ಅವರ ಮೇಲಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಮಾಡಾಳು ಅವರು ಕೆಡಿಎಸ್‌ಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಮಾಡಾಳು ಅವರು ಕರ್ನಾಟಕ ಹೈಕೋರ್ಟ್‌ನಿಂದ ಬಂಧನ ಪೂರ್ವ ಜಾಮೀನು ಪಡೆದುಕೊಂಡಿದ್ದರು.
ಸೋಮವಾರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿ, ಶಂಕುಸ್ಥಾಪನೆಗೆ ಚಾಲನೆ ನೀಡಿದ್ದ ವಿರೂಪಾಕ್ಷಪ್ಪ, ಲೋಕಾಯುಕ್ತ ಪ್ರಕರಣದಲ್ಲಿ ಮಧ್ಯಂತರ ಜಾಮೀನು ರದ್ದಾಗುತ್ತಲೇ ಊರಿನಿಂದ ಹೊರನಡೆದಿದ್ದರು. ಚನ್ನಗಿರಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತಿದ್ದ ಶಾಸಕ, ಇದ್ದಕ್ಕಿದ್ದಂತೆಯೇ ಅಹವಾಲು ಸ್ವೀಕಾರ ರದ್ದುಪಡಿಸಿ ತೆರಳಿದ್ದರು.
ಮಧ್ಯಂತರ ಜಾಮೀನನ್ನು ಹೈಕೋರ್ಟ್ ರದ್ದುಪಡಿಸುತ್ತಲೆ ಲೋಕಾಯುಕ್ತ ಪೊಲೀಸರು ಕ್ರಿಯಾಶೀಲರಾಗಿದ್ದರು. ಮಾಡಾಳ್ ವಿರೂಪಾಕ್ಷಪ್ಪ ಮನೆಗೆ ದಾವಣಗೆರೆಯ ಲೋಕಾಯುಕ್ತ ಡಿವೈಎಸ್ಪಿ ರಾಮಕೃಷ್ಣ ಹಾಗೂ ಪ್ರಭು ಭೇಟಿ ನೀಡಿದ್ದರು. ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ತೆರಳುವುದಾಗಿ ಹೇಳಿದ್ದ ಮಾಡಾಳ್ ವಿರೂಪಾಕ್ಷಪ್ಪ ಅಷ್ಟರೊಳಗೆ ಮನೆಯಿಂದ ಹೊರನಡೆದಿದ್ದರು. ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ವಿರೂಪಾಕ್ಷಪ್ಪ ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Karanataka Elections : ಮಾಡಾಳ್ ಮುಜುಗರ; ಅಮಿತ್ ಶಾ ಕಾರ್ಯಕ್ರಮ ಹೊನ್ನಾಳಿಯಿಂದ ಚಿತ್ರದುರ್ಗಕ್ಕೆ ಶಿಫ್ಟ್ ಮಾಡಿದ ಬಿಜೆಪಿ!