ಧಾರವಾಡ: ಧಾರವಾಡವನ್ನು ಪ್ರವೇಶ ಮಾಡಬೇಕೆಂಬ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ನಿರಾಸೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಸಂಬಂಧ ಪ್ರಯತ್ನ ಮಾಡಿ ಸೋತಿದ್ದ ವಿನಯ್‌ಗೆ ಈಗಲೂ ಹಿನ್ನಡೆಯಾಗಿದೆ. ಜೂನ್ 20ರ ಮಂಗಳವಾರ ನಡೆಯಲಿರುವ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಮೇಯರ್ ಚುನಾವಣೆಗಾಗಿ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulakarni) ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪ್ರವೇಶ ನಿರಾಕರಿಸಿ ಆದೇಶಿಸಿದೆ.
ಪಾಲಿಕೆ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವ ಸಂಬಂಧ ಧಾರವಾಡವನ್ನು ಪ್ರವೇಶಿಸಬೇಕು. ಈ ಹಿನ್ನೆಲೆಯಲ್ಲಿ ತಮಗೆ ಅನುಮತಿ ನೀಡಿ ಎಂದು ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಜಯಂತಕುಮಾರ್ ಅವರು ಈ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ಮಳೆಗಾಲ ಬಂದ್ರೂ ನೀರಿಲ್ಲ! ಬಾಲಕನೇ ಇಲ್ಲಿ ನೀರಿನ ಟ್ರ್ಯಾಕ್ಟರ್ ಚಾಲಕ; ಅಪಘಾತಕ್ಕೆ ನೀರುಗಂಟಿ ಸಾವು
ಏನಿದು ಅರ್ಜಿ?
ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಜೂನ್ 20ರಂದು ಚುನಾವಣೆ ನಡೆಯಲಿದೆ. ಇಲ್ಲಿ ಶಾಸಕರಾದವರಿಗೂ ಮತದಾನದ ಅವಕಾಶ ಇದೆ. ಆದರೆ, ಇಲ್ಲಿನ ಮತದಾನ ಪ್ರಕ್ರಿಯೆಯು ಕೈ ಎತ್ತುವ ಮೂಲಕ ನಡೆಯಲಿದೆ. ಈ ಕಾರಣಕ್ಕಾಗಿ ತಾವು ಮತ ಚಲಾಯಿಸಬೇಕೆಂದರೆ ಧಾರವಾಡವನ್ನು ಪ್ರವೇಶ ಮಾಡಲೇಬೇಕು. ಹೀಗಾಗಿ ತಮಗೆ ಅವಕಾಶ ಮಾಡಿಕೊಡಿ ಎಂದು ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೂ.17ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು.
ಅನುಮತಿ ನೀಡದಂತೆ ಸಿಬಿಐ ವಾದ
ಶಾಸಕ ವಿನಯ್ ಕುಲಕರ್ಣಿ ಅವರಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಈ ಹಿಂದೆಯೂ ಧಾರವಾಡ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಅಲ್ಲದೆ, ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದ ಸಾಕ್ಷಿಯ ತಾಯಿ ಈಗ ನಗರ ಪಾಲಿಕೆ ಸದಸ್ಯರಾಗಿದ್ದಾರೆ. ಅಲ್ಲದೆ, ವಿನಯ್ ಕುಲಕರ್ಣಿ ಅವರು ಈಗ ಶಾಸಕರಾಗಿದ್ದಾರೆ. ಹೀಗಾಗಿ ಅವರು ಮತ್ತಷ್ಟು ಪ್ರಭಾವಿಯಾಗಿದ್ದಾರೆ. ಈ ಕಾರಣಕ್ಕಾಗಿ ಅವರಿಗೆ ಧಾರವಾಡ ಪ್ರವೇಶಿಸುವಂತೆ ಅನುಮತಿ ನೀಡಬಾರದು ಎಂದು ಸಿಬಿಐ ಎಸ್ಪಿಪಿ ಗಂಗಾಧರ ಶೆಟ್ಟಿ ವಾದ ಮಂಡಿಸಿದ್ದರು. ಅವರ ವಾದವನ್ನು ಪುರಸ್ಕರಿಸಿ ಕೋರ್ಟ್, ಪ್ರವೇಶ ನಿರಾಕರಿಸಿ ಆದೇಶಿಸಿದೆ.
ಮುಳುವಾಗಿರುವ ಯೋಗೀಶ್ ಗೌಡ ಕೊಲೆ ಪ್ರಕರಣ
ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಆರೋಪಿಗಳಾಗಿದ್ದಾರೆ. ಈ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಬಂಧನಕ್ಕೂ ಒಳಗಾಗಿದ್ದರು. ಕೊನೆಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಈ ವೇಳೆ ನ್ಯಾಯಾಲಯದ ಅನುಮತಿ ಪಡೆಯದೇ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬುದೂ ಸೇರಿ 4 ಷರತ್ತುಗಳನ್ನು ವಿಧಿಸಿತ್ತು.
ಇದನ್ನೂ ಓದಿ: Viral News: ರೈಟ್ ರೈಟ್..! ಅಯ್ಯೋ ಇಲ್ಲಿ ಬಸ್ ನಿಲ್ಸೋದೆ ಇಲ್ಲ; ಬಸ್‌ಗೆ ಅಡ್ಡ ಬಂದು ಬುಸ್‌ಗುಟ್ಟಿದ ರೇಣುಕಾಚಾರ್ಯ!
ವಿಧಾನಸಭೆಯಲ್ಲೂ ಸಿಕ್ಕಿರಲಿಲ್ಲ ಪ್ರವೇಶ
ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಹೀಗಾಗಿ ತಾವು ಪ್ರಚಾರ ಮಾಡುವುದು ಸೇರಿದಂತೆ ಮತ ಚಲಾವಣೆಗಾಗಿ ಧಾರವಾಡವನ್ನು ಪ್ರವೇಶಿಸಲು ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅನುಮತಿಯನ್ನು ನಿರಾಕರಿಸಿತ್ತು. ಹೀಗಾಗಿ ಇದನ್ನು ಪ್ರಶ್ನಿಸಿದ್ದ ವಿನಯ್ ಕುಲಕರ್ಣಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಅರ್ಜಿ ವಜಾ ಆಗಿತ್ತು. ಕೊನೆಗೆ ಅನಿವಾರ್ಯವಾಗಿ ಧಾರವಾಡ ಜಿಲ್ಲೆಯಿಂದ ಹೊರಗೆ ಇದ್ದುಕೊಂಡೇ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದೂ ಬಂದಿದ್ದಾರೆ.