Site icon Vistara News

DK Shivakumar | ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದ ಕೋರ್ಟ್‌

DK shivakumar reacts to parameshwar statement over work pressure

ನವ ದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ಅವರ ವಿದೇಶ ಪ್ರವಾಸಕ್ಕೆ ದೆಹಲಿಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅನುಮತಿ ನೀಡಿದೆ. ವಾಣಿಜ್ಯೋದ್ಯಮ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಡಿಸೆಂಬರ್‌ 1ರಿಂದ 8ರವರೆಗೆ ದುಬೈ ಪ್ರವಾಸ ಕೈಗೊಳ್ಳಲು ಅನುಮತಿಸುವಂತೆ ಕೋರಿ ಶಿವಕುಮಾರ್‌ ಅವರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಕಾಸ್‌ ಧಲ್‌ ಅವರು ಷರತ್ತಿಗೆ ಒಳಪಟ್ಟು ಅನುಮತಿಸಿದ್ದಾರೆ.

ದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ನಲ್ಲಿ ಜಪ್ತಿ ಮಾಡಲಾಗಿದ್ದ 8.59 ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದು, ಶಿವಕುಮಾರ್‌ ಸದ್ಯ ಜಾಮೀನಿನ ಮೇಲೆ ಇದ್ದಾರೆ.

ವಿದೇಶಕ್ಕೆ ಯಾಕೆ ಹೋಗಬೇಕು?
ಶಿವಕುಮಾರ್‌ ಅವರನ್ನು ಯುಎಇಯ 51ನೇ ರಾಷ್ಟ್ರೀಯ ದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ. ಡಿಸೆಂಬರ್‌ 1ರಿಂದ 10ರವರೆಗೆ ನಡೆಯುವ ವಾಣಿಜೋದ್ಯಮ ಸಭೆಗೆ ಅವರನ್ನು ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ. ಕಳೆದ ನವೆಂಬರ್‌ 19ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯವು ಡಿಸೆಂಬರ್‌ 1ರಿಂದ 8ವರೆಗೆ ದುಬೈ ಪ್ರವಾಸ ಕೈಗೊಳ್ಳಲು ಅನುಮತಿಸಿದೆ. ಜನಪ್ರತಿನಿಧಿ ನ್ಯಾಯಾಲಯದ ಅನುಮತಿ ಬೇಕಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಅವರ ಪರ ವಕೀಲ ಮಯಾಂಕ್‌ ಜೈನ್‌ ಕೋರ್ಟ್‌ಗೆ ಮನವಿ ಮಾಡಿದ್ದರು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ವಕೀಲರು “ಶಿವಕುಮಾರ್‌ ಅವರು ಗಂಭೀರವಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಅವರಿಗೆ ವಿದೇಶ ಪ್ರಯಾಣಕ್ಕೆ ಅನುಮತಿಸಬಾರದು” ಎಂದು ಆಕ್ಷೇಪಿಸಿದರು. ಆದರೆ, ಕೋರ್ಟ್‌ ಅಂತಿಮವಾಗಿ ಷರತ್ತುಬದ್ಧ ಅನುಮತಿ ನೀಡಿದೆ.

ಷರತ್ತುಗಳೇನು?
-ಪ್ರವಾಸ ಆರಂಭಿಸುವುದಕ್ಕೂ ಮುನ್ನ ಅರ್ಜಿದಾರ ಶಿವಕುಮಾರ್‌ ಅವರು ರೂ. ಐದು ಲಕ್ಷ ಭದ್ರತಾ ಠೇವಣಿಯನ್ನು ನ್ಯಾಯಾಲಯಕ್ಕೆ ನೀಡಬೇಕು.
-ಅರ್ಜಿದಾರರು ದುಬೈಗೆ ತೆರಳುವ ಮತ್ತು ಮರಳುವ ದಿನಾಂಕ, ಅಲ್ಲಿ ಉಳಿದುಕೊಳ್ಳುವ ವಿಳಾಸ, ಸಂಪರ್ಕ ಸಂಖ್ಯೆ ನೀಡಬೇಕು.
-ಸಹ ಆರೋಪಿಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಬಾರದು.
-ವಿದೇಶ ಪ್ರವಾಸದಲ್ಲಿರುವಾಗ ಪ್ರಕರಣದಲ್ಲಿನ ಸಾಕ್ಷಿಗಳನ್ನು ಸಂಪರ್ಕಿಸುವ ಯತ್ನ ಮಾಡಬಾರದು.
-ವಿದೇಶದಿಂದ ಮರಳಿದ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಬೇಕು.

ಇದನ್ನೂ ಓದಿ | DK Shivakumar | ಜಡ್ಜ್ ಏನು ಹೇಳುತ್ತಾರೋ ಅದನ್ನು ನಾವು ಕೇಳಬೇಕು, ಅವರು ಏನು ಕೊಟ್ಟರೂ ಪ್ರಸಾದವೇ: ಡಿಕೆಶಿ

Exit mobile version