Site icon Vistara News

Lokayukta Raid : ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ 5 ದಿನ ಲೋಕಾಯುಕ್ತ ಕಸ್ಟಡಿಗೆ, ಕುಟುಂಬದ ಭೇಟಿ ಬಗ್ಗೆ ನಾಳೆ ನಿರ್ಧಾರ

Madalu lokayukta

#image_title

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಟೆಂಡರ್‌ ವಿಚಾರದಲ್ಲಿ ನಡೆದ ಲಂಚ ಹಗರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನ ಲೋಕಾಯುಕ್ತ ಪೊಲೀಸರ ಕಸ್ಟಡಿ (Lokayukta Raid) ವಿಧಿಸಿದೆ.

ಭ್ರಷ್ಟಾಚಾರ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠವು ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರಾಕರಿಸಿದ ಬೆನ್ನಲ್ಲೇ ಸೋಮವಾರ ವಿರೂಪಾಕ್ಷಪ್ಪ ಅವರನ್ನು ತುಮಕೂರಿನ ಕ್ಯಾತ್ಸಂದ್ರ ಟೋಲ್‌ ಬಳಿ ಶಾಸಕರನ್ನು ಪೊಲೀಸರು ಬಂಧಿಸಿದ್ದರು. ಅವರು ಕಾರಿನ ಮೂಲಕ ಬೆಂಗಳೂರಿಗೆ ಬರುತ್ತಿದ್ದಾಗ ದಾಳಿ ಮಾಡಿ ಸೆರೆ ಹಿಡಿಯಲಾಗಿತ್ತು. ಸೋಮವಾರ ಸಂಜೆಯಿಂದ ಲೋಕಾಯುಕ್ತ ಕಚೇರಿಯಲ್ಲೇ ಇದ್ದ ವಿರೂಪಾಕ್ಷಪ್ಪ ಅವರನ್ನು ಮಂಗಳವಾರ ಸಂಜೆ ಮೂರು ಗಂಟೆಗೆ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಐದು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದರು.

ಬೆಂಗಳೂರಿನ ಕ್ರೆಸೆಂಟ್‌ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಅವರ ಪುತ್ರ, ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಮಾಡಾಳ್‌ ಪ್ರಶಾಂತ್‌ ಅವರು 40 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದರು. ಇದು ಕೆ.ಎಸ್‌ಡಿಎಲ್‌ನ ಗುತ್ತಿಗೆ ಪಡೆಯಲು ನೀಡಿದ ಲಂಚ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ದೊಡ್ಡ ಹಗರಣವೊಂದು ಬೆಳಕಿಗೆ ಬಂದಂತಾಗಿತ್ತು. ಪ್ರಶಾಂತ್‌ ಮಾಡಾಳು ಮತ್ತು ಇತರರನ್ನು ಲೋಕಾಯುಕ್ತ ಪೊಲೀಸರು ಅಂದೇ ಅರೆಸ್ಟ್‌ ಮಾಡಿತ್ತು. ಪ್ರಶಾಂತ್‌ ಮಾಡಾಳು ಬಂಧನದ ವಿಚಾರ ತಿಳಿಯುತ್ತಿದ್ದಂತೆಯೇ ಮಾಡಾಳ್‌ ವಿರೂಪಾಕ್ಷಪ್ಪ ಅವರು ತಮ್ಮ ಹಿರಿಯ ಮಗ ಮಾಡಾಳ್‌ ಮಲ್ಲಿಕಾರ್ಜುನ ಜತೆ ಅಂದೇ ನಾಪತ್ತೆಯಾಗಿದ್ದರು. ಮರುದಿನ ಪ್ರಶಾಂತ್‌ ಮಾಡಾಳ್‌ ಮತ್ತು ವಿರೂಪಾಕ್ಷಪ್ಪ ಮಾಡಾಳ್‌ ಅವರ ಬೆಂಗಳೂರಿನ ಮನೆಗಳು, ಚನ್ನಗಿರಿಯ ಮನೆಗೆ ದಾಳಿ ಮಾಡಿ ಹಣ ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು.

ಈ ನಡುವೆ, ಲೋಕಾಯುಕ್ತ ಪೊಲೀಸರು ಶಾಸಕ ಮಾಡಾಳ್‌ ಅವರ ಪತ್ತೆಗಾಗಿ ಪ್ರಯತ್ನಿಸುತ್ತಿದ್ದಂತೆಯೇ ಅವರು ಮಧ್ಯಂತರ ಜಾಮೀನು ಪಡೆದು ಬಂಧನದಿಂದ ತಪ್ಪಿಸಿಕೊಂಡಿದ್ದರು. ಬಳಿಕ ಅವರು ನಿಯಮಿತವಾಗಿ ವಿಚಾರಣೆಗೆ ಹಾಜರಾಗುತ್ತಿದ್ದರೂ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಬಂಧಿಸಿ ವಿಚಾರಣೆ ನಡೆಸಬೇಕಾದ ಅನಿವಾರ್ಯತೆಯನ್ನು ಲೋಕಾಯುಕ್ತ ಪೊಲೀಸರು ಸ್ಪಷ್ಟಪಡಿಸಿದ್ದರು. ಅದರೆ, ಕೋರ್ಟ್‌ ಅವಕಾಶ ಕೊಟ್ಟಿರಲಿಲ್ಲ. ಬಳಿಕ ಮಾಡಾಳು ವಿರೂಪಾಕ್ಷಪ್ಪ ಅವರೇ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದ ಬೆನ್ನಿಗೇ ಅವರನ್ನು ಬಂಧಿಸಲಾಗಿದೆ.

ಸೋಮವಾರ ಬಂಧನದ ಬಳಿಕವೂ ಮಾಡಾಳ್‌ ಅವರು ಹೆಚ್ಚಿನ ಮಾಹಿತಿಯನ್ನೇನೂ ಬಿಟ್ಟುಕೊಟ್ಟಿಲ್ಲ ಎನ್ನಲಾಗಿದೆ. ಅವರನ್ನು ಜನಪ್ರತಿನಿಧಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಲೋಕಾಯುಕ್ತ ಅಧಿಕಾರಿಗಳ ಪರ ವಕೀಲರಾದ ಸಂತೋಷ್‌ ನಗರಾಳೆ ಅವರು 10 ದಿನದ ಕಸ್ಟಡಿಗೆ ಕೇಳಿದ್ದರು. ಆದರೆ, ಮಾಡಾಳ್‌ಗೆ ಹೃದಯ ಸಂಬಂಧ ಆರೋಗ್ಯ ಸಮಸ್ಯೆ ಇದೆ. ಅದರಲ್ಲೂ 74 ವರ್ಷ ವಯಸ್ಸಾಗಿದೆ. ಕಾಲ ಕಾಲಕ್ಕೆ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಮಾಡಾಳ್ ಪರ ವಕೀಲರಾದ ಸ್ವಾಮಿನಿ ಗಣೇಶ್‌ ಆಕ್ಷೇಪಣೆ ಸಲ್ಲಿಸಿದರು. ವಾದ ಆಲಿಸಿದ ನ್ಯಾಯಾಧೀಶರು ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.

ಕುಟುಂಬದ ಜತೆ ಮಾತುಕತೆ ನಾಳೆ ತೀರ್ಮಾನ

ಮಾಡಾಳು ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ ಸಂದರ್ಭದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ ವಕೀಲ ಸ್ವಾಮಿನಿ ಗಣೇಶ್‌ ಅವರು, ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಈಗಾಗಲೇ ಆರೋಗ್ಯ ಸಮಸ್ಯೆ ಇದೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಲೋಕಾಯುಕ್ತ ಪರ ವಕೀಲರು ಆರೋಪಿಗೆ ಅಗತ್ಯವಾದ ಚಿಕಿತ್ಸೆ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದರು.

ವಾದ ಮುಂದುವರಿದ ಮಾಡಾಳ್ ಪರ‌ ವಕೀಲರು, ವಿರೂಪಾಕ್ಷಪ್ಪ ಅವರಿಗೆ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡಿ ಎಂದು ಕೇಳಿದರು. ಅರ್ಜಿದಾರರು ಜನಗಳ ಮಧ್ಯೆ ಇದ್ದವರು. ಈಗ ಏಕಾಏಕಿ ಒಂದು ಕಡೆ ಕೂರಿಸಿದರೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅದಕ್ಕೆ ಎರಡು ದಿನಕ್ಕೆ ಒಮ್ಮೆ ಭೇಟಿಗೆ ಅವಕಾಶ ನೀಡಿ ಎಂದು ಕೇಳಿಕೊಂಡರು. ಆಗ ಕೋರ್ಟ್‌ ಕುಟುಂಬ ಸದಸ್ಯರ ಭೇಟಿ ಕುರಿತು ಬುಧವಾರ ನಿರ್ಧಾರ ಪ್ರಕಟಿಸುವುದಾಗಿ ಹೇಳಿತು.

ಇದನ್ನೂ ಓದಿ : Lokayukta Raid: ಶಾಸಕ ಮಾಡಾಳು ಲೋಕಾಯುಕ್ತ ಕಚೇರಿಯಲ್ಲೇ ಲಾಕ್‌, ತಡರಾತ್ರಿವರೆಗೂ ವಿಚಾರಣೆ

Exit mobile version