Site icon Vistara News

Covid-19 News | ಒಂದೇ ದಿನ ಆರು ಮಂದಿ ಸಾವು; ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ ಸಚಿವ ಸುಧಾಕರ್‌

Covid-19 News

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌-೧೯ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಗುರುವಾರ ಚಿಕಿತ್ಸೆ ಫಲಿಸದೆ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ಒಟ್ಟು 1,691 ಹೊಸ ಪ್ರಕರಣಗಳು ಪತ್ತೆ ಯಾಗಿವೆ.

ಒಟ್ಟಾರೆ ರಾಜ್ಯದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 40,134ಕ್ಕೆ ಏರಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 40,26,085 ಕ್ಕೆ ಏರಿಕೆಯಾಗಿದೆ. ಗುರುವಾರ ಗುಣಮುಖರಾಗಿ 1,982 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 10,054 ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಗುರುವಾರ 1,225 ಹೊಸ ಪ್ರಕರಣಗಳು ಪತ್ತೆಯಾಗಿವೆ. ಬಾಗಲಕೋಟೆಯಲ್ಲಿ 06, ಬಳ್ಳಾರಿ 58, ಬೆಳಗಾವಿ 29, ಬೆಂಗಳೂರು ಗ್ರಾಮಾಂತರ 11, ಬೀದರ್ 02, ಚಾಮರಾಜನಗರ 27, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 19, ಚಿತ್ರದುರ್ಗ 04, ದಕ್ಷಿಣಕನ್ನಡ 06, ದಾವಣಗೆರೆ 19, ಧಾರವಾಡ 42, ಗದಗ 02, ಹಾಸನ14, ಹಾವೇರಿ10, ಕಲಬುರಗಿ 15, ಕೊಡಗು 07, ಕೋಲಾರ 07, ಕೊಪ್ಪಳ 03, ಮಂಡ್ಯ 24, ಮೈಸೂರು 88, ರಾಯಚೂರು 09, ರಾಮನಗರ 05, ಶಿವಮೊಗ್ಗ 22, ತುಮಕೂರು 07, ಉಡುಪಿ 08, ಉತ್ತರಕನ್ನಡ 07, ವಿಜಯಪುರ 03 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ.

ತಜ್ಞರ ಸಮಿತಿ ಸಭೆ
ರಾಜ್ಯದಲ್ಲಿ ಕೋವಿಡ್‌-೧೯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆರೋಗ್ಯ ಸಚಿವ ಸುಧಾಕರ್‌ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಭೆ ಗುರುವಾರ ನಡೆಯಿತು. ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರುತ್ತಿರುವುದರಿಂದ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿದೆ.

ಸ್ವಾತಂತ್ರ್ಯೋತ್ಸವ ಹಾಗೂ ಹಬ್ಬಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತೂ ಸಭೆಯಲ್ಲಿ ಚರ್ಚಿಸಲಾಗಿದೆ. ಗಡಿಭಾಗದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತೂ ಚರ್ಚೆ ನಡೆದಿದೆ. ಸಭೆಯ ನಂತರ ಮಾತನಾಡಿದ ಸಚಿವ ಸುಧಾಕರ್‌ ಎಲ್ಲರೂ ಬೂಸ್ಟರ್‌ ಡೋಸ್‌ ತೆಗೆದುಕೊಳ್ಳಬೇಕು. ಕೋವಿಡ್‌-೧೯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಮರೆಯಬಾರದು ಎಂದು ಮನವಿ ಮಾಡಿದ್ದಾರೆ.

ಮಾಸ್ಕ್‌ ಧರಿಸುವುದು ಕಡ್ಡಾಯ
ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆರೋಗ್ಯ ಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಆರೋಗ್ಯ ಸೌಧಕ್ಕೆ ಭೇಟಿ ನೀಡುವ ಸಾರ್ವಜನಿಕರು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕಚೇರಿಯಲ್ಲಿ ಮಾಸ್ಕ್‌ ಧರಿಸದೇ ಇದ್ದವರಿಗೆ 250 ರೂ. ದಂಡ ವಿಧಿಸಲಾಗುವುದು ಎಂದು ಇಲಾಖೆಯ ಆಯುಕ್ತ ರಂದೀಪ್‌ ಡಿ. ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ| Covid Fear | ಕರ್ನಾಟಕ ಸೇರಿದಂತೆ 7 ರಾಜ್ಯಗಳಿಗೆ ಕೇಂದ್ರದಿಂದ ಕೋವಿಡ್‌ ಅಲರ್ಟ್‌!

Exit mobile version