Site icon Vistara News

Karnataka Election: ಕರ್ನಾಟಕ ಚುನಾವಣೆ ಫಲಿತಾಂಶ ಪ್ರಕಟ; ಯಾರಾಗಲಿದ್ದಾರೆ ಮುಂದಿನ ಸಿಎಂ?

Karnataka Election Result

Karnataka Election Result

ಬೆಂಗಳೂರು: ಕಳೆದ ಕೆಲವು ತಿಂಗಳಿಂದ ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆಯು ಕೊನೆಯ (Karnataka Election) ಹಂತಕ್ಕೆ ಬಂದಿದೆ. ರಾಜ್ಯದ ಜನ ಹಾಗೂ ರಾಜಕಾರಣಿಗಳು ಕುತೂಹಲದಿಂದ ಕಾಯುತ್ತಿರುವ ಚುನಾವಣೆ ಫಲಿತಾಂಶ ಇಂದು (ಶನಿವಾರ) ಪ್ರಕಟವಾಗಲಿದೆ. ಮತಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸರ್ಕಾರ ರಚನೆ ಸೇರಿ ಹಲವು ವಿಷಯಗಳ ಕುರಿತು ಪಕ್ಷಗಳು ಸಾಲು ಸಾಲು ಸಭೆಯ ಮೂಲಕ ಚರ್ಚೆ ಮಾಡಿವೆ.

ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಮತ ಎಣಿಕೆಗೆ ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ರಾಜ್ಯದ ಒಟ್ಟು 34 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಮದ್ಯ ಮಾರಾಟ ನಿಷೇಧಗೊಳಿಸಲಾಗಿದೆ. ಹಾಗೆಯೇ, ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ನಿಷೇಧಾಜ್ಞೆಯೂ ಜಾರಿಯಲ್ಲಿರುವ ಜತೆಗೆ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ರಾಜಕೀಯ ಪಕ್ಷಗಳ ಸಭೆ, ರಣತಂತ್ರ

ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ, ಅದರಲ್ಲೂ ಸರ್ಕಾರ ರಚನೆಯ ಉತ್ಸಾಹದಲ್ಲಿರುವ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈಗ ಇನ್ನಿಲ್ಲದ ಚಟುವಟಿಕೆಯಲ್ಲಿ ತೊಡಗಿವೆ. ಚುನಾವಣೆ, ಮತಗಟ್ಟೆ ಸಮೀಕ್ಷೆ ಆಧರಿಸಿ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿವೆ. ಬಿಜೆಪಿಯು ಅಧಿಕಾರ ಉಳಿಸಿಕೊಳ್ಳಲು ತಂತ್ರ ರೂಪಿಸುತ್ತಿದ್ದರೆ, ಗದ್ದುಗೆ ಏರಲು ಕಾಂಗ್ರೆಸ್‌ ತವಕಿಸುತ್ತಿದೆ. ಇನ್ನು ಜಿ.ಟಿ.ದೇವೇಗೌಡ ಸೇರಿ ಹಲವರ ಜತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸಭೆ ನಡೆಸಿದ್ದಾರೆ. ಮೂರೂ ಪಕ್ಷಗಳಿಗೆ ಈಗ ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸವಾಲಾಗಿದೆ. ಇದರ ಮಧ್ಯೆಯೇ, ಪಕ್ಷೇತರವಾಗಿ ಸ್ಪರ್ಧಿಸಿರುವ ಪ್ರಮುಖರ ಜತೆಗೂ ಪಕ್ಷಗಳ ನಾಯಕರು ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೀಗಿದೆ ಮತಗಟ್ಟೆ ಸಮೀಕ್ಷೆ

ಇದನ್ನೂ ಓದಿ: Karnataka Election 2023: ಫಲಿತಾಂಶಕ್ಕೆ ಮುನ್ನ ತಾರಕಕ್ಕೆ ಏರಿದ ಬೆಟ್ಟಿಂಗ್‌ ಹುಚ್ಚು, ಜಮೀನೇ ಮಾರಾಟ!

ಶನಿವಾರ 224 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಬಹುಮತದ ಸರ್ಕಾರ ರಚಿಸಲು 113 ಮ್ಯಾಜಿಕ್‌ ನಂಬರ್‌ ಆಗಿದೆ. ಸದ್ಯ ಬಿಜೆಪಿ 116 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್‌ 69 ಹಾಗೂ ಜೆಡಿಎಸ್‌ 29 ಶಾಸಕರನ್ನು ಹೊಂದಿದೆ. ಒಬ್ಬ ಬಿಎಸ್‌ಪಿ ಶಾಸಕ, ಇಬ್ಬರು ಪಕ್ಷೇತರರು, ಒಬ್ಬ ಸ್ಪೀಕರ್‌ ಹಾಗೂ ಸಾವು ಮತ್ತು ರಾಜೀನಾಮೆಯಿಂದಾಗಿ 6 ಕ್ಷೇತ್ರಗಳಲ್ಲಿ ಶಾಸಕರು ಇಲ್ಲ.

ದಾಖಲೆಯ ಮತದಾನ

ಮೇ 1೦ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನದಲ್ಲಿ ಶೇ. 73.19 ವೋಟಿಂಗ್‌ ನಡೆದಿದೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ. ಇದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ದಾಖಲೆಯ ಮತದಾನವಾಗಿದೆ. 2018ರಲ್ಲಿ 72.1% ಮತದಾನ ನಡೆದಿದ್ದು, ಅದು 40 ವರ್ಷಗಳಲ್ಲೇ ಅತ್ಯಧಿಕ ಎಂಬ ದಾಖಲೆ ಬರೆದಿತ್ತು.

Exit mobile version