ಬೆಂಗಳೂರು: ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶನಿವಾರ ಬೂಸ್ಟರ್ ಲಸಿಕಾ (Covid 19 Vaccine) ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸಾಥ್ ನೀಡಿದರು.
ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಉತ್ತಮ ಸಾಧನೆ ಮಾಡಿದ್ದು, ಮುಂದಿನ 75 ದಿನಗಳಲ್ಲಿ 18 ರಿಂದ 59 ವಯೋಮಿತಿಯ ನಾಲ್ಕೂವರೆ ಕೋಟಿ ಜನರಿಗೆ ಉಚಿತ ಬೂಸ್ಟರ್ ಡೋಸ್ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆಎಂದರು.
ಕರ್ನಾಟಕ ಶೇ.100ಕ್ಕೂ ಅಧಿಕ ಪ್ರಮಾಣದಲ್ಲಿ ಎರಡೂ ಡೋಸ್ ಲಸಿಕೆ ನೀಡಿದೆ. 3ನೇ ಡೋಸ್ ಅನ್ನು ಕೂಡ ಮುಂದಿನ 75 ದಿನಗಳಲ್ಲಿ ರಾಜ್ಯದ 18 ರಿಂದ 59 ವಯೋಮಿತಿಯ ನಾಲ್ಕೂವರೆ ಕೋಟಿ ಜನರಿಗೆ ಕೊಡಬೇಕು ಅನ್ನುವ ಗುರಿ ಇದೆ. ಈ ಗುರಿ ತಲುಪಲು ಪೂರಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ರಾಜ್ಯದ ವಿವಿಧೆಡೆ ಏಳೂವರೆ ಸಾವಿರ ಸರ್ಕಾರಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನರು ಇದರ ಸಂಪೂರ್ಣ ಲಾಭ ಪಡೆಯಬೇಕು ಎಂದು ಕೋರಿದರು.
ಇದನ್ನೂ ಓದಿ | 92% ಮಂದಿ ಇನ್ನೂ ಕೋವಿಡ್ ಬೂಸ್ಟರ್ ಡೋಸ್ ಪಡೆದಿಲ್ಲ!
ಉದಾಸೀನ ಬೇಡ
ಇತ್ತೀಚೆಗೆ ಅನೇಕರಿಗೆ ಕೋವಿಡ್ ಬಂದರೆ ಏನಾಗಲಿದೆ ಅನ್ನುವ ಉದಾಸೀನ ಇದೆ. 2 ಡೋಸ್ ಲಸಿಕೆ ತೆಗೆದುಕೊಂಡು 6 ತಿಂಗಳುಗಳ ಮೇಲಾಗಿದೆ. ಇನ್ನೂ ಕೆಲವರು 2ನೇ ಡೋಸ್ ತೆಗೆದುಕೊಂಡು 1 ವರ್ಷದ ಮೇಲಾಗಿದೆ. ಇಂತಹವರಿಗೆ ಅಪಾಯ ಇರುತ್ತದೆ. ಹೀಗಾಗಿ ಲಸಿಕಾಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಇಲ್ಲಿಯ ತನಕ ಕೋವಿಡ್ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡಲು ಲಸಿಕಾಕರಣದ ವೇಗವೇ ಕಾರಣವಾಗಿದೆ. ಹೀಗಾಗಿ ಎಲ್ಲರೂ ಬೂಸ್ಟರ್ ಡೋಸ್ ಪಡೆದುಕೊಳ್ಳಿ ಎಂದು ಸುಧಾಕರ್ ಮನವಿ ಮಾಡಿದರು.
ನಮ್ಮ ಕ್ಲಿನಿಕ್ ಆರಂಭ
ಮುಖ್ಯಮಂತ್ರಿಗಳು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಶೀಘ್ರದಲ್ಲಿ ರಾಜ್ಯದಲ್ಲಿ 470 ಕಡೆಗಳಲ್ಲಿ ನಮ್ಮ ಕ್ಲಿನಿಕ್ ಆರಂಭವಾಗಲಿದೆ. ಮುಂದಿನ ಮೂರು ತಿಂಗಳ ಒಳಗೆ ಈ ಕ್ಲಿನಿಕ್ಗಳು ಆರಂಭವಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ 243 ನಮ್ಮ ಕ್ಲಿನಿಕ್ ಇರಲಿದೆ. ಜುಲೈ 28ಕ್ಕೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮೊದಲ ಕ್ಲಿನಿಕ್ ಆರಂಭಿಸಲು ಹಗಲಿರುಳು ಶ್ರಮಿಸಲಾಗುತ್ತಿದೆ ಎಂದರು.
ಉಚಿತ ಲಸಿಕೆ ಯಾವ ದೇಶದಲ್ಲೂ ಇಲ್ಲ
ಯಾವ ದೇಶದಲ್ಲೂ ಕೊರೊನಾ ಉಚಿತ ಲಸಿಕೆ ನೀಡಿಲ್ಲ. ವಿದೇಶದಲ್ಲಿ ಕೊರೊನಾ ಪರೀಕ್ಷೆ ಮಾಡಲು ಕೂಡ 10,000 ರೂ. ಕೊಡಬೇಕು. ಆದರೆ, 133 ಕೋಟಿ ಜನರಿರುವ ದೇಶದಲ್ಲಿ ಕೊರೊನಾ ಟೆಸ್ಟ್, ಲಸಿಕೆ ಎಲ್ಲವೂ ಉಚಿತ. ಜತೆಗೆ ಕೊರೊನಾ ನಿರ್ವಹಣೆ ಮಾಡಲು ಶ್ರಮಿಸಿದ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸ್ವಯಂ ಸೇವಕರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಸುಧಾಕರ್ ತಿಳಿಸಿದರು.
ಅತ್ಯಂತ ದೊಡ್ಡ ಅಭಿಯಾನ- ಸಿಎಂ
ಜಗತ್ತಿನಲ್ಲೇ ಅತ್ಯಂತ ದೊಡ್ಡ ಲಸಿಕಾ ಅಭಿಯಾನ ಇದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಕೇಂದ್ರ ಸರ್ಕಾರದ ಸಹಾಯದೊಂದಿಗೆ ರಾಜ್ಯದಲ್ಲಿ ಬೂಸ್ಟರ್ ಡೋಸ್ ಕೊಡಲಾಗುತ್ತಿದೆ. ಕೋವಿಡ್ ನಿರ್ಲಕ್ಷ್ಯ ಮಾಡದೆ ಅದರ ವಿರುದ್ಧ ಹೋರಾಡಬೇಕಿದೆ. ಕೋವಿಡ್ ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಪಾತ್ರವಹಿಸಿದೆ. ಹೀಗಾಗಿ ಪ್ರತಿಯೊಬ್ಬರು ಮೂರು ಡೋಸ್ ಲಸಿಕೆ ಪಡೆಯುವಂತೆ ಮನವಿ ಮಾಡಿದರು.
ಇದನ್ನೂ ಓದಿ | ನಿಮಗೆ 18 ವರ್ಷ ಆಗಿದೆಯೆ? ಜುಲೈ 15ರಿಂದ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಉಚಿತ