Site icon Vistara News

ʻಹತ್ತಿʼದಷ್ಟೇ ಇಳಿದ ಬೆಲೆ, ಇಳುವರಿಯೂ ಖೋತಾ, ನಿರಾಸೆಯ ಮಡುವಲ್ಲಿ ಕಾಟನ್‌ ಕಿಂಗ್‌ ಕೃಷಿಕರು!

cotton

ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಹತ್ತಿ ಬೆಳೆ ಇಳುವರಿ ಇಳಿಕೆ ಮತ್ತು ಗುಣಮಟ್ಟದ ಹತ್ತಿ ಕೊರತೆಯಿಂದ ರಾಜ್ಯದಲ್ಲಿ ಹತ್ತಿ ಉತ್ಪಾದನೆ ಗಣನೀಯ ಇಳಿಕೆಯಾಗಿದೆ. ರಾಜ್ಯದಲ್ಲಿ ಪ್ರತಿವರ್ಷ 30 ರಿಂದ 35 ಲಕ್ಷ ಬೇಲ್ ಹತ್ತಿ ಉತ್ಪಾದನೆ ಈಗ 20 ರಿಂದ 25 ಲಕ್ಷ ಬೇಲ್‌ಗೆ ಇಳಿಕೆಯಾಗಿದೆ. ಇತಿಹಾಸದಲ್ಲಿಯೇ ಹತ್ತಿ ಬೆಲೆ ಕ್ವಿಂಟಾಲ್ ಒಂದಕ್ಕೆ 12 ಸಾವಿರಕ್ಕೆ ಏರಿಕೆಯಾಗಿತ್ತು. ಆದರೆ ಏಕಾಏಕಿ 8 ಸಾವಿರಕ್ಕೆ ಇಳಿಕೆಯಾಗಿದೆ.

ಕ್ವಿಂಟಾಲ್ ಹತ್ತಿಗೆ 8 ಸಾವಿರ ರೂ.ಗಳು ಕನಿಷ್ಠವೇನಲ್ಲ. ಆದರೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಕ್ವಿಂಟಾಲ್‌ಗೆ 3 ರಿಂದ 4 ಸಾವಿರ ರೂ. ಇಳಿಕೆಯಾಗಿರುವುದು ಉತ್ತಮ ಬೆಲೆಯ ಸಂತಸದಲ್ಲಿದ್ದ ರೈತರಲ್ಲಿ ಕೊಂಚ ನಿರಾಸೆಯಾಗಿದೆ. ಮುಂಗಾರು ಬಿತ್ತನೆಯ ಸಂದರ್ಭದಲ್ಲಿ ಕ್ವಿಂಟಾಲ್‌ಗೆ 11 ಸಾವಿರ ಇದ್ದ ಬೆಲೆ, ಈಗ ಬೆಳೆ ಕೈಗೆ ಬಂದಾಗ ಇಳಿಕೆಯಾಗಿರುವುದು ಲಾಭದ ನಿರೀಕ್ಷೆ ಕಡಿಮೆ ಮಾಡಿದೆ. ಇನ್ನೊಂದು ಕಡೆ ಇಳುವರಿಯು ಇಳಿಕೆಯಾಗಿರುವುದು ರೈತರನ್ನು ಆತಂಕಕ್ಕೆ ತಳ್ಳಿದೆ.

ನಾಲ್ಕು ವರ್ಷದಿಂದ ಇಳುವರಿ, ಉತ್ಪಾದನೆ ಇಳಿಕೆ
ಹತ್ತಿ ಬೆಳೆಗೆ ಕಳೆದ ಕೆಲ ವರ್ಷದಿಂದ ಕಾಣಿಸಿಕೊಂಡ ಪಿಂಕ್ ಬೋಲ್ ವಾರ್ಮ್ ಎನ್ನುವ ರೋಗ, ಬೀಜ ಮತ್ತು ಔಷಧಿಯ ಗುಣಮಟ್ಟದಲ್ಲಿ ಕೊರತೆಯಿಂದ ಪ್ರತಿ ಎಕರೆಗೆ ಸರಾಸರಿ 15 ಕ್ವಿಂಟಾಲ್ ಹತ್ತಿಯ ಇಳುವರಿ ಈಗ 5 ರಿಂದ 10 ಕ್ವಿಂಟಾಲ್‌ಗೆ ಇಳಿಕೆಯಾಗಿದೆ. ಕೇವಲ ಇಳುವರಿಯಲ್ಲಿ ಮಾತ್ರವಲ್ಲ, ಬೆಲೆಯಲ್ಲೂ ರೈತರಿಗೆ ಕೈಕೊಡುವ ಜೊತೆಗೆ ಗುಣಮಟ್ಟದ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಯು ರೈತರನ್ನು ಕಂಗಾಲು ಪಡುವಂತೆ ಮಾಡಿದೆ. ಹತ್ತಿ ಮಿಲ್‌ಗಳಲ್ಲಿ ಮೊದಲು ಎರಡು ಗುಣಮಟ್ಟದ ಹತ್ತಿಯನ್ನು ಬೇರ್ಪಡಿಸಲಾಗುತಿತ್ತು, ಇದೀಗ ನಾಲ್ಕೈದು ಗುಣಮಟ್ಟದ ಹತ್ತಿಯನ್ನು ಬೇರ್ಪಡಿಸುವ ಸ್ಥಿತಿ ನಿರ್ಮಾಣ ಆಗಿದೆ.

10 ಲಕ್ಷ ಬೇಲ್ ಹತ್ತಿ ಉತ್ಪಾದನೆ ಇಳಿಕೆ
ರಾಜ್ಯದಲ್ಲಿ ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ಹಾವೇರಿ, ಚಿತ್ರದುರ್ಗ, ಯಾದಗಿರಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಅತಿಹೆಚ್ಚು ಹತ್ತಿ ಬೆಳೆಯಾಗುತ್ತಿದೆ. ದೇಶದಲ್ಲಿ ಗುಜರಾತ್, ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿವರ್ಷ 8 ಲಕ್ಷ ಬೇಲ್‌ ಹತ್ತಿ ಉತ್ಪಾದನೆಯಾಗುತ್ತಿತ್ತು, ಆದರೆ ಈ ಪ್ರಮಾಣ 3 ಲಕ್ಷ ಬೆಲ್ಗೆ ಇಳಿಕೆಯಾಗಿದೆ. ರಾಜ್ಯದಲ್ಲಿ ಈ ಪ್ರಮಾಣ 35 ರಿಂದ 40 ಲಕ್ಷ ಬೇಲ್ ಉತ್ಪಾದನೆಯಿಂದ 25 ರಿಂದ 30 ಲಕ್ಷ ಬೇಲ್‌ಗೆ ಇಳಿಕೆಯಾಗಿದೆ.

ಬಾಂಗ್ಲಾದೇಶಕ್ಕೂ ರಫ್ತು
ರಾಜ್ಯದಲ್ಲಿ ಉತ್ಪಾದನೆ ಮಾಡುವ ಹತ್ತಿ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೆ ಕಳಿಸಲಾಗುತ್ತಿದೆ. ಇಲ್ಲಿಂದ ಕೋಲ್ಕೋತಾಗೆ ಹೋಗಿ ಅಲ್ಲಿಂದ ಬಾಂಗ್ಲಾದೇಶಕ್ಕೆ ರಫ್ತಾಗಲಿದೆ. ಬಾಂಗ್ಲಾದೇಶದಲ್ಲಿ ಕಾರ್ಮಿಕರ ಕೂಲಿಯ ದರವು ಕಡಿಮೆ ಇರುವುದರಿಂದ ಅಲ್ಲಿ ದಾರ ಉತ್ಪಾದನೆ ಮಾಡಿ, ಇತರ ದೇಶಗಳಿಗೆ ಕಳುಹಿಸಿಕೊಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ದಾರ ಉತ್ಪಾದನೆಗೆ ಹೆಚ್ಚಿನ ಅವಕಾಶವಿಲ್ಲದಿದ್ದರಿಂದ ನಮ್ಮ ಹತ್ತಿಯು ಬೇರೆ ರಾಜ್ಯಕ್ಕೆ ದಾರದ ಉತ್ಪಾದನೆಗೆ ಕಳುಹಿಸಲಾತ್ತದೆ.

ಬಳ್ಳಾರಿಯಲ್ಲಿ 40ಕ್ಕೂ ಹೆಚ್ಚು ಜಿನ್ನಿಂಗ್
ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಹತ್ತಿ ಜಿನ್ನಿಂಗ್ ಮಿಲ್‌ಗಳಿವೆ. ಜಿನ್ನಿಂಗ್ ಮಿಲ್‌ನಲ್ಲಿ ಹತ್ತಿಯ ಗುಣಮಟ್ಟದ ಆಧಾರದ ಮೇಲೆ ಹರಳೆ ಮತ್ತು ಹತ್ತಿಯ ಬೀಜವನ್ನು ಬೇರ್ಪಡಿಸಿ, ಬೇಲ್‌ಗಳನ್ನು ಸಿದ್ದಪಡಿಸಲಾಗುತ್ತಿದೆ. ನಂತರದಲ್ಲಿ ಹತ್ತಿ ಬೀಜ ಎಣ್ಣೆ ಉತ್ಪಾದನೆಗೆ ಕಳಿಸಿದರೆ, ಬೇಲ್‌ಗಳನ್ನು ದಾರ ತಯಾರಿಕೆಗೆ ಕಳಿಸಲಾಗುತ್ತದೆ.

ರೈತರು ಹೇಳುವುದೇನು?
ನಾವು ಹತ್ತಿ ಬಿತ್ತನೆ ಮಾಡುವುದಕ್ಕೆ ಮೊದಲು ಕ್ವಿಂಟಾಲ್‌ಗೆ 11 ಸಾವಿರ ರೂ.ಗಳಿತ್ತು, ಈಗ 8 ಸಾವಿರಗಳಿಗೆ ಇಳಿಕೆಯಾಗಿದೆ. ಈ ವರ್ಷದಲ್ಲಿಯೇ ಅತಿಹೆಚ್ಚು ಹತ್ತಿಯ ಬೆಲೆ ಏರಿಕೆಯಾಗಿತ್ತು. ಈಗ ಕೊಂಚ ಇಳಿಕೆಯಾಗಿದೆ. ಒಂದುಕಡೆ ಬೆಳೆ ಕಡಿಮೆ ಬಂದಿದೆ, ಈಗ ಬೆಲೆ ಇಳಿಕೆಯಾಗಿರುವುದು ನೋವು ತಂದಿದೆ ಎನ್ನುತ್ತಾರೆ ವಡ್ಡು ಗ್ರಾಮದ ರೈತರ ಡಿ. ಸ್ವಾಮಿ.
ಹತ್ತಿಯ ಉತ್ಪಾದನೆ ಕೊರತೆಯಿಂದಾಗಿ ಹತ್ತಿಯ ಬೆಲೆ ಇಡೀ ಇತಿಹಾಸದಲ್ಲಿಯೇ ಅತಿಹೆಚ್ಚಾಗಿತ್ತು. ಆದರೆ ಈಗ 8 ಸಾವಿರಕ್ಕೆ ಇಳಿಕೆಯಾಗಿದೆ. ಇಳುವರಿ ಮತ್ತು ಮಳೆ ಕೊರತೆಯಿಂದಾಗಿ ಹತ್ತಿ ನಿರೀಕ್ಷಿಸಿದಷ್ಟು ಬಂದಿಲ್ಲ, ಈ ವರ್ಷದಲ್ಲಿ ಹತ್ತಿಯ ಬೆಲೆ ಇನ್ನು ಕಡಿಮೆಯಾಗದು ಎಂದು ಹೇಳಲಾಗುತ್ತಿದೆ ಎನ್ನುತ್ತಾರೆ ಬಳ್ಳಾರಿಯ ಜಿನ್ನಿಂಗ್ ಮಿಲ್ ಮಾಲೀಕ ಕಮ್ ರೈತ ರಾಜೇಗೌಡ.

ಇದನ್ನೂ ಓದಿ | Rain News | ಉಕ್ಕಿ ಹರಿಯುತ್ತಿರುವ ಮಲಪ್ರಭಾ ಪ್ರಭಾವಕ್ಕೆ ಮುಳುಗಿದ ಸೇತುವೆ, ಭಾರಿ ಬೆಳೆ ಹಾನಿ

Exit mobile version