ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಸಂಘರ್ಷ (Congress Politics) ತಾರಕಕ್ಕೇರಿದೆ. ಸಚಿವರ ಮೇಲೆ ಶಾಸಕರ ಅಸಮಾಧಾನ ಬಗೆಹರಿದ ಬೆನ್ನಲ್ಲೇ ಈಗ ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ಹಾಗೂ ಸಂಸದ ಡಿ.ಕೆ. ಸುರೇಶ್ (MP DK Suresh) ವಿರುದ್ಧ ದಲಿತ ಸಚಿವರು ತಿರುಗಿಬಿದ್ದಿದ್ದಾರೆ. ವಿಧಾನ ಪರಿಷತ್ ನಾಮನಿರ್ದೇಶನದ ವಿಚಾರದಲ್ಲಿ ಫೈಟ್ ಆರಂಭವಾಗಿದೆ. ಈ ಸಂಬಂಧ ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ (KH Muniyappa), ಆರ್. ಬಿ. ತಿಮ್ಮಾಪುರ (RB Timmapura), ಎಚ್.ಸಿ. ಮಹದೇವಪ್ಪ (HC Mahadevappa) ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಅವರಿಗೆ ನೇರವಾಗಿ ಪತ್ರ ಬರೆದಿದ್ದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಡಿಕೆ ಬ್ರದರ್ಸ್ ವರ್ಸಸ್ ದಲಿತ ನಾಯಕರ ಜಟಾಪಟಿ ಎನ್ನುವಂತಾಗಿದೆ.
ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಮಾಜಿ ಆದಾಯ ತೆರಿಗೆ ಅಧಿಕಾರಿ ಸುಧಾಮ್ ದಾಸ್ ಹೆಸರು ಶಿಫಾರಸು ಆಗುತ್ತಿದ್ದಂತೆ ವಿಸ್ತಾರ ನ್ಯೂಸ್ ಈ ಬಗ್ಗೆ ವರದಿ ಮಾಡಿತ್ತು. ಆಗಷ್ಟೇ ಪಕ್ಷಕ್ಕೆ ಸೇರಿಕೊಂಡವರಿಗೆ ಮಣೆ ಹಾಕಲಾಗಿದೆ. ಈ ಬಗ್ಗೆ ಉಳಿದ ದಲಿತ ನಾಯಕರು ಪ್ರಶ್ನೆ ಮಾಡಿರುವ ಬಗ್ಗೆ ವರದಿ ಉಲ್ಲೇಖಿಸಲಾಗಿತ್ತು. ವಿಸ್ತಾರ ನ್ಯೂಸ್ ಸುದ್ದಿ ಮಾಡಿದ ಬೆನ್ನಲ್ಲೇ ದಲಿತ ಕಾಂಗ್ರೆಸ್ ಹಿರಿಯ ನಾಯಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ಇದರ ಜತೆಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಸುಧಾಮ್ ದಾಸ್ ಹೆಸರಿಗೆ ಕಾರ್ಯಕರ್ತರಿಂದಲೂ ಅಸಮಾಧಾನ ಕೇಳಿಬಂದಿತ್ತು. Who is Sudamadas ಎಂದು ಕಾರ್ಯಕರ್ತರು ಕೇಳಿದ್ದರು. ದಲಿತ ನಾಯಕರ ನಡೆಗೆ ಆಕ್ರೋಶವನ್ನು ಹೊರಹಾಕಿದ್ದರು.
ಇದನ್ನೂ ಓದಿ: Karnataka Politics : ಕಾಂಗ್ರೆಸ್‌ನಲ್ಲಿ ಸಿಡಿದ ಮತ್ತೊಂದು ಟೀಂ; ಬ್ಯಾಡ್ಮಿಂಟನ್ ಕ್ಲಬ್‌ನಲ್ಲಿ ರಹಸ್ಯ ಸಭೆ!
ಪಕ್ಷಕ್ಕೆ ಸುಧಾಮ್ ದಾಸ್ ಕೊಡುಗೆ ಏನು?
ಪಕ್ಷಕ್ಕೆ ಸುಧಾಮ್ ದಾಸ್ ಕೊಡುಗೆ ಏನು ಎಂದು ದಲಿತ ಸಚಿವರು ಈಗ ವಿರೋಧ ವ್ಯಕ್ತಪಡಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಪತ್ರ ಬರೆದಿದ್ದಾರೆ. ಇದರ ಜತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೂ ಪತ್ರ ಬರೆದಿದ್ದಾರೆ.
ಸುಧಾಮ್ ದಾಸ್ ಪರ ನಿಂತ ಡಿಕೆ ಬ್ರದರ್ಸ್!
