Site icon Vistara News

Corruption Case: ಮಾಡಾಳ್‌ ಪುತ್ರನಿಗೆ ಲಂಚ ಕೊಟ್ಟವರೂ ಆರೋಪಿಗಳಲ್ವೇ?: ಹೈಕೋರ್ಟ್‌ ಪ್ರಶ್ನೆ

Karnataka High Court dismissed complaint against Speaker UT Khader

ಬೆಂಗಳೂರು: ನೀವು ಲಂಚ ಪಡೆದವರನ್ನು (Corruption case) ವಿಚಾರಣೆಗೆ ಒಳಪಡಿಸುತ್ತೀರಿ ಸರಿ. ಆದರೆ, ಲಂಚ ನೀಡಿದವರನ್ನು ಕೂಡಾ ಅಪರಾಧಿಗಳೆಂದೇ ಪರಿಗಣಿಸಬೇಕಲ್ಲವೇ? ಅವರನ್ನು ಪ್ರಕರಣದಿಂದ ಕೈಬಿಟ್ಟರೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ (Anti Corruption act) ತಿದ್ದುಪಡಿ ಮಾಡಿ ಸೆಕ್ಷನ್‌ 8, 9 ಮತ್ತು 10 ಸೇರ್ಪಡೆಯು ನಿರರ್ಥಕವಾಗಲಿದೆ ಎಂದು ಕರ್ನಾಟಕ ಹೈಕೋರ್ಟ್‌ (Karnataka High court) ಅಭಿಪ್ರಾಯಪಟ್ಟಿದೆ.

“ಲಂಚ ಪಡೆಯುವವರನ್ನು ವಿಚಾರಣೆಗೆ ಒಳಪಡಿಸುವಂತೆ ನೀಡುವವರನ್ನೂ ವಿಚಾರಣೆಗೆ ಒಳಪಡುವಂತೆ ಮಾಡುವ ಮೂಲಕ ಭ್ರಷ್ಟಾಚಾರದ ಹಾವಳಿಗೆ ಕಡಿವಾಣ ಹಾಕಬೇಕಿದೆ” ಎಂದಿರುವ ಕರ್ನಾಟಕ ಹೈಕೋರ್ಟ್‌, ಬಿಜೆಪಿಯ ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ (Madal Virupakshappa) ಪುತ್ರನಿಗೆ ಲಂಚ ನೀಡಿದ ಆರೋಪಕ್ಕೆ ತುತ್ತಾಗಿರುವ ಐವರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಡಿಸಿದೆ.

ಪ್ರಕರಣದಲ್ಲಿ ಐದನೇ ಆರೋಪಿಗಳಾಗಿರುವ ಬೆಂಗಳೂರಿನ ಕರ್ನಾಟಕ ಆರೋಮಾಸ್‌ ಕಂಪೆನಿಯ ಮಾಲೀಕರಾದ ಕೈಲಾಶ್‌ ಎಸ್.‌ ರಾಜ್‌, ವಿನಯ್‌ ಎಸ್.‌ ರಾಜ್‌ ಮತ್ತು ಚೇತನ್‌ ಮರ್ಲೇಚಾ ಹಾಗೂ ಎರಡನೇ ಆರೋಪಿ ಅಲ್ಬರ್ಟ್‌ ನಿಕೋಲಾಸ್‌ ಮತ್ತು ಮೂರನೇ ಆರೋಪಿ ಗಂಗಾಧರ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಲಂಚ ಪಡೆಯುವವರು ಮತ್ತು ಸ್ವೀಕರಿಸುವವರನ್ನು ಪ್ರಾಸಿಕ್ಯೂಷನ್‌ ಒಂದೇ ನೆಲೆಯಲ್ಲಿ ನಿಲ್ಲುವಂತೆ ಮಾಡುವ ರೀತಿಯಲ್ಲಿ 2018ರ ಜುಲೈ 26ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ” ಎಂದಿರುವ ಕೋರ್ಟ್‌, ವಕೀಲರು ವಿವರಿಸುವ ಕಥೆಗಳು ಹೊಟ್ಟೆಪಾಡಿಗೆ ಬರೆದ ಚಿತ್ರಕಥೆಯಂತಿವೆ ಎಂದಿದೆ.

“ಮೇಲ್ನೋಟಕ್ಕೆ ಅರ್ಜಿದಾರರ ಪರ ಹಿರಿಯ ವಕೀಲರು ವಿವರಿಸಿರುವ ಕತೆಯನ್ನು ಒಪ್ಪಿಕೊಂಡರೆ ತನಿಖೆ ನಡೆಸದೇ ಹೊಟ್ಟೆಪಾಡಿಗೆ ಬರೆದ ಚಿತ್ರಕತೆಯನ್ನು ಒಪ್ಪಿದಂತಾಗಲಿದೆ. ಕತೆಯೊಳಗೆ ಕತೆ ಸೇರಿಕೊಂಡಿರುವುದರಿಂದ ಒಂದು ರೀತಿಯಲ್ಲಿ ರೋಚಕವಾಗಿದ್ದು, ಇದೊಂದು ಕಥಾ ಸಂಗಮವಾಗಿದೆ. ಇಲ್ಲಿ ಅರ್ಜಿದಾರರ ಕತೆ ಆಧರಿಸಿ ಅವರನ್ನು ಪ್ರಕರಣದಿಂದ ಕೈಬಿಟ್ಟರೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ಮಾಡಿ ಸೆಕ್ಷನ್‌ 8, 9 ಮತ್ತು 10 ಸೇರ್ಪಡೆಯು ನಿರರ್ಥಕವಾಗಲಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

“ದೇಶದ ಸಾರ್ವಜನಿಕ ಬದುಕಿನ ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ವ್ಯಾಪಿಸಿದ್ದು, ಎಲ್ಲೆಡೆಯಲ್ಲೂ ಸಮಸ್ಯೆ ಉಂಟಾಗಿದೆ. ಭ್ರಷ್ಟಾಚಾರ ಸಾಂವಿಧಾನಿಕ ಆಡಳಿತಕ್ಕೆ ಮಾರಕವಾಗಿ ಪರಿಣಮಿಸಿದೆ. ಭ್ರಷ್ಟಾಚಾರ ಹಲವು ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದನ್ನು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಅವರು 45 ಲಕ್ಷ ರೂ. ಇಟ್ಟುಕೊಂಡು ಯಾಕೆ ಕುಳಿತಿದ್ದರು?

“ಮಾಜಿ ಶಾಸಕ ಮಾಡಾಳ್‌ ಪುತ್ರ, ಸರ್ಕಾರಿ ಅಧಿಕಾರಿಯಾದ ಎಂ ವಿ ಪ್ರಶಾಂತ್‌ ಕುಮಾರ್‌ ಅವರ ಕಚೇರಿಯಲ್ಲಿ ನಿಕೋಲಸ್‌ ಮತ್ತು ಗಂಗಾಧರ್‌ ಅವರು ತಲಾ 45 ಲಕ್ಷ ರೂಪಾಯಿ ಮೌಲ್ಯದ ಬ್ಯಾಗ್‌ಗಳನ್ನು ಇಟ್ಟುಕೊಂಡು ಏಕೆ ಕುಳಿತಿದ್ದರು? ಇದು ತನಿಖೆಯಿಂದ ಹೊರಬರಬೇಕಿದೆ. ಅವರನ್ನು ವಶಕ್ಕೆ ಪಡೆದು ಪ್ರಶ್ನಿಸಿದ ಸಂದರ್ಭದಲ್ಲಿ ತಾವು ಆರೋಮಾಸ್‌ ಕಂಪೆನಿಯ ಉದ್ಯೋಗಿಗಳಾಗಿದ್ದು, ಪ್ರಶಾಂತ್‌ ಅವರನ್ನು ಭೇಟಿ ಮಾಡಬೇಕು ಎಂದು ಹೇಳಿದ್ದಾರೆ. ಈ ನಡುವೆ ದೀಪಕ್‌ ಜಾಧವ್‌ ಅವರು ಹಣ ತಮಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದಾರೆ. ಇದು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ. ದೀಪಕ್‌ ಅವರು ಹಣ ತಮಗೆ ಸೇರಿದೆ ಎಂದ ಮಾತ್ರಕ್ಕೆ ಇತರೇ ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಲಾಗದು. ಇದೆಲ್ಲವೂ ಸಾಕ್ಷಿಯಿಂದ ಸಾಬೀತಾಗಬೇಕಾದ ಪ್ರಕರಣ” ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಏನಿದು ವಿರೂಪಾಕ್ಷಪ್ಪ ಮಾಡಾಳ್‌ ಪ್ರಕರಣ?

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (KSDL) ರಾಸಾಯನಿಕ ತೈಲ ಪೂರೈಕೆ ಮಾಡುವುದಕ್ಕೆ ಬಿಲ್‌ ಪಾವತಿಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದ ಬಿಜೆಪಿ ಮಾಜಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಪುತ್ರ, ಸರ್ಕಾರಿ ಅಧಿಕಾರಿಯಾದ ಪ್ರಶಾಂತ್‌ ಕುಮಾರ್‌ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವುದು ಮೂಲ ಆರೋಪವಾಗಿದೆ.

ಈ ಸಂದರ್ಭದಲ್ಲಿ ಲಂಚ ನೀಡಲು ತಂದಿದ್ದ ಹಣವು ಲೋಕಾಯುಕ್ತ ಪೊಲೀಸರ ಶೋಧನೆಯ ವೇಳೆ ನಿಕೋಲಸ್‌, ಗಂಗಾಧರ್ ಅವರ ಬಳಿ ದೊರೆತಿತ್ತು. ವಾಣಿಜ್ಯ ಕಂಪೆನಿಯಾದ ಆರೋಮಾಸ್‌ ಸಂಸ್ಥೆಯ ಉದ್ಯೋಗಿಗಳಾದ ಈ ಇಬ್ಬರು ತಲಾ 45 ಲಕ್ಷ ರೂಪಾಯಿ ಮೊತ್ತದ ಎರಡು ಬ್ಯಾಗ್‌ಗಳನ್ನು ಮಾಡಾಳ್‌ ಪುತ್ರ ಪ್ರಶಾಂತ್‌ ಅವರ ವೈಯಕ್ತಿಕ ಕಚೇರಿಯಲ್ಲಿ ಇಟ್ಟುಕೊಂಡಿದ್ದನ್ನು ಒಪ್ಪಿಕೊಂಡಿದ್ದರು. ಈ ಸಂಬಂಧ ಕಂಪೆನಿಯ ಮಾಲೀಕರು ಮತ್ತು ಉದ್ಯೋಗಿಗಳ ವಿರುದ್ಧ ದಾಖಲಾಗಿರುವ ಪ್ರತ್ಯೇಕ ಎರಡು ಪ್ರಕರಣಗಳನ್ನು ವಜಾ ಮಾಡುವಂತೆ ಅರ್ಜಿದಾರರು ಕೋರಿದ್ದರು. ಆದರೆ, ಹೈಕೋರ್ಟ್‌ ಇದಕ್ಕೆ ನಿರಾಕರಿಸಿದೆ. ಲಂಚ ಪಡೆದವರ ಜತೆಗೆ ಲಂಚ ನೀಡಿದವರೂ ಅಪರಾಧಿಗಳೇ ಎನ್ನುವುದು ಅದರ ವಾದ.

Exit mobile version