ಬೆಂಗಳೂರು: ರಾಜ್ಯ ಸರ್ಕಾರ ಇದುವರೆಗೆ ಒಂದು ಸಾವಿರ ಕೋಟಿ ರೂ. ಲಂಚ ಸಂಗ್ರಹ (1000 Crore Graft money collected) ಮಾಡಿದೆ ಎಂದು ಬಿಜೆಪಿ ಗಂಭೀರ ಆರೋಪ (Corruption Charge) ಮಾಡಿದೆ. ರಾಜ್ಯದಲ್ಲಿ ಶಿವಾನಂದ ಪಾಟೀಲ್, ಡಿ.ಕೆ. ಶಿವಕುಮಾರ್ (DK Shivakumar), ಬೈರತಿ ಸುರೇಶ್, ಯತೀಂದ್ರ ಸಿದ್ದರಾಮಯ್ಯ, ಇತರ ಸಚಿವರು ಹಣ ಸಂಗ್ರಹಿಸಿದ್ದಾರೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹಣದ ವಹಿವಾಟು ನಡೆಯುತ್ತಿದೆ. ಇದೆಲ್ಲದರ ಕುರಿತು ಸಿಬಿಐ- ಇಡಿ ತನಿಖೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ (N Ravikumar) ಅವರು ಆಗ್ರಹಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕರ್ನಾಟಕದಲ್ಲಿ ನಡೆದ ಐಟಿ ದಾಳಿ ಸಂದರ್ಭದಲ್ಲಿ ಸಿಕ್ಕಿದ 94 ಕೋಟಿ ನಗದು ಮತ್ತು 8 ಕೋಟಿ ಮೌಲ್ಯದ ಚಿನ್ನ ಸಿಕ್ಕಿದ್ದು, ಒಟ್ಟಾರೆಯಾಗಿ 102 ಕೋಟಿ ರೂ. ಸ್ವತ್ತನ್ನು ವಶ ಪಡಿಸಿಕೊಂಡಿದ್ದಾರೆ. 1 ಸಾವಿರ ಕೋಟಿ ರೂ. ಸಂಗ್ರಹಿಸಿದ ಮಾಹಿತಿ ಇದೆ ಎಂದು ತಿಳಿಸಿದರು.
ಎಲ್ಲದಕ್ಕೂ ಗುರಿ, ಎಲ್ಲರಿಗೂ ಕಲೆಕ್ಷನ್ ಟಾರ್ಗೆಟ್
ʻʻಅಬಕಾರಿ, ಕೈಗಾರಿಕಾ ವಲಯ, ಎಲ್ಲ ಪೊಲೀಸ್ ಠಾಣೆಗಳಿಗೆ ಕಲೆಕ್ಷನ್ ಗುರಿ ಕೊಟ್ಟಿದ್ದಾರೆ. ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಸೇರಿ ಅಧಿಕಾರಿಗಳ ವರ್ಗಾವಣೆ ವೇಳೆ ಹಣ ಪಡೆದಿದ್ದಾರೆ. ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿ ವರ್ಗಾವಣೆಗೆ ಕನಿಷ್ಠ 1ರಿಂದ 3 ಕೋಟಿ ಲಂಚ ಪಡೆದಿದ್ದಾರೆʼʼ ಎಂದು ರವಿ ಕುಮಾರ್ ಆರೋಪಿಸಿದರು.
ʻʻನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿ ಬೆಂಗಳೂರಿನಲ್ಲಿ ವಿಪರೀತ ಹಣ ಸಂಗ್ರಹಿಸಿದ್ದಾರೆ. ಅಂಥ ಸಾವಿರಾರು ಕೋಟಿ ಹಣವನ್ನು ಚುನಾವಣೆ ನಡೆಯುವ ಪಂಚ ರಾಜ್ಯಗಳಿಗೆ ಕಳುಹಿಸಿ ಕೊಡುತ್ತಿದ್ದಾರೆ. ಅದರಲ್ಲಿ ಎಷ್ಟು ಕಳುಹಿಸುತ್ತಾರೆ; ಎಷ್ಟು ಜೇಬಿಗೆ ಇಳಿಸುತ್ತಾರೆ ಎಂಬುದರ ತನಿಖೆಯೂ ಆಗಬೇಕಿದೆʼʼ ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು.
ʻʻನಿನ್ನೆ ಮತ್ತು ಮೊನ್ನೆ ಎಲ್ಲ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳಲ್ಲಿ ಸೇರಿ 117ಕ್ಕೂ ಹೆಚ್ಚು ಕಡೆ ಬಿಜೆಪಿ ಹೋರಾಟ ಮಾಡಿದೆ. ನಮ್ಮ ಹೋರಾಟ ಮುಂದುವರೆಯಲಿದೆ. ತನಿಖೆಗೆ ಕೊಡುವವರೆಗೆ ಹೋರಾಟ ಮುಂದುವರೆಯುತ್ತದೆʼʼ ಎಂದು ರವಿಕುಮಾರ್ ಪ್ರಕಟಿಸಿದರು.
ಕರ್ನಾಟಕವೆಂಬ ಕಾಂಗ್ರೆಸ್ ಎಟಿಎಂ
ʻʻರಾಜ್ಯದಲ್ಲಿ 251ಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಕುರಿತು ಒಂದು ಪೈಸೆ ಪರಿಹಾರ ನೀಡಿಲ್ಲ. ಬರ, ಬಿಸಿಲಿನಿಂದ ರಾಜ್ಯದ ಸಂಪೂರ್ಣ ಬೆಳೆ ನಾಶವಾಗಿದೆ; ಕರೆಂಟಿಲ್ಲದೆ ನೀರಾವರಿ ಬೆಳೆಯೂ ನಾಶವಾಗಿದೆ. ಇದರ ಬಗ್ಗೆಯೂ ಪರಿಹಾರ ಕೊಡುತ್ತಿಲ್ಲ. ಪ್ರತಿದಿನ ಕಾವೇರಿ ನೀರನ್ನು ಹರಿಸುತ್ತಿದ್ದಾರೆ. ಅದನ್ನು ನಿಲ್ಲಿಸಿಲ್ಲ; ಕರ್ನಾಟಕವು ಪೂರ್ತಿ ಎಟಿಎಂ ಆಗಿದೆʼʼ ಎಂದು ರವಿಕುಮಾರ್ ಅವರು ದೂರಿದರು. ತಮಿಳುನಾಡಿಗೆ ಕಾವೇರಿ ನೀರು ಮತ್ತು ಪಂಚರಾಜ್ಯಗಳಿಗೆ ಹಣದ ಹರಿವು ನಿರಂತರವಾಗಿ ಸಾಗಿದೆ ಎಂದು ಅವರು ಆಕ್ಷೇಪಿಸಿದರು.
ಶಿವಾನಂದ ಪಾಟೀಲ್ ಭಾಗವಹಿಸಿದ್ದ ಮದುವೆಯಲ್ಲಿ ಹಣದ ಮಳೆ!
ತೆಲಂಗಾಣದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಲಕ್ಷಾಂತರ ರೂಪಾಯಿ ಹಣದ ಮಳೆಯನ್ನು ಬರುವಂತೆ ಮಾಡಿದ್ದಾರೆ. ಸಂಗ್ರಹಿತ ಕೋಟಿಗಿಂತ ಹೆಚ್ಚು ಹಣ ಅವರು ಕುಳಿತಿದ್ದ ಕಡೆ ಕಾಲಿನಡಿ ರಾಶಿರಾಶಿ ರೀತಿ ಸಿಕ್ಕಿದೆ. ಇದರ ಕುರಿತು ಸಂಪೂರ್ಣ ತನಿಖೆ ಆಗಬೇಕು ಎಂದು ರವಿಕುಮಾರ್ ಅವರು ಒತ್ತಾಯಿಸಿದರು. ಈ ಕುರಿತು ಸಿಎಂ, ಡಿಸಿಎಂ ಸ್ಪಷ್ಟ ಹೇಳಿಕೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಸರಕಾರಕ್ಕೆ ನೈತಿಕತೆ ಇಲ್ಲ. ನೈತಿಕತೆ ಇದ್ದರೆ ಮೊದಲು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಹಣದ ಕುರಿತು ಹಾರಿಕೆ ಉತ್ತರವನ್ನು ಬಿಜೆಪಿ ಸಹಿಸುವುದಿಲ್ಲ ಎಂದೂ ಅವರು ತಿಳಿಸಿದರು.