ಈ ಬೆಳವಣಿಗೆ ಮಧ್ಯೆಯೂ ಸುಧಾಮ್ ದಾಸ್ ಪರವಾಗಿ ಡಿಕೆ ಬ್ರದರ್ಸ್ ನಿಂತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಡಿ.ಕೆ. ಬ್ರದರ್ಸ್‌ಗೆ ಸುಧಾಮ್ ದಾಸ್ ಸಹಾಯ ಮಾಡಿದ್ದಾರೆ. ಮುಂದೆಯೂ ಮಾಡುತ್ತಾರೆ. ಈ ಕಾರಣಕ್ಕಾಗಿ ಅವರ ಅವಶ್ಯಕತೆ ತಮಗಿದೆ ಎಂದು ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಇದೊಂದು ಬಿಟ್ಟು ಇನ್ನು ಯಾವುದೇ ರೀತಿಯಲ್ಲೂ ಸುಧಾಮ್ ದಾಸ್ ಪಕ್ಷಕ್ಕೆ ಕೊಡುಗೆ ನೀಡಿಲ್ಲ ಎಂಬ ವಿರೋಧ ವ್ಯಕ್ತವಾಗಿದೆ.
ಪತ್ರ ಬರೆದಿದ್ದು ನಿಜ: ಕೆ.ಎಚ್. ಮುನಿಯಪ್ಪ
ಸುಧಾಮ್ ದಾಸ್ ಹೆಸರು ಶಿಫಾರಸು ಮಾಡಿರುವ ನಿರ್ಧಾರವನ್ನು ನಾವು ವಿರೋಧ ಮಾಡಿದ್ದೇವೆ. ಹೈಕಮಾಂಡ್‌ಗೆ ಪತ್ರ ಬರೆದಿದ್ದು ನಿಜ. ಮೂರು ತಿಂಗಳ ಹಿಂದೆ ಅವರು ಪಕ್ಷ ಸೇರ್ಪಡೆ ಆಗಿದ್ದಾರೆ. ಇನ್ನಷ್ಟು ದಿನ ಪಕ್ಷದ ಕೆಲಸ ಮಾಡಲಿ ಎಂದು ಮನವಿ ಮಾಡಿದ್ದೇವೆ. ಮೂವತ್ತು ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡಿದವರು ಇದ್ದಾರೆ. ಅಂಥವರಿಗೆ ಅವಕಾಶ ಕೊಡಿ ಎಂದು ಕೇಳಿದ್ದೇವೆ. ಮುಂದಿನದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ದಲಿತ ಸಮುದಾಯದ ನಾಯಕ, ಸಚಿವ ಕೆ.ಎಚ್. ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Ration Card : ಹೊಸ ರೇಷನ್ ಕಾರ್ಡ್ ಸದ್ಯಕ್ಕಿಲ್ಲ; ಗೃಹಲಕ್ಷ್ಮಿ, ಅನ್ನಭಾಗ್ಯದ ಕನಸು ನನಸು ದೂರ!
ನನ್ನ ಅಭಿಪ್ರಾಯವನ್ನು ಹೈಕಮಾಂಡ್‌ಗೆ ಹೇಳುತ್ತೇನೆ: ಆರ್ ಬಿ ತಿಮ್ಮಾಪುರ
ಸುಧಾಮ್ ದಾಸ್ ವಿರುದ್ಧ ಹೈಕಮಾಂಡ್‌ಗೆ ಪತ್ರ ಬರೆದಿರುವುದು ಪಕ್ಷದ ಆಂತರಿಕ ವಿಚಾರವಾಗಿದೆ. ಬೇಕು, ಬೇಡ, ಸಮುದಾಯ, ಪ್ರಾಂತ್ಯ ಅದೆಲ್ಲವೂ ಪಕ್ಷದ ಒಳಗೆ ಚರ್ಚೆಯಾಗುತ್ತದೆ. ನಾನು ಅದನ್ನು ಮಾಧ್ಯಮದ ಮುಂದೆ ಹೇಳುವುದಿಲ್ಲ. ನನ್ನ ಅಭಿಪ್ರಾಯವನ್ನು ಹೈಕಮಾಂಡ್‌ಗೆ ಹೇಳುತ್ತೇನೆ. ನಾನು ಪಕ್ಷದ ಹಿರಿಯ ನಾಯಕರ ಜತೆ ಮಾತನಾಡುತ್ತೇನೆ. ನನ್ನ ಬೇಡಿಕೆಗಳನ್ನು ಪಕ್ಷದ ಹಿರಿಯ ನಾಯಕರ ಜತೆ ಚರ್ಚೆ ಮಾಡುತ್ತೇನೆ. ಪಕ್ಷ ಸಾಕಷ್ಟು ಚಿಂತಿಸಿ ನಿರ್ಧಾರ ಮಾಡಿರುತ್ತದೆ. ಯಾವ ಕಾರಣಕ್ಕೆ ಹೈಕಮಾಂಡ್ ನಿರ್ಧಾರ ಮಾಡಿದೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